Thursday, March 7, 2019

ಸರಪಳಿಗಳು

ನಮ್ಮ  ಹುಟ್ಟು ಇಲ್ಲ
ನಮ್ಮ ಕೈಯ್ಯಲ್ಲಿ
ತಂದೆ ತಾಯಿ ಮನೆತನವೆಂಬ
ಸರಪಳಿಗಳು ಬಿಗಿದವು
ಕಣ್ಣು ತೆರೆದು ನೋಡುತ್ತಲೇ

ದೊರೆತ ದೇಹದ ಆಯ್ಕೆಯಿಲ್ಲ
ನಮ್ಮ ಕೈಯ್ಯಲ್ಲಿ
ದೈಹಿಕ ನ್ಯೋನತೆಗಳೆಂಬ
ಸರಪಳಿಗಳು ಬಿಗಿದವು
ಮೊದಲ ಹೆಜ್ಜೆ ಇಡುತ್ತಲೇ

ನಾವುಂಡ ಊಟ ಇರಲಿಲ್ಲ
ನಮ್ಮ ಕೈಯಲ್ಲಿ
ಆಹಾರದ ದೋಷಗಳ
ಸರಪಳಿಗಳು ಬಿಗಿದವು
ಮೊದಲ ತುತ್ತು ತಿನ್ನುತ್ತಲೇ

ನಾವು ಬೆಳೆದ ವಾತಾವರಣ
ಇರಲಿಲ್ಲ
ನಮ್ಮ ಕೈಯಲ್ಲಿ
ಮಾನಸಿಕ ದೋಷಗಳ
ಸರಪಳಿಗಳು ಬಿಗಿದವು
ಮೊದಲ ಆಟ ಆಡುತ್ತಲೇ

ಕಲಿತ ಶಾಲೆ ಓದಿದ ಪುಸ್ತಕಗಳು
ಇರಲಿಲ್ಲ
ನಮ್ಮ ಕೈಯಲ್ಲಿ
ಅಜ್ಞಾನದ
ಸರಪಳಿಗಳು ಬಿಗಿದವು
ಮೊದಲ ಪಾಠ ಕಲಿಯುತ್ತಲೇ

ಸಿಕ್ಕ ಮೊದಲ ಕೆಲಸ
ಆದ ಮದುವೆ
ಇರಲಿಲ್ಲ ಹೆಚ್ಚಿನ ಆಯ್ಕೆ
ನಮ್ಮ ಕೈಯಲ್ಲಿ
ಸಂಸಾರದ
ಸರಪಳಿಗಳು ಬಿಗಿದವು
ಸ್ವಾತಂತ್ರದ ಕಿಟಕಿ ತೆರೆಯುತ್ತಲೇ

ಮಾಡ ಬೇಕಾದ ಕೆಲಸ
ಕೆಲಸದ ರೀತಿ ಸಮಯ
ಇರಲಿಲ್ಲ ಆಯ್ಕೆ
ನಮ್ಮ ಕೈಯಲ್ಲಿ
ಸಂಬಳದ
ಸರಪಳಿಗಳು ಬಿಗಿದವು
ಸಾಲದ ಖಾತೆ ತೆರೆಯುತ್ತಲೇ

ನಾಲ್ಕು ದಶಕಗಳೇ
ಕಳೆದವು ಈ ಸರಪಳಿಗಳ
ಬಂಧನದಲಿ
ಆದರಿನ್ನೂ ಹಾಗಲ್ಲ
ಕಳಚಿದೆ ಒಂದೊಂದೇ ಸರಪಳಿ
ಉಸಿರಾಡಬೇಕಿದೆ
ನಡೆಯಬೇಕಿದೆ ಓಡಬೇಕಿದೆ
ಎಲ್ಲಕಿಂತ ಹೆಚ್ಚಾಗಿ
ಮುಕ್ತವಾಗಿ ಬದುಕಬೇಕಿದೆ


Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...