Saturday, February 25, 2017

ಅರ್ಥ

ಜೀವನದ
ಪ್ರತಿ
ಕ್ಷಣಕೂ
ಅರ್ಥ
ತುಂಬುವ
ತವಕದಲಿ
ಅವನ
ಜೀವನವೆ
ಅರ್ಥಹೀನ
ಆಗಿದ್ದು
ಅವನ
ಅರಿವಿಗೆ
ಬರಲೇ
ಇಲ್ಲ
 ಬುಡ ಬುಡ್ಕಿ ಬಾಬಾ

ಇರಬೇಕು

ಮನದ ಸಮುದ್ರದಲಿ ಎದ್ದ
ಚಂಡಮಾರುತಕೆ ಹೋಗಿ
ಬಿದ್ದಿದ್ದೆ ಅದ್ಯಾರು ಇಲ್ಲದ
ಮರಳುಗಾಡಿನಂತ ನಡುಗಡ್ದೆಯಲಿ
ಸುತ್ತಲೂ ತುಂಬಿತ್ತು ಕಗ್ಗತ್ತಲು
ತೆರೆಗಳ ಕೊರೆತಕಿಂತ ಹೆಚ್ಚಾಗಿತ್ತು
ಹಸಿವಿನ ಕೊರೆತ
ಮನದಾಳದಲ್ಲಿ ಅಡಗಿದ್ದ
ನೋವೆಂಬ ಗಡ್ಡೆ ಗೆಣಸುಗಳ
ತಗೆದೆ ಅಗಿದಗಿದು
ಕಮರಿದ ಕನಸುಗಳ
ಉರವಲು ಕೂಡಿಸಿ
ಹಚ್ಚಿದೆ ಬೆಂಕಿ
ಅವಮಾನಗಳ ರೋಷದಿಂದ
ಬುಗಿಲೆದ್ದು ಉರಿಯಿತು ಬೆಂಕಿ
ಬೆಂದವು ನೋವುಗಳೆಂಬ ಗಡ್ಡೆ
ಗೆಣಸುಗಳು ಕ್ಷಣಮಾತ್ರದಲಿ
ಹೊಟ್ಟೆ ತುಂಬಾ ತಿಂದು
ತೇಗಿ ಮಲಗಿದೆ ಹಾಯಾಗಿ
ಅನಿಸಿತಾಗ ಇರಬೇಕು
ಜೀವನದಲಿ ನೋವು
ನನಸಗಾಗದ ಕನಸುಗಳು
ಅವಮಾನಗಳು ಕೂಡ
 ಬುಡ ಬುಡ್ಕಿ ಬಾಬಾ

ಅಷ್ಟೇ

ಹೇಳಿಲ್ಲ ಜೀವನಕೆ ಕೊಡಬೇಡ ನನಗೆ ಕಷ್ಟ ನಷ್ಟಗಳನು ಎಂದು
ಹೇಳಿಲ್ಲ ಜೀವನಕೆ ಕೊಡಬೇಡ ನನಗೆ ದುಃಖ ದುಮ್ಮಾನಗಳನು ಎಂದು
ಹೇಳಿಲ್ಲ ಜೀವನಕೆ ಕೊಡಬೇಡ ನನಗೆ ಅಡ್ಡಿ ಆತಂಕಗಳನು ಎಂದು
ಹೇಳಿಲ್ಲ ಜೀವನಕೆ ಕೊಡಬೇಡ ನನಗೆ ದುರಾದೃಷ್ಟಗಳನು ಎಂದು
ಹೇಳಿಲ್ಲ ಜೀವನಕೆ ಕೊಡಬೇಡ ನನಗೆ ಕಠಿಣ ಸವಾಲುಗಳನು ಎಂದು
ಹೇಳಿಲ್ಲ ಜೀವನಕೆ ಕೊಡಬೇಡ ನನಗೆ ದುಷ್ಟ ದುರುಳರ ಜೊತೆ ಹೋರಾಟವನು ಎಂದು
ಹೇಳಿದ್ದು ಒಂದೇ ನನ್ನ ಪರೀಕ್ಷಿಸಿ ನೋಡುವ ಭರದಲಿ ಮರೆಯದಿರು
ಆಗಾಗ ವಿರಮಿಸಿ ನಿನ್ನ ಆರೋಗ್ಯದ ಬಗ್ಗೆಯೂ ಗಮನ ಕೊಡುವುದನು ಎಂದು ಅಷ್ಟೇ
ಬುಡ ಬುಡ್ಕಿ ಬಾಬಾ

Thursday, February 23, 2017

ಹೇಳಲಾರೆ

ನಾನು ಪಂಡಿತನಲ್ಲ
ನನಗಿಲ್ಲ ಯಾವುದರಲ್ಲೂ
ತಲಸ್ಪರ್ಶಿ ಜ್ಞಾನ
ನೀವು ಕೇಳಿದರೆ ನನಗೆ
ನೀ ಬಂದಿದ್ದು ಎಲ್ಲಿಂದ? ಗೊತ್ತಿಲ್ಲ
ನೀ ಹೊರಟಿದ್ದು ಎಲ್ಲಿಗೆ? ಗೊತ್ತಿಲ್ಲ
ಹುಟ್ಟೇ೦ದರೇನು ? ಗೊತ್ತಿಲ್ಲ
ಸಾವೆಂದರೇನು? ಗೊತ್ತಿಲ್ಲ
ನೀ ಮನುಷ್ಯನಾಗಿ ಹುಟ್ಟಿದ್ದೇನೋ ಸರಿ
ನೀ ಮತ್ತೆ ಮನುಷ್ಯನಾಗಿ
ಹುಟ್ಟುವ ರೀತಿ ಬಾಳುತಿರುವೆಯಾ?
ಉತ್ತರ ಗೊತ್ತಿದೆ ಆದರೆ ಹೇಳಲಾರೆ
ಬುಡ ಬುಡ್ಕಿ ಬಾಬಾ

Tuesday, February 14, 2017

ಸತ್ಯ ಸುಳ್ಳು ಅರ್ಧ ಸತ್ಯ

ಸತ್ಯ ಸುಳ್ಳು ಅರ್ಧ ಸತ್ಯದ
ನಡುವೆ ಏರ್ಪಡಿಸಿದ್ದರಂತೆ
ಓಟದ ಸ್ಪರ್ಧೆಯೊಂದನ್ನು || ೧ ||

ಸತ್ಯ ಆಟದ ಬಗ್ಗೆಯ ಶ್ರದ್ಧೆಯಿಂದ
ಪೂರ್ಣ ಬಲ ಪ್ರಯೋಗಿಸಿ
ಓಡಿತಂತೆ ಕೊನೆ ಗೆರೆಯವರೆಗೆ
ಸುಳ್ಳು ಓಡುವುದೆಲ್ಲ ಬಿಟ್ಟು
ನೆರೆದವರಿಗೆ ಹಂಚಿತಂತೆ
ಸವಿಯನ್ನು ತಾನೇ ಗೆದ್ದಿರುವಂತೆ
ಅರ್ಧ ಸತ್ಯ ಓಟದ
ನಿಯಮಗಳ  ಅಸ್ಪಷ್ಟತೆಯ
ದುರ್ಬಳಕೆ ಮಾಡಿ ಓಡಿ
ದಾಟಿತಂತೆ ಕೊನೆ ಗೆರೆ
ಸತ್ಯಕಿಂತ ಮೊದಲು || ೨ ||


ಸತ್ಯ ಸಾತ್ವಿಕ ಸಿಟ್ಟಿನಿಂದ ಹೇಳಿತಂತೆ
ಸುಳ್ಳು ಓಡದೆಯೆ ಗೆದ್ದೇ ಎಂದು ಬೀಗುತಿದೆ
ಅರ್ಧ ಸತ್ಯ ನಿಯಮಗಳ ಮುರಿದರೂ
ಕಾಣದಂತೆ  ದುರ್ಬಳಕೆ ಮಾಡಿದೆ
ಎಂದು ಸಾರಿ ಸಾರಿ
ಆದರೇನು ಸುಳ್ಳಿನ ಸವಿಯುಂಡ
ಜನರಿಗೆ ರುಚಿಸಲಿಲ್ಲವಂತೆ ಸತ್ಯದ ಕಹಿ || ೩ ||

ಸುಳ್ಳಿಗೇಕೋ ತನ್ನ ಗೆಲುವು ಅನುಮಾನವಾಗಿ ಕಂಡು
ಸತ್ಯದ ತಲೆಯ ಮೇಲೆ ಹೊಡೆಯಲು
ಅರ್ಧ ಸತ್ಯದ ಕಡೆಗೆ ನೋಡಿತಂತೆ
ಅದ ಕಂಡ ಅರ್ಧ ಸತ್ಯದ ಬಲ ಹೆಚ್ಚಿ
ಬಲು ಗಂಭೀರವಾಗಿ ನುಡಿಯಿತಂತೆ
ಸುಳ್ಳು ಓಡದಿದ್ದನ್ನು ನಾ ನೋಡಿಲ್ಲ
ಸತ್ಯ ಕೊನೆ ಗೆರೆ ದಾಟಿದ್ದನ್ನು ನಾ ನೋಡಿಲ್ಲ
ನಾ ಕೊನೆ ಗೆರೆ ದಾಟಿದ್ದು ಮಾತ್ರ ಸತ್ಯ || ೪ ||

ಇದ  ಕೇಳಿದ ಜನ ಅಂದರಂತೆ
ಸತ್ಯಕ್ಕೆ ನೋಡಿ ಕಲಿ ಇದು ಸಭ್ಯತೆ
ಅರ್ಧ ಸತ್ಯಕ್ಕೆ ಮೊದಲ ಸ್ಥಾನ
ಸುಳ್ಳಿಗೆ ಎರಡನೆಯ ಸ್ಥಾನ
ಸತ್ಯದ ಅಸಭ್ಯ ನಡತೆಗೆ
ಅದನು ಸ್ಪರ್ಧೆಯಿಂದ
ವಜಾಗೊಳಿಸುವ ಸಜೆಯಂತೆ
ಅದ ಕಂಡ ಅರ್ಧ ಸತ್ಯ ಸುಳ್ಳಿನ
ಕೈ ಕುಲುಕಿ ಕಣ್ಣು ಮೀಟಿಸಿದ್ದು
ಮಾತ್ರ ಯಾರಿಗೂ ಕಾಣಲಿಲ್ಲವಂತೆ  || ೫ ||
ಬುಡ ಬುಡ್ಕಿ ಬಾಬಾ


Saturday, February 11, 2017

ಅರ್ಥಪೂರ್ಣತೆ

ಅರ್ಥಪೂರ್ಣತೆಯ ಅರಿತು
ಅರ್ಥಹೀನತೆಯ ಅನವರತ ದಾಳಿಗಳ
ಕೆಲ ಬಾರಿ ತಡೆದು
ಕೆಲ ಬಾರಿ ತಪ್ಪಿಸಿಕೊಂಡು
ಕೆಲ ಬಾರಿ ಎದುರಿಸಿ
ಬದುಕುವದು ಅದೆಷ್ಟು ಕಷ್ಟ

ಭ್ರಮೆ

ಎಲ್ಲರ ಪ್ರೀತಿಸಬೇಕು
ಎಲ್ಲರೂ ನನ್ನ ಪ್ರೀತಿಸಬೇಕು
ದಾರಿ ಸರಳವಾಗಿರಬೇಕು
ಎಂಬ ಭ್ರಮೆಯ ಪಂಜರದಿಂದ
ಹೊರಗೆ ಬಂದಾಗ
ಶುಭ್ರ ಸರೋವರದಲ್ಲಿ
ಸೂರ್ಯ ಪ್ರತಿಫಲಿಸುತಿದ್ದ
ಆಕಾಶ ನೀಲಿಯಾಗಿತ್ತು
ತಂಗಾಳಿ ಬೀಸುತಿತ್ತು
ಕಣ್ಣ ಮುಂದೆ ಇದ್ದರೂ
ಕಾಣದಂತಿದ್ದ ದಾರಿ
ಹೆದ್ದಾರಿಯಂತೆ ಗೋಚರಿಸುತಿತ್ತು
ಕಾಲಲ್ಲಿ ಹತ್ತಶ್ವಗಳ ಕಸು ತುಂಬಿತ್ತು
ಮನ ಆನೆಯಂತೆ ತಾನು
ಎಲ್ಲದಕ್ಕೂ ಸೈ ಎಂದು
ಶಂಖನಾದ ಮೊಳಗಿಸಿತ್ತು
ಬುಡ ಬುಡ್ಕಿ ಬಾಬಾ


Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...