Sunday, August 28, 2016

ಲಹರಿ

ಲಹರಿ ಬಂದಾಗ
ಪ್ರಶ್ನಿಸದೆ ತುರ್ತಾಗಿ
ಎದ್ದು ಹೊರಟು ಬಿಡಿ
ಲಹರಿ ಕರೆದೊಯ್ಯುವ
ದಾರಿ ಹಾಗೂ ಗಮ್ಯ ಸ್ಥಾನ
ಶುದ್ಧ ಸೌಂದರ್ಯ

ಬುಡ ಬುಡ್ಕಿ ಬಾಬಾ

ಸ್ಪೂರ್ತಿ: ಭೀಮಸೇನ ಜೋಶಿ

ಎಲ್ಲಿದೆ ಆನಂದ?

ಅದೇನೋ ಹೇಳ್ತಾರಪ್ಪ  ಆನಂದ
ಅನ್ನೋದು ಅಡಗಿದೆ ನಮ್ಮೊಳಗೆ ಅಂತ
ಹುಡುಕ ಹೋಗಬೇಡಿ
ಹೊರಗೆಲ್ಲೂ ಅಂತ ಗೊತ್ತಿಲ್ಲ್ಲ
ಇದು ಖರೇನೋ ಸುಳ್ಳೋ ಅಂತ || ೧ ||

ಯಾವುದಕ್ಕೂ ಕಲಿತು ಬಿಡಿ
ಒಳ್ಳೆ ಶಾಲಾ ಕಾಲೇಜುಗಳಲ್ಲಿ
ಪಡೆದು ಬಿಡಿ ಉತ್ತಮ ಅಂಕಗಳನ್ನ
ನೋಡಿಬಿಡಿ ಅದರಲ್ಲೇನಾದರೂ
ಅಡಗಿದೆಯಾ ಆನಂದ ಅಂತ || ೨ ||

ಯಾವುದಕ್ಕೂ ಸೇರಿಬಿಡಿ ಕೆಲಸಕ್ಕೆ
ಉತ್ತಮ ಸಂಬಳ ಭಡ್ತಿ ಕೊಡುವ
ಸಂಸ್ಥೆಗಳಲ್ಲಿ ಆಗಿ ಬಿಡಿ ಸಿರಿವಂತ
ನೋಡಿಬಿಡಿ ಅದರಲ್ಲೇನಾದರೂ
ಅಡಗಿದೆಯಾ ಆನಂದ ಅಂತ || ೩ ||

ಯಾವುದಕ್ಕೂ ಆಗಿಬಿಡಿ ಮದುವೆ
ಕಟ್ಟಿಕೊಳ್ಳಿ ನಿಮ್ಮದೇ ಮನೆ
ಮಾಡಿಕೊಳ್ಳಿ ಮಕ್ಕಳ
ನೋಡಿಬಿಡಿ ಅದರಲ್ಲೇನಾದರೂ
ಅಡಗಿದೆಯಾ ಆನಂದ ಅಂತ || ೪ ||

ಯಾವುದಕ್ಕೂ ಸುತ್ತಿ ಬಿಡಿ ಜಗವೆಲ್ಲ
ಅನುಭವಿಸಿ ಬಿಡಿ ಸುಖಗಳ
ಮಾಡಿಬಿಡಿ ನಿಮಗನಿಸಿದ ಮಜಾ
ನೋಡಿಬಿಡಿ ಅದರಲ್ಲೇನಾದರೂ
ಅಡಗಿದೆಯಾ ಆನಂದ ಅಂತ || ೫ ||

ಯಾವುದಕ್ಕೂ ಮಾಡಿಬಿಡಿ ನಿಮ್ಮಿಷ್ಟದ
ಕೆಲಸ ನಿಮ್ಮೆಲ್ಲಾ ಪ್ರತಿಭೆ ಬಳಸಿ
ಸಮಾಜಕ್ಕೆ ಒಂದು ಕೊಡುಗೆಯಾಗಿ
ನೋಡಿಬಿಡಿ ಅದರಲ್ಲೇನಾದರೂ
ಅಡಗಿದೆಯಾ ಆನಂದ ಅಂತ || ೫ ||

ಯಾವುದಕ್ಕೂ ಮಾಡಿಬಿಡಿ ತೀರ್ಥಯಾತ್ರೆ
ಜಪ ತಪ ಪೂಜೆ ಸಾಧನೆ
ಆಧ್ಯಾತ್ಮ ಅಧ್ಯಯನ ಮಂಥನಗಳ
ನೋಡಿಬಿಡಿ ಅದರಲ್ಲೇನಾದರೂ
ಅಡಗಿದೆಯಾ ಆನಂದ ಅಂತ || ೫ ||

ಇಷ್ಟೆಲ್ಲ ಮಾಡಿದ ಮೇಲೂ ಆನಂದ ಸಿಗಲಿಲ್ಲ
ಅಂದ್ರೆ ಒಮ್ಮೆ ಹುಡುಕಿ ನೋಡಿಬಿಡಿ
ನಿಮ್ಮಲ್ಲೇ ಎಲ್ಲಾದರೂ ಅಡಗಿದೆಯಾ ಅಂತ
ಸಿಕ್ಕರೆ ಸರಿ ಸಿಗಿದಿದ್ದರೂ ಮಾಡಬೇಕಾದದೆಲ್ಲಾ
ಮಾಡಿಯಾಯಿತಲ್ಲ ಅಂತ ಅನಂದವಾಗಿರಿ || ೬ ||
ಬುಡ ಬುಡ್ಕಿ ಬಾಬಾ

ಸ್ವಾತಂತ್ರ್ಯ

ಯಾರೋ ಹಾಕಿದ ದಿನಚರಿಯಲ್ಲಿ ಬಂಧಿಯಾದಾಗ
ಕಾಡು ಕುದುರೆಯ ನಾಗಾಲೋಟ ಕಂಡು
ನಮಗೂ ಹಾಗೆ ಸ್ವಾತಂತ್ರ್ಯ  ಸಿಗಬಾರದಾ
ಎಂದೆನೆಸುವದರಲ್ಲಿ ಎಳ್ಳಷ್ಟೂ ತಪ್ಪಿಲ್ಲ ಬಿಡಿ || ೧ ||

ಮಜಕೂರ ಇರುವುದು  ಆ ಸ್ವಾತಂತ್ರ್ಯ  ಸಿಕ್ಕಾಗ
ಅದೇ ಕಾಡು ಕುದುರೆಯ ಸವಾರಿ ಮಾಡಿದಂತೆ
ಅದರಲಿ ಅಡಗಿದೆ ಅಪರಿಮಿತ ಶಕ್ತಿ
ಹಾಗೆಯೇ ಬೆಸದಿದೆ  ನಿರಂಕುಶ ಚಂಚಲತೆ || ೨ ||

ಮನ ಬಂದತ್ತ ಓಡುವ ಕುದುರೆಯ
ನಿಯಂತ್ರಣ ತಪ್ಪಿದರೆ ದುರಂತ ಕಟ್ಟಿಟ್ಟ ಬುತ್ತಿ
ನಿರಂತರ ಶಿಸ್ತಿನಿಂದ ಪಳಗಿಸಿ ಓಡಿಸಿದರೆ
ತಲುಪಬಹುದು ಅರ್ಥಪೂರ್ಣ ಜೀವನದ ಗುರಿ || ೩ ||
ಬುಡ ಬುಡ್ಕಿ ಬಾಬಾ

ಸಮಯದ ಕೊಲೆ

ಅತಿ ದೂರದ ಭವಿಷ್ಯತ್ತಿನ
ಬಗ್ಗೆ ಇಂದೇ ವಿವರವಾಗಿ
ಯೋಜನೆಗಳ ಮಾಡುವುದು
ಇಂದೇ ಹಾಕಿದ ಬೀಜದ
ಮರದ ಹಣ್ಣು ಕತ್ತರಿಸಲು
ಎಂತಹ ಕತ್ತಿ ಬೇಕೆಂದು
ತಲೆ ಕೆಡಿಸಿಕೊಂಡಂತೆ
ಬೇಕಿದ್ದರೆ ಹಣ್ಣು ತಿನ್ನುವ
ಕನಸು ಕಾಣಿ ಆದರೆ
ಅಕಾಲಿಕ ಮಾಡುವ
ಯೋಜನೆ ಅದಕೆ
ವಿನಿಯೋಗಿಸಿದ
ಸಮಯದ ಕೊಲೆ

Saturday, August 27, 2016

ಕಾಲದ ಛಾಯಾಚಿತ್ರ

ಆ ಬೀದಿ ಏಕೋ
ಭಾಸವಾಯಿತು
ಕಾಲದ ಛಾಯಾಚಿತ್ರದಂತೆ
ಭೂತ ವರ್ತಮಾನ ಭವಿಷ್ಯಗಳು
ಒಂದೇ ಕಂಡೆ ನಿಂತು
ಚಿತ್ರಕ್ಕೆ ಭಂಗಿ ಕೊಟ್ಟಂತೆ || ೧ ||

ಆ ಬೀದಿಯ ಎರಡೂ ಬದಿ
ಕಿಕ್ಕಿರಿದು
ತುಂಬಿತ್ತು ಕಟ್ಟಡಗಳಿಂದ
ಒಂದು ಭಾವನೆ ಕೂಡ
ಹಾದು ಹೋಗಲು
ಜಾಗವಿಲ್ಲದಂತೆ || ೨ ||


ಕೆಲ ಕಟ್ಟಡಗಳು ಜನರಿಂದ
ತುಂಬಿ ತುಳುಕಿ  ಮಕ್ಕಳ
ಕಿಲ ಕಿಲ ನಗುವಿಂದ ಕೂಡಿ
ನಂದ ಗೋಕುಲವ
ನೆನಪಿಸುವ
ಅರಮನೆಯಂತಿದ್ದವು || ೩ ||

ಇನ್ನೂ ಕೆಲ ಕಟ್ಟಡಗಳು
ಯಾರೂ ವಾಸವಿಲ್ಲದೆ
ಬೀದಿಯ ಹಾದಿಹೋಕರನ್ನು
ದೈನ್ಯದ ಕಣ್ಣಿಂದ ನೋಡುವ
ಅನಾಥರಂತಿದ್ದವು || ೩ ||

ಇನ್ನೂ ಕೆಲ ಕಟ್ಟಡಗಳು
ವಾರಸುದಾರರಿಂದ  ತ್ಯಕ್ತವಾಗಿ
ವರುಷ ವರುಷಗಳೇ ಕಳೆದು
ದೆವ್ವಗಳ ವಾಸಸ್ಥಾನದಂತೆ
ಭೀಕರವಾಗಿದ್ದವು || ೪ ||

ಇನ್ನೂ ಕೆಲ ಕಟ್ಟಡಗಳು
ಹಳೆಯದನ್ನು ಬಿಡಲಾಗದೆ
ಹೊಸದಕ್ಕೆ ತೆರೆದುಕೊಳ್ಳದೇ
ಕಾಲದ ಗೆದ್ದಲಿಗೆ ನಲುಗಿ
ಹಂತ ಹಂತವಾಗಿ ಅವಸಾನದತ್ತ
ಸಾಗಿದ್ದವು || ೫ ||

ಇನ್ನೂ ಕೆಲ ಕಟ್ಟಡಗಳು
ಹಳೆಯ ಗೋಡೆಗೆ ಹೊಸ ಬಣ್ಣ
ಅಲಂಕಾರದ ತೇಪೆ
ಹಾಕಿಕೊಂಡು ಹೊಸದರಲ್ಲಿ
ಒಂದಾಗಲು ಪ್ರಯತ್ನಿಸಿ ಸೋತು
ಸುಣ್ಣವಾಗಿದ್ದವು || ೬ ||

ಇನ್ನೂ ಕೆಲ ಕಟ್ಟಡಗಳು
ಹಳೇ ಕಟ್ಟಡಗಳ ಸಮಾಧಿ
ಮೇಲೆ ತಲೆ ಎತ್ತಿ ನಿಂತು
ತಮಗೆ ಯಾರು ಸರಿ
ಎಂದು ದರ್ಪದಿಂದ
ಬೀಗಿದ್ದವು || ೭ ||

ಕೊನೆ ಕಟ್ಟಡ ಮಾತ್ರ
ಅದೆಷ್ಟೋ ಕತೆಗಳನ್ನು
ತನ್ನಲ್ಲಿ ಹುದುಗಿಸಿಕೊಂಡು
ಕಾಲದ ಛಾಯಾಚಿತ್ರ ಕ್ಲಿಕ್ಕಿಸುತ್ತಾ
ಅದರಲ್ಲಿ ತನ್ನನ್ನು ತಾನೇ ಕಂಡು
ಅಚ್ಚರಿಗೊಂಡಿತ್ತು || ೮ ||

Thursday, August 25, 2016

ಸಮಸ್ಯೆಗೆ ಪರಿಹಾರ

ಕಠಿಣ ಸಮಸ್ಯೆಗೆ ಪರಿಹಾರ
ಕಂಡು ಹಿಡಿಯುವ ಮೊದಲು
ಸಮಸ್ಯೆಯ ವ್ಯಾಪ್ತಿ ಗುರುತಿಸಬೇಕು
ಸಮಸ್ಯೆಯ ಗರಿಷ್ಟ ಕನಿಷ್ಟ
ಮಿತಿಗಳ ಕಂಡು ಹಿಡಿಯಬೇಕು
ಸಮಸ್ಯೆಯ ವಿವಿಧ ಕೋನಗಳಿಂದ
ನೋಡಿ ವಿಶ್ಲೇಷಿಸಬೇಕು
ಇಷ್ಟೆಲ್ಲ ಮಾಡುವ ಹೊತ್ತಿಗೆ
ಸಮಸ್ಯೆ ತನ್ನಷ್ಟಕ್ಕೆ
ತಾನೇ ಪರಿಹಾರವಾಗಿರುತ್ತೆ
ಪರಿಹಾರವಾಗಿರದಿದ್ದರೆ
ದೇವರಿದ್ದಾನೆ ನಂಬಿಕೆ ಇರಲಿ

Wednesday, August 24, 2016

ನಾವ್ಯಾರು

ವಜ್ರವ ಬೆಲೆ ತಿಳಿಯುವುದಂತೆ
ವಜ್ರದ ಭಾರ ಬಣ್ಣ ಸ್ಪಷ್ಟತೆ
ಕುಸುರಿ ಆಧರಿಸಿ || ೧ ||

ಪ್ರತಿ ಮನುಷ್ಯನು ಹುಟ್ಟಿದಾಗ
ಒಂದು ಕಚ್ಚಾ ರತ್ನದಂತೆ
ಭಾರ ಬಣ್ಣ ಸ್ಪಷ್ಟತೆ ಸಿಗುವದು
ನಮ್ಮ ಪೂರ್ವ ಜನ್ಮದ ಕರ್ಮದಂತೆ || ೨ ||

ನಾವೆಲ್ಲ ರತ್ನಾಕಾರರು
ನಮ್ಮ ಕೆಲಸ ನಾವೆಂಬ
ರತ್ನವನ್ನೇ ಉಜ್ಜಿ ತಿಕ್ಕಿ ತೀಡಿ
ಹೊಳಪು ನೀಡುವುದು
ಈ ಜನ್ಮದಲ್ಲಿ
ಹಾಗೂ
ಮುಂದಿನ ಜನ್ಮದ
ಭಾರ ಬಣ್ಣ ಸ್ಪಷ್ಟತೆಗಾಗಿ || ೩ ||

Monday, August 22, 2016

ಹೆಚ್ಚು ಕಡಿಮೆ

ಹೆಚ್ಚು ಮಾಡಬೇಕಾದನ್ನು
ಕಡಿಮೆ ಮಾಡುವದು
ಕಡಿಮೆ ಮಾಡಬೇಕಾದನ್ನು
ಹೆಚ್ಚು ಮಾಡುವುದೇ ಎಲ್ಲ
ಸಮಸ್ಯೆಗಳಿಗೆ ಮೂಲ
ಎಂದು ಅರಿಯಲಾಗದು
ಹೆಚ್ಚು ಕಡಿಮೆ ಮಾಡದೆ

Sunday, August 14, 2016

ವಾಸ್ತವ

ವಾಸ್ತವವನ್ನು
ಹಗಲುಗನಸು
ಕಂಡು
ತಪ್ಪಿಸಿಕೊಂಡಾಗ
ವಾಸ್ತವವು
ರಾತ್ರಿಯ
ಕನಸಲ್ಲಿ
ಭೇಟಿಯಾಯಿತು

Wednesday, August 3, 2016

ಉದ್ಯಮವೊಂದು ಗಾಳಿಪಟ

ಉದ್ಯಮವೊಂದು ಗಾಳಿಪಟ ಹಾರಿಸಿದಂತೆ
ಮೊದಲು ಬಂಡವಾಳ ಹೂಡಿ
ಗಾಳಿಪಟ ದಾರ ಖರೀದಿಸಬೇಕು
ಉತ್ಪನ್ನವೆಂಬ ಸೂತ್ರ ಹಾಕಿ
ಬೇಡಿಕೆಯ ಗಾಳಿಗೆ ಕಾಯಬೇಕು
ತಾಳ್ಮೆ ಕಳೆದುಕೊಳ್ಳದೆ ಕಾಯಬೇಕು  || ೧ ||

ಗಾಳಿ ಬೀಸುವ ದಿಕ್ಕು ಬಲವರಿತು
ಗಾಳಿಪಟದ ಸೂತ್ರ ಬಾಲ ಸರಿಪಡಿಸಿದಂತೆ
ಉತ್ಪನ್ನವ ಸಂಸ್ಕರಿಸಿ ಮಾರ್ಪಡಿಸಬೇಕು
ಸಮಯಕ್ಕೆ ಸರಿಯಾಗಿ ತಯಾರಾದರೆ
ಬೇಡಿಕೆಯ ಗಾಳಿಗೆ ತೂರಿಕೊಂಡು
ಹಾರಬಹುದು ಅದು ನೀಲಿ ಬಾನಲ್ಲಿ || ೨ ||

ಗಾಳಿಗೆ ತಕ್ಕಂತೆ ಬಿಡಲು
ದಾರವೆಂಬ ಬಂಡವಾಳ ತುಂಬಿರಬೇಕು
ಮೇಲೇರಿದಂತೆಲ್ಲಾ ಪ್ರತಿಸ್ಪರ್ಧಿಗಳ ಸ್ಪರ್ಧಿಸಬೇಕು
ಸ್ಪರ್ಧೆಯಲ್ಲಿ ದಾರ ತುಂಡರಿಸಿಬಹುದು
ಬೇಡಿಕೆಯ ಗಾಳಿ ಹೋಗಿ
ಗಾಳಿಪಟ ಗೋತಾ ಹೊಡೆದು ನೆಲಕಚ್ಚಬಹುದು || ೩ ||

ಮಾರುಕಟ್ಟೆಯಲ್ಲಿ ಕುಸಿತದ ಮಳೆ ಬಂದಾಗ
ಗಾಳಿಪಟ ಎಳೆದು ಕೆಳಗಿಸಬೇಕು
ಏರಿದಾಗ ಬಿಟ್ಟ ದಾರ
ಕೆಳೆಗಿಳದಾಗ ಗಂಟಾಗಿ ಗೋಜಲಾಗಬಹುದು
ಗಂಟು ಬಿಡಿಸಿ ಮತ್ತೆ ಸುತ್ತಿಡಬೇಕು
ತಯಾರಾಗಬೇಕು ಮತ್ತದೇ ಸಾಹಸಕ್ಕೆ || ೪ ||

ಕನಸಲ್ಲೂ ಕಾಣದನ್ನು ಪಡೆಯಬಹುದು
ಪಡೆದುದ ಎಲ್ಲ ಕಳೆದುಕೊಳ್ಳಲುಬಹುದು
ಆನಂದದ ಪರ್ವತದ ತುತ್ತುದಿ
ದು:ಖದ ಪ್ರಪಾತದ ತಳ
ಸದಾ ಸಿದ್ಧವಿರಬೇಕು ಎರಡಕ್ಕೂ
ಆಗಲೇ ಅನುಭವಿಸಬಹುದು ರೋಮಾಂಚನವನ್ನು || ೫ ||
ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...