Thursday, March 31, 2016

ಚಿಂವ ಚಿಂವ ಗುಬ್ಬಿ
















ಮಾನವರು ಧ್ಯಾನಿಸಿದ್ದರು ತಮ್ಮ ಹೊಸ ಧ್ಯೇಯವಾಕ್ಯ
ಜೀವನವಾಗಬೇಕು ಒಂದು ವ್ಯವಹಾರ
ಜೀವನದ ಪ್ರತಿ ಕ್ಷಣವಾಗಬೇಕು ಸಂಕಲನ ವ್ಯವಕಲನ
ಜೀವಪ್ರೀತಿ ಜೀವನಪ್ರೀತಿಗಿರಕೂಡದು ವ್ಯವಧಾನ
ಆದ ಕೇಳಿ ಪ್ರತಿಭಟಿಸಿತು ಗುಬ್ಬಿಯೊಂದು ಚಿಂವ ಚಿಂವ ಎಂದು || ೧ ||

ಕೆರಳಿದರು ಮಾನವರು ಕೆಂಡವಾಯಿತು ಅವರ ಬುದ್ದಿ
ಮೊಳಗಿತು ಘೋಷವಾಕ್ಯವೊಂದು ಕಟ್ಟಿ ಕೋಟೆಯ
ಬಗ್ಗು ಬಡೆಯಿರಿ ಈ ಜೀವಪ್ರೀತಿಯ ಗುಬ್ಬಿಗಳ
ತಲೆ ಎತ್ತಿದವು ಮೊಬೈಲ್ ಟವರ್ಗಳೆಂಬ ಬುರುಜುಗಳು
ನಿಸ್ತಂತು ಬೇಲಿಯ ಬೆಸೆದು ಹೊಸೆದರು ಗುಬ್ಬಿಗಳ ಸಂಕುಲವನ್ನೇ || ೨ ||

ಘಂಟಾ ಘೋಷವಾಗಿ ಮೊಳಗಿತು ಮತ್ತದೇ ಧ್ಯೇಯವಾಕ್ಯ
ಜೀವನವಾಗಬೇಕು ಒಂದು ವ್ಯವಹಾರ
ಜೀವನದ ಪ್ರತಿ ಕ್ಷಣವಾಗಬೇಕು ಸಂಕಲನ ವ್ಯವಕಲನ
ಜೀವಪ್ರೀತಿ ಜೀವನಪ್ರೀತಿಗಿರಕೂಡದು ವ್ಯವಧಾನ
ಇದ  ಕೇಳಿ ಎಲ್ಲಡೆ ನೆಲಸಿತ್ತು ಸಾವಿನ ಮನೆಯ ಮೌನ || ೩ ||

ಆ  ಮೌನವ ಸೀಳಿದ ಕರ್ಕಶ  ರಿಂಗ್  ಟೂನುಗಳ ಮಧ್ಯೆ
ಸ್ವಾಗ್‌ತೀಸಿ ಸ್ವೀಕರಿಸಿದರು ಹೊಸ ಧ್ಯೇಯವಾಕ್ಯ
ಅಂದಿಂದ ಮತ್ತೆ ಹಿಂದೆ ನೋಡಿಲ್ಲ ಇತಿಹಾಸದ ಕಡೆಗೆ
ಕಟ್ಟುತ್ತಲೇ ಸಾಗಿದೆ ಮಾನವ ಜನಾಂಗ ತನ್ನ ಜೀವನ ಸೌಧವ
ಜೀವಪ್ರೀತಿಯ ಸಂಕೇತವಾದ ಗುಬ್ಬಿಯ ಸಮಾಧಿ ಮೇಲೆ || ೪ ||

ಬುಡ ಬುಡ್ಕಿ ಬಾಬಾ

Wednesday, March 30, 2016

ಸಿರಿವಂತ

ಸಮಯಕೆ ಮಿಗಿಲಾದ
ಸಿರಿಯಿಲ್ಲ ಜಗದಲ್ಲಿ
ತನಗಿಷ್ಟವಾದಷ್ಟು 
ತನ್ನ ಸಮಯವ ಕೊಂಡು
ತನಗಿಷ್ಟವಾದ ಕಡೆಗೆ
ತೊಡಗಿಸುವ ಸ್ವಾತಂತ್ರ್ಯ
ಇರುವವನೆ ನಿಜ ಸಿರಿವಂತ
ಬುಡ ಬುಡ್ಕಿ ಬಾಬಾ

Monday, March 28, 2016

ಮೈಭಾರ

ತನ್ನ ಕಾಲ ಮೇಲೆ ತಾನು ನಿಲ್ಲುವ
ಭರದಲ್ಲಿ ಕುಳಿತಲ್ಲೇ ಕುಳಿತು
ಬರಿ ಕೆಲಸ ಮಾಡಿ
ಮರೆತಿದ್ದ ತನ್ನ ಕಾಲ ಮೇಲೆ
ತಾನು ನಡೆಯುವುದನ್ನ || ೧ ||

ಭರದಿಂದ ಬೆಳೆಯಿತು ಮೈಭಾರ
ಈಗ ಮತ್ತೆ ಕಲಿಯಬೇಕಿದೆ
ತನ್ನ ಕಾಲ ಮೇಲೆ ತಾನು
ನಡೆಯಲು ಶಿಶುವಿನಂತೆ
ಇಳಿಸಲು ಮೈಭಾರ || ೨ ||

Saturday, March 26, 2016

ನಾ ಕಾಣೆಯಾಗಿದ್ದೆ

ಪ್ರವಾಸಿಗರು ತಾವು ಮಾಡಿದ ಪ್ರವಾಸದ ನೆನೆಪಿಗಾಗಿ ಕೆಲಬಾರಿ
ಇಷ್ಟವೋ ಬಲವಂತವೂ ವಸ್ತುವೊಂದನ್ನು ಒಯ್ದು ಮನೆಯ ಅಲಂಕರಿಸುವಂತೆ
ಜೀವನದ ಪಯಣದಲಿ ಅಲ್ಲಿ ಇಲ್ಲಿ ಕಂಡು ಅನಿವಾರ್ಯಕ್ಕೋ ಎಲ್ಲರೂ ಮಾಡುತ್ತಾರೆ
ನಾನು ಮಾಡಬೇಕೆಂಬ ಮಂಕಿಗೂ ಮಾಡಿಕೊಂಡಿದ್ದೆ ಬಣ್ಣ ಮುಖವಾಡಗಳ ಅಲಂಕಾರ
ಮೊದಲೇನೋ ಚೆನ್ನ ಅನಿಸಿದರೂ ಬರು ಬರುತ್ತಾ ಕ್ಲೀಷೆಯಾಗಿತ್ತು ಈ ಅಲಂಕಾರ || ೧ ||

ಬಳಸಿ ಬಳಸಿ ಮೂಲಾರ್ಥ ಕಳೆದುಕೊಂಡ ನುಡಿಗಟ್ಟ ಅಂತಾಗಿತ್ತು ಈ ಅಲಂಕಾರ
ಮನ ಆಗಾಗ ಹೊಯ್ದುಕೊಳ್ಳುತಿತ್ತು ತೋರು ನನಗೆ ನಿನ್ನ ನಿಜ ರೂಪ
ಅಯ್ಯೋ ಸುಡ್ಲಿ ಈ ಮನವ ಬಹು ದಿನದಿಂದ ಕಾಡುತಿದೆಯಲ್ಲ ತೋರಿಯೇ
ಬಿಡೋಣ ನಿಜ ರೂಪ ಆದರೆ ಅನಿಸಿತು ಒಪ್ಪಲಾರದೇನೋ ಈ ಸಮಾಜ
ಅಲಂಕಾರಗಳಿಲ್ಲದೆ ನನ್ನನ್ನು ಅದಕೆ ಆರಿಸಿದೆ ಜನರಿಲ್ಲದ ಕಾಡನೊಂದು || ೨ ||

ಓಡಿದೆ ಗಾಳಿಗೆ ಪೈಪೋಟಿ ನೀಡುವ ವೇಗದಲಿ ಕಳಚಿದವು ಕೆಲ ಅಲಂಕಾರ ಆ ವೇಗಕ್ಕೆ
ಊರುಳಿದೆ ಬೆಟ್ಟದ ಮೇಲಿಂದ ಕೆಳಗೆ ಬಿದ್ದು ಹೋದವು ಇನ್ನೊಂದಿಷ್ಟು ಅಲಂಕಾರಗಳು
ಹಾವಿನ ಪೊರೆ ಕಳಚಿದಂತೆ ಕಳಚಿದೆ ಚರ್ಮಕ್ಕೆ ಅಂಟಿದ ಅಲಂಕಾರಗಳ ಚೂಪಾದ ಕಲ್ಲಿಗೆ ತಿಕ್ಕಿ
ಹರಿಯುವ ನದಿಯಲ್ಲಿ ಧುಮುಕಿ ಊಜ್ಜಿ ಊಜ್ಜಿ ಶುಬ್ರಗೊಳಿಸಿದೆ ಅಳಿದುಳಿದ ಕಲೆಗಳನ್ನು
ಉರಿ ಬಿಸಿಲ್ಲಲ್ಲಿ ನಿಂತು ಒಣಗಿಸಿದೆ ನನ್ನನ್ನು ನಾನು ಒಂದು ಹನಿ ಉಳಿಯದಂತೆ || ೩ ||

ಎದೆಬಡಿತ ಹೆಚ್ಚಿತ್ತು ಮನವು ನಿಜ ರೂಪ ಕಾಣುವ ಖುಷಿಗೆ ಹಳೇ ಹಾಡು ಗುನುಗಿತ್ತು
ಹೊಸ ಮಗುವ ಸ್ವಾಗತಿಸುವಂತ  ಸಂಭ್ರಮ ಮೈಮನ ತುಂಬಿತ್ತು ಹುಮ್ಮಸ್ಸು ಚಿಮ್ಮಿತ್ತು
ಕಾಲುಗಳೇ ಗಾಲಿಯಾಗಿ ವೇಗದಿ ಓಡಿ ನಿಂತೆ ಕೋಣೆಯ ಮೂಲೆಯ ಕನ್ನಡಿಯ ಮುಂದೆ
ಕಾಣಲೇ ಇಲ್ಲ ಯಾರೂ ಒಂದು ಕ್ಷಣ ತಬ್ಬಿಬ್ಬಾಗಿ ಶೋಧಿಸಿದೆ ವಿವಿಧ ಕೋನಗಳಿಂದ
ಊಹೂ೦ ಕಾಣುತಿಲ್ಲ ಯಾರೂ ಹೇಗೆ ನೋಡಿದರೂ, ನಾ ಕಾಣೆಯಾಗಿದ್ದೆ, ಎಂದೊ || ೪ ||

ಬುಡ ಬುಡ್ಕಿ ಬಾಬಾ

Friday, March 25, 2016

ಆ ಲಯ

ಲಯವಿದೆ ಜೀವದಲಿ ಲಯವಿದೆ ಜಡದಲಿ
ಲಯವಿದೆ ಜಗದ ಪ್ರತಿ ಕಣ ಕಣದಲಿ || ೧ ||

ಜಗದ ಲಯದಿ ತಾ ಬೆರೆತು
ಅದರಲಡಗಿರುವ  ತನ್ನ ಲಯವನರಿತು
ಜೀವನದ ಪ್ರತಿ ಕ್ಷಣವು
ಆ ಲಯವೇ ಮನವನಾವರಿಸಿ ಅನುರಣಿಸಿ || ೨ ||

ಅನೂಹ್ಯ ಅನುಭವಗಳ  ಅನಾವರಣಗೊಳಿಸಿ
ಆ ಅನುಭವಗಳಲೆಲ್ಲಾ
ಆ ಲಯವೇ  ಪ್ರತಿಧ್ವನಿಸಿ || ೩ ||

ಪ್ರತಿಧ್ವನಿಯಿಂದ ಧ್ವನಿ ಧ್ವನಿಯಿಂದ ಪ್ರತಿಧ್ವನಿ
ಒಂದನೊಂದು ಬಲಪಡಿಸಿ
ಆ ಲಯವೇ ಜೀವನ ಜೀವನವೇ ಆ ಲಯವಾಗಲಿ || ೪ ||

Tuesday, March 22, 2016

ನೀನಿರದಿದ್ದರೆ ನಾನಿರುತ್ತಿರಲಿಲ್ಲ

ಕವನವೊಂದು ಜೀವ ಪಡೆದು ಹಾಳೆಯಿಂದೆದ್ದು
ಕವಿಯನ್ನು ತಬ್ಬಿ ಹೇಳಿತು
ನನ್ನನ್ನು ಅವ್ಯಕ್ತದಿಂದ ವ್ಯಕ್ತಗೊಳಿಸಿದಕ್ಕೆ
ಧನ್ಯವಾದ ನೀನಿರದಿದ್ದರೆ ನಾನಿರುತ್ತಿರಲಿಲ್ಲ || ೧ ||

ಕವಿ ಕೇಳಿದ ಕವನಕ್ಕೆ ಎಲ್ಲಿದ್ದೆ
ನೀನು ಇಷ್ಟು ದಿವಸ? ಕವನವೆಂದಿತು
ಸಾಮಾನ್ಯ ಅರ್ಥಗಳ ಮಧ್ಯೆ
ಸಾಮಾನ್ಯ ಅರ್ಥಗಳಾಚೆಯ ಭಾವ ವ್ಯೂಹದಲ್ಲಿ || ೨ ||

ಕವಿ ಕವನವ ಇನ್ನೂ ಬಿಗಿಯಾಗಿ ತಬ್ಬಿ
ಗದ್ಗದಿತನಾದ ಧ್ವನಿಯಲ್ಲಿ ಹೇಳಿದ
ಭಾವವಿಲ್ಲದೆ ನಾನಿಲ್ಲ ನೀನಿಲ್ಲದೆ ಭಾವವಿಲ್ಲ
ಧನ್ಯವಾದ ನೀನಿರದಿದ್ದರೆ ನಾನಿರುತ್ತಿರಲಿಲ್ಲ || ೩ ||

Monday, March 21, 2016

ಆಸ್ವಾದನೆಗಿಲ್ಲ ಅವಕಾಶ

ಪ್ರಪಂಚ ಪರ್ಯಟನೆಗೆ ಕರೆದು ಕೊಂಡು ಹೋಗಲು ಸಿದ್ದವಾಗಿದೆ ರೈಲು
ಒಂದು ಸುತ್ತು ಪ್ರಪಂಚ ಪರ್ಯಟನೆ ಮಾಡ ಬಹುದು ಇಲ್ಲಿ
ಆದರೆ ಎಲ್ಲೂ ಇಳಿಯುವಂತಿಲ್ಲ ಯಾವುದನ್ನು ಪೂರ್ತಿಯಾಗಿ ಅಸ್ವಾದಿಸುವಂತಿಲ್ಲ
ಕ್ಷಣಮಾತ್ರ ಕಂಡು ಮರೆಯಾಗುವ ದೃಶ್ಯ ಮನ ತುಂಬಿ ಖುಷಿ ಪಟ್ಟುಕೊಳ್ಳಬೇಕು
ಇದ್ದೀರಾ ಯಾರಾದರೋ ಪ್ರಯಾಣಿಕರು ಟಿಕೆಟ್ ಟಿಕೆಟ್ ಬೆಲೆ ತುಂಬಾ ಕಮ್ಮಿ
ಕಳೆದುಕೊಳ್ಳಬೇಡಿ ಈ ಅವಕಾಶ ಉಳಿದಿರುವುದು ಇನ್ನೂ ಕೆಲವೇ ಟಿಕೆಟ್ಗಳು
ಬೇಗ ಬೇಗ ಕೊಳ್ಳಿ ಇನ್ನೇನು ಹೊರಡಲಿದೆ ರೈಲು ಕೂ ಚುಕ್ ಚುಖ್
ಬುಡ ಬುಡ್ಕಿ ಬಾಬಾ

Inspired by : Willa Cather letter to Jewett

ನೆರಳು ನಿರ್ಲಿಪ್ತ

ನೆರಳು ಹಿಗ್ಗಿದಾಗ ನಕ್ಕಿಲ್ಲ
ನೆರಳು ಕುಗ್ಗಿದಾಗ ಅತ್ತಿಲ್ಲ
ನೆರಳು ಬಿದ್ದಾಗ ನೆರಳಿಲ್ಲ
ನೆರಳು ನರಕಕ್ಕೂ ಕೇರಳಿಲ್ಲ || ೧ ||

ನೆರಳು ಅಳಿಯುವದಕ್ಕೆ ಅಳುಕಿಲ್ಲ
ನೆರಳು ನಾಕಾದಾಗ ಅದಕೆ ಅಂಟಿಲ್ಲ
ನೆರಳು ಕಷ್ಟಕಂಡು ಓಡಿಲ್ಲ
ನೆರಳು ಸುಖನೋಡಿ ಹಿಂಬಾಲಿಸಿಲ್ಲ || ೨ ||

ನೆರಳು ನನ್ನಂತೆ ಕಂಡರೂ ನಾನಲ್ಲ
ನೆರಳು ನಾನಲ್ಲದಿದ್ದರೂ ನನ್ನದೇ ನೆರಳು
ನೆರಳು ನಿರ್ಲಿಪ್ತ  ನಾನೇಕೆ ನಿರ್ಲಿಪ್ತನಲ್ಲ?  || ೩ ||
ಬುಡ ಬುಡ್ಕಿ ಬಾಬಾ

ಒಂಟಿತನ

ಒಂಟಿತನ
======
ನೆರಳಿಗೆ
ಒಂಟಿಯಾಗುವ
ಭಯವಿಲ್ಲ


ನೆರಳಿನ ನಂಟು
=========
ನೆರಳಿಗೆ
ಜನ್ಮ
ಕೊಟ್ಟವನು
ನಾನಲ್ಲ
ಆದರೂ
ಜೊತೆಗಿದೆ
ಜನ್ಮಾಂತರದ
ಸಂಭಂಧದಂತೆ



ಬುಡ ಬುಡ್ಕಿ ಬಾಬಾ

ಹರಕೆ ಕುರಿ

ಹರಕೆ ಕುರಿಗಳಿಗಿರುವಷ್ಟು ಬೇಡಿಕೆ ಮತ್ಯಾವುದಕಿಲ್ಲ ಈ ಕಲಿಗಾಲದಲ್ಲಿ
ಹರಕೆ ಕುರಿಗಳ ಮೇಲೆ ಪ್ರೀತಿ ಎಲ್ಲರಿಗೂ ಆಸೆ ತಮ್ಮದು ಬಲಿ ಇನ್ಯಾರದೋ
ಹೇಳಿ ಇದಕಿಂತ ಒಳ್ಳೆಯದೆನಾದರೂ ಇದ್ದರೆ ಈ ಕಲಿಗಾಲದಲ್ಲಿ || ೧ ||

ಹರಕೆ ಕುರಿ  ಬೇಡುವುದಿಲ್ಲ ಬಂಡೇಳುವುದಿಲ್ಲ ಅದಕೆ ತನ್ನದೆಂಬ ಜೀವನವೂ ಇಲ್ಲ
ಹರಕೆ ಕುರಿ ಬದುಕಿದರೆ ಎಷ್ಟು ಸತ್ತರೆ ಎಷ್ಟು ಸಾಯುವುದಂತೂ ಇದ್ದೇ ಇದೆ
ಬದುಕಿದರೆ ಕೊಲ್ಲಬಹುದು ಆಸೆ ನೆರವೇರಿದ ಮೇಲೆ
ಸತ್ತರೆ ಸಾಯಲಿ ಬಿಡಿ ಹುಡುಕುವ ಇನ್ನೊಂದು ಹರಕೆ ಕುರಿ || ೨ ||

ಹರಕೆ ಕುರಿ ಏನಾದರೂ ಧ್ವನಿ ಎತ್ತಿದರೆ ಎಲ್ಲರಿಗೂ ಕೆಂಡದಂಥ ಕೋಪ
ಹರಕೆ ಕುರಿ ಧ್ವನಿ ಎತ್ತುವುದು ಎಂದರೇನು ಘೋರ ಕಲಿಗಾಲವಿದು
ಸುಮ್ಮನಿದ್ದು ಕುತ್ತಿಗೆ ಕೊಯ್ಯಿಸಿಕೊಳ್ಳಬೇಕಾದ ಹರಕೆ ಕುರಿಗೆ ಇಂದೆಂತಹ
ಕೆಟ್ಟ ಬುದ್ದಿ ಎಂದು ಬೇಸರಿಸಿಕೊಳ್ಳುವರೆ ಎಲ್ಲರೂ || ೩ ||

ಹರಕೆ ಕುರಿಗಳು ಸುಮ್ಮನಿರಬೇಕು ಕೊಟ್ಟರೆ ತಿನಬೇಕು  ಕೊಟ್ಟಿದ್ದು ತಿನಬೇಕು
ಏನು ಬೇಡುವಂತಿಲ್ಲ ಹಸಿವಾದರೂ ಧ್ವನಿ ಎತ್ತುವಂತಿಲ್ಲ || ೪ ||

ಹರಕೆ ಕುರಿಗಳು ಅಲಂಕರಿಸಿದರೆ ಅಲಂಕರಿಸಿಕೊಳ್ಳಬೇಕು ಇಲ್ಲವಾದರೆ
ಸುಮ್ಮನೆ ಕೊಳಕು ಕೊಟ್ಟಿಗೆಯಲ್ಲಿ ಬಿದ್ದಿರಬೇಕು ಎದ್ದು ಧ್ವನಿ ಎತ್ತುವಂತಿಲ್ಲ || ೪ ||

ಹರಕೆ ಕುರಿಗಳು ತೋಳಗಳು ಅವುಗಳಿಗಾಗಿಯೇ ಮಾಡಿದ
ನ್ಯಾಯದ ವ್ಯವಸ್ಥೆಗೆ  ತಲೆ ಬಾಗಬೇಕು  ತಲೆ ಎತ್ತಿ ಧ್ವನಿ ಎತ್ತುವಂತಿಲ್ಲ || ೫ ||

ಹರಕೆ ಕುರಿಗಳು ಕೆಲಸವಿಲ್ಲದಿದ್ದರೋ ಸುಮ್ಮನೆ ಕೂಡುವಂತಿಲ್ಲ
ಹೇಳಿದ್ದು ಮಾಡತಿರಬೇಕು ಏನು ಹೇಳಿದರೂ  ಧ್ವನಿ ಎತ್ತುವಂತಿಲ್ಲ || ೬ ||

ಹರಕೆ ಕುರಿಗಳು ಮೈ ಬಾಗಿ ಎಲ್ಲರನೂ ಗೌರವಿಸಬೇಕು
ತನ್ನ ಸ್ವಾಭಿಮಾನವ ಕಡಿವ ಕಟುಕ ಬಂದರೂ  ಧ್ವನಿ ಎತ್ತುವಂತಿಲ್ಲ || ೭ ||

ಹರಕೆ ಕುರಿಗಳು ಸುತ್ತಮುತ್ತಲಿನವರು ಹೇಳಿದ್ದು ಕೇಳಬೇಕು ಅವರ ಆಸೆಯೇ
ತನ್ನಾಸೆಯಂತೆ ಮೈ ಮುರಿದು ದುಡಿಯಬೇಕು ತನ್ನಾಸೆಗೆ ಧ್ವನಿ ಎತ್ತುವಂತಿಲ್ಲ || ೮ ||

ಹರಕೆ ಕುರಿಗಳು ನಾನು ಇನ್ನೊಂದು ದಿನ ಜೀವಸಬೇಕು ಎಂದು ಆಸೆ ಪಡುವಂತಿಲ್ಲ
ಬಲಿ ಕೊಡುವ ದಿನ ಸುಮ್ಮನೆ ಗೋಣು ಒಡ್ಡಬೇಕು  ಧ್ವನಿ ಎತ್ತುವಂತಿಲ್ಲ || ೯ ||

ಹರಕೆ ಕುರಿಗಳು ಸತ್ತವರಂತೆ ಬಾಳಬೇಕು ಬದುಕಿರುವಷ್ಟು ಕಾಲ, ಸಾವನ್ನು ಅಪ್ಪಿಕೊಳ್ಳಬೇಕು
ಆ ದಿನಕಾಗಿಯೆ ಕಾದಿರುವೆ ಎಂಬ ಸಂಭ್ರಮದಲಿ ಧ್ವನಿ ಎತ್ತುವಂತಿಲ್ಲ || ೧೦ ||

Sunday, March 20, 2016

ನಗರಗಳೆಂಬ ಯಂತ್ರ

ನಗರಗಾಳಿಗಿವೆ ಕರಾರುವಾಕ್ಕಾಗಿ ನಡೆಯುವ ಯಂತ್ರದಂತೆ
ಇದಕೆ ಮಾನವರಲ್ಲ ಯಂತ್ರ ನಡೆಯುತ್ತಿರಲು
ಬೇಕಾಗಿವೆ ಕೆಲಸಗಾರರೆಂಬ ಬಿಡಿ ಭಾಗಗಳು || ೧ ||

ಬಿಡಿ ಭಾಗಗಳ ಜೀವನಕಿಲ್ಲ ಇಲ್ಲಿ ಬೆಲೆ
ಏನಿದ್ದರೂ ನಡೆಯುತ್ತಿರಬೇಕು ಯಂತ್ರ
ಯಂತ್ರಕ್ಕಾಗಿ ಮಾನವರೋ ಮಾನವರಿಗಾಗಿ ಯಂತ್ರವೋ
ಏನೋ ಒಂದು ಒಟ್ಟಿನಲಿ ತಿರುಗುತಿರಬೇಕು ಚಕ್ರ || ೨ ||

ಬಹು ಮಹಡಿ ಕಟ್ಟಡಗಳೆಂಬ ಗೋದಾಮಿನಲಿ
ಸಂಗ್ರಹಿಸಿಡುತ್ತಾರೆ ಈ ಬಿಡಿ ಭಾಗಗಳನ್ನು
ನಡೆಯುತ್ತಿರಲು ಈ ಯಂತ್ರ ಮತ್ತು
ನಾಳೆ ಬೇಕಾಗುವ ಬಿಡಿ ಭಾಗಗಳ ಉತ್ಪಾದಿಸಲೆಂದು || ೩ ||

ಕರ್ಮ ಭೂಮಿ - ಜನ್ಮ ಭೂಮಿ

ಬೆಂಗಳೂರಿನಿಂದಾಚೆ ಬೆಳಗಾ೦ವಿಗೆ
ಹೋಗಲು  ಭಯಂಕರ ಭಯ
ಹೋದರೊಮ್ಮೆ ಮರಳಿ ಬಾರಲು
ಜಪ್ಪಯ್ಯ ಅಂದರು ಕೇಳದಂತಾಗುವ
ಮಗುವಾಗುವದೇನೋ ಈ ಮನ || ೧ ||

ಬೆಂಗಳೂರು ಕರ್ಮ ಭೂಮಿ
ಬೆಳಗಾ೦ವಿ ಜನ್ಮ ಭೂಮಿ
ಹೂದರೆ ಬೆಳಗಾ೦ವಿಗೆ ತಾಯಿ
ಮಡಿಲಲ್ಲಿಯ ಮಗುವಾಗಿ ಎಲ್ಲ
ಮರೆತುಬಿಡುವೆನೇನೋ ಎಂಬ ಆತಂಕ || ೨ ||


ಮರೆಯಲಾಗದು ಸಂಸಾರಿ ನಾನು
ಮರಳಿ ಬರಲೇ ಬೇಕು
ಮರಳಿ ಬರಬೇಕೆಂಬ ನೋವು
ನುಂಗಿ ಹಾಕುವುದು ಜನ್ಮ ಭೂಮಿಯ
ಕಡೆಗಿನ ಪಯಣದ ಸಂತೋಷ ಉಲ್ಲಾಸವನ್ನು || ೩ ||

ವಿಶ್ರಾಂತಿ

ವಿಶ್ರಾಂತಿ ತಾಣ ಅಡಗಿದೆ
ಎಲ್ಲ ಮರೆತು ಅದಾವುದೋ
ಒಂದು ಗಳಿಗೆಯಲ್ಲಿ ಮುಳುಗಿ
ಮನ ಸ್ತಬ್ಡವಾದಾಗ || ೧ ||

ಆ ಗಳಿಗೆಯ ಕೊಂಡಿ
ಅದೆಂತದೊಂದು ಭಾವ
ಭಾವದ ಆಳ ಅನಂತ
ತಿಳಿಯದದು ತಳ ತಲುಪದೆ || ೨ ||

ಕಲೆಯೊಂದು ಜಾರುಬಂಡಿ ತಲುಪಲಲ್ಲಿ
ಹರಿದು ಸಂದೇಹಗಳ ಸಂಕೋಲೆ
ಒಪ್ಪಿಸಿ ನೋಡಿ  ನಿಮ್ಮನ್ನು ನೀವು
ಆ ಜಾರು ಬಂಡೆಗೆ || ೩ ||

ಸರ್ರನೆ ಜಾರಿಸಿ ಕರೆದೊಯ್ಯುವುದು
ಆ ಸ್ತಭ್ದ ಗಳಿಗೆಗೆ
ಕ್ಷಣವಾದರೂ ಅಲ್ಲಿ ವಿರಮಿಸಿ
ತಿಳಿಯಿರಿ ವಿಶ್ರಾಂತಿ ಏನೆಂದು || ೪ ||

STATUE

ಚಿಕ್ಕವರಿದ್ದಾಗ ಆಡುತಿದ್ದ
ಆಟವದು STATUE
STATUE ಎಂದ ಕೂಡಲೇ
ಪ್ರತಿಮೆಯಂತಾಗಬೇಕು
ಅಲುಗಾಡಿದರೆ ಸೋತಂತೆ || ೧ ||

ಮೇಷ್ಟ್ರಿಲ್ಲದ ತರಗತಿಯಲ್ಲಿ
ತರಲೆ ಗಲಾಟೆ ಚೇಷ್ಟೆ  
ಮಾಡುವ ಮಕ್ಕಳಂತೆ
ಕಾಡುತಿದ್ದವು ವಿಚಾರಗಳು
ಹದ್ದು ಬಸ್ತಿಗೆ ಸಿಗದೆ || ೨ ||

ಅಂದೆ ಅವುಗಳತ್ತ ತಿರುಗಿ
STATUE || ೩ ||

Thursday, March 17, 2016

ಪ್ರಜ್ಞೆ (being john malkovich ಚಿತ್ರದ ಒಂದು ಭಾವಾನುವಾದ)

ಎಲೆ ! ಮಂಗವೇ ನೀನಗೆ ಗೊತ್ತಿಲ್ಲ
ನೀನೆಷ್ಟು ಅದೃಷ್ಟವಂತನೆಂದು
ಈ ಪ್ರಜ್ಞೆ ಎಂಬುದೊಂದು
ಭಯಾನಕ ಶಾಪ || ೧ ||

ನಾನು ವಿಚಾರ ಮಾಡುತ್ತೇನೆ
ನಾನು ಅನುಭವಿಸುತ್ತೇನೆ
ನಾನು ಬಳಲುತ್ತೇನೆ
ಅದಕ್ಕೆ ಪ್ರತಿಯಾಗಿ
ನಾನು ಕೇಳುವುದೊಂದೇ
ಕೊಡಿ ಒಂದು ಅವಕಾಶ
ನನ್ನ ಕೆಲಸ ಮಾಡಲು || ೨ ||

ಆದರೆ ಅವರು ಕೊಡುವುದಿಲ್ಲ
ಏಕೆಂದರೆ ನಾನು ಸಮಸ್ಯೆಗಳನ್ನು
ಎತ್ತಿ ತೋರಿಸುತ್ತೇನೆಂದು || ೩ ||




Tuesday, March 15, 2016

ಒಳಗಿನ ಕೂಗು

ಪ್ರಕೃತಿ ಕರೆಗಳು
ಎರಡಲ್ಲ
ಮೂರು
ಮೂರನೆಯದು
ಒಳಗಿನ ಕೂಗು
ತಡೆದರೆ
ಬಹು ಕಾಲ
ಇದನು
ಮಾಡುತದೆ
ಇದು ಕೂಡ
ಮಹಾ ಫಜೀತಿ

ಬೆಳಗಾ೦ವಿಯ ಭೇಲು

ಅಕ್ಕ ಪಕ್ಕದವರು
ಮೆಲ್ಲುವುದು
ಕಂಡು
ಬಾಯಿ ನೀರೂರಿ
ಆಲಿ ಪಾಕ್ ದ
ಜೊತೆಗೆ
ಕಬ್ಬಿನ ಹಾಲು
ಸವಿಯುತ್ತಾ
ಬೆಳಗಾ೦ವಿಯ
ಭೇಲ್ ಪುರಿ
ಚಪ್ಪರಿಸಿ
ಮುಗಿದಾಗ
ಅನ್ನುವುದು
ಮನ
ಭಲೇ ಭಲೇ
ಬರಲಿ
ಇನ್ನೊಂದು
ಭೇಲು

ಉಲ್ಕೆ

ಕತ್ತಲಿಗೆ  ಕಟ್ಟು ಬಿದ್ದು
ಶಾಶ್ವತವಾಗಿ
ನಿರ್ವಾತದಲಿ
ಸುತ್ತುವ
ಆಕಾಶ ಕಾಯವಾಗುವ
ಬದಲು
ಕತ್ತಲಿನ ಬಂಧನವ ಕಡಿದು
ಕ್ಷಣ ಮಾತ್ರವಾದರೂ
ಗಾಳಿಯಲಿ ನಲಿದು
ಬೆಳಗಿ ಉರಿದು ಮರೆಯಾಗುವ
ಉಲ್ಕೆಯಾಗುವುದು ವಾಸಿ




Wednesday, March 9, 2016

Katyar Kaljat Ghusli Marathi 2015 - ಸಿನೆಮಾದ ಭಾವಾನುವಾದಗಳು


ಈ ಕಠಾರಿ
======

ಕಲಾಕಾರರಿಗೆ
ಶತ್ರುಗಳು
ಬಹಳ
ಅವರ
ಬಹು
ದೊಡ್ಡ
ಶತ್ರು
ಅವರದೇ
ಅಹಂಕಾರ

ಶತ್ರುಗಳ
ದಮನಕ್ಕಾಗಿಯೇ
ಅವರಿಗಿರಲಿ
ಈ ಕಠಾರಿ

ವಿದ್ಯೆ ಹಾಗೂ ಕಲೆ
============

ವಿದ್ಯೆಯೇ ಬೇರೆ
ಕಲೆಯೇ ಬೇರೆ

ವಿದ್ಯೆ ಹೊರಗಿನಿಂದ ಒಳಗೆ
ಕಲೆ ಒಳಗಿನಿಂದ ಹೊರಗೆ

ವಿದ್ದೆಗೆ ಮಸ್ತಿಷ್ಕ ಸಾಕು
ಕಲೆಗೆ ಮಸ್ತಿಷ್ಕ ಹಾಗೂ ಹೃದಯ ಎರಡು ಬೇಕು

ವಿದ್ಯೆ ತಾಳದಂತೆ ಕಲಿಯಬಹುದು ಕಲಿಸಬಹುದು
ಕಲೆ ಲಯವಿದ್ದಂತೆ ಹುಟ್ಟಿನಿಂದ ಅಂತರ್ಗತ

ವಿದ್ಯೆ ಜಗದ ಒಗಟು ಬಿಡಿಸಿದರೆ
ಕಲೆ ಜಗದಲಿ ಒಗಟು ಸೃಷ್ಟಿಸುತ್ತೆ


ಗುರು ಶಿಷ್ಯ - ೧
==========

ಗುರುವ್ಯಾರೆಂದರೆ
ತನ್ನ ಕಾಲ
ಮೇಲೆ ನಿಂತ
ಶಿಷ್ಯನಿಗೆ
ಯೋಗ್ಯ
ಹಾಗೂ
ಹತ್ತಿರದ
ದಾರಿ
ತೋರುವವ

ಗುರು ಶಿಷ್ಯ - ೨
==========

ಗುರುವೆಂಬ
ದೀಪ
ತನ್ನ
ಜ್ವಾಲೆಯನು
ತೈಲ
ಬರಿದಾಗುವ
ಮೊದಲು
ಶಿಷ್ಯನೆಂಬ
ದೀಪದಲಿ
ಪ್ರಜ್ವಲಿಸಬೇಕು

ಗಾಯಕ -೧
=======

ಕಂಠವು
ಮಸ್ತಿಷ್ಕ
ಹಾಗೂ
ಹೃದಯದ
ಮಧ್ಯವಿರುವುದು
ಗಾಯಕ
ಸಂಗೀತ
ಒಲೆಯಲು
ಎರಡನ್ನೂ
ಹದವಾಗಿ
ವಿನಿಯೋಗಿಸಬೇಕೆಂಬುದರ
ಸೂಚನೆ

ಗಾಯಕ -೨
=======

ಗಾಯಕ
ರಾಗದಲಿ
ರಾಗ
ಬೆರೆಯದಂತೆ
ವಹಿಸಿದ
ಎಚ್ಚರ
ಮಾನವೀಯತೆಯಲ್ಲಿ
ಅಹಂಕಾರ
ಬೆರೆಯದಿರಲೂ
ವಹಿಸಬೇಕು

ಭಾವಗಳ ಸುನಾಮಿ

ಕಾವ್ಯದ
ಸಮುದ್ರದಲಿ
ರಾಗಗಳ
ಅಲೆಗಳಿಗೆ
ಸ್ವರಗಳ
ಕಂಪನ
ಬೆರೆತಾಗ
ಉಕ್ಕುವುದು
ಭಾವಗಳ
ಸುನಾಮಿ

Tuesday, March 8, 2016

ಮಿನುಗುವುದು (ವಿಶ್ವ ವಾಣಿ - ಶ್ರೀವತ್ಸ ಜೋಶಿ ಲೇಖನದ ನೀತಿ ಕತೆಯ ಕಾವ್ಯಾನುವಾದ)

ಸರ್ಪವೊಂದು ಮಿಂಚುಹುಳುವಿನ
ಹಿಂದೆ ಬಿದ್ದು ಅದನು
ತಿನ್ನಲು ಹವಣಿಸುತಿತ್ತು || ೧ ||

ಭಯದಿಂದ ಅತ್ತಿಂದಿತ್ತ ಹಾರಾಡಿದ
ಮಿಂಚುಹುಳುವನ್ನು
ಬೆಂಬಿಡದೆ ಹಿಂಬಾಲಿಸಿತ್ತು ಸರ್ಪ || ೨ ||

ಮೂರು ದಿನ ತಪ್ಪಿಸಿಕೊಂಡು
ದಣಿದ ಮಿಂಚುಹುಳು ಕೊನೆಗೂ
ಸುಸ್ತಾಗಿ ಶರಣಾಗಿತ್ತು || ೩ ||

ಗೆದ್ದ ದರ್ಪದ ನಗೆ ಬೀರಿದ ಸರ್ಪಕ್ಕೆ
ಮಿಂಚುಹುಳು ವಿನಂತಿಸಿತು ನನ್ನ ಕೊನೆ ಆಸೆ
ಕೇಳಬಹುದೇ ನಾನು ನಿನಗೆ ಮೂರು ಪ್ರಶ್ನೆ || ೪ ||

ಸರ್ಪವೆಂದಿತು ತೀರಿಸಿಕೊ
ಸಾಯುವ ಮೊದಲು
ಈ ನಿನ್ನ ಕೊನೆ ಆಸೆ || ೫||

ಮಿಂಚುಹುಳುವಿನ ಮೊದಲ ಪ್ರಶ್ನೆ
ನಾನಿದ್ದೇನೆಯೇ ನಿನ್ನ ಆಹಾರ ಸರಪಣಿಯಲ್ಲಿ?
ಸರ್ಪವೆಂದಿತು ಇಲ್ಲ  || ೬ ||

ಮಿಂಚುಹುಳುವಿನ ಎರಡನೆಯ ಪ್ರಶ್ನೆ
ನಾನೇನಾದರೂ ನಿನಗೆ ಕೆಡಕು  ಮಾಡಿದ್ದೇನೆಯೇ  ?
ಸರ್ಪವೆಂದಿತು ನೀನಾ ಇಲ್ಲವೇ ಇಲ್ಲ  || ೬ ||

ಮಿಂಚುಹುಳು ಆಶ್ಚರ್ಯದಿಂದ ಕೊನೆ ಪ್ರಶ್ನೆ ಕೇಳಿತು
ಹಾಗಾದರೆ ನನ್ನನೇಕೆ ಕೊಲ್ಲಲು ಹವಣಿಸುತ್ತಿರುವೆ?
ಸರ್ಪವೆಂದಿತು ನೀನು ಮಿನುಗುವುದು ನನ್ನಿಂದ ಸಹಿಸಲಾಗುತಿಲ್ಲ || ೭ ||
ಬುಡ ಬುಡ್ಕಿ ಬಾಬಾ

ವಿಶ್ವ ವಾಣಿ ೦೬ ಮಾರ್ಚ್ ೨೦೧೬  "ತಿಳಿರು ತೋರಣ" ಅಂಕಣದಲ್ಲಿ
ಶ್ರೀವತ್ಸ ಜೋಶಿ ಲೇಖನದ ನೀತಿ ಕತೆಯ ಕಾವ್ಯಾನುವಾದ



Monday, March 7, 2016

ಸೋರಿಕೆ

ಬರಿ
ತೋರಿಕೆಗಾಗಿ
ಮಾಡುವ
ಕೆಲಸ
ಹೂರಣವಿಲ್ಲದ
ಹೋಳಿಗೆಯಂತೆ
ಸಪ್ಪೆ || ೧ ||

ಬರಿ
ತೋರಿಕೆಗಾಗಿ
ಮಾಡುವ
ಕೆಲಸ
ತಿರುಳಿಲ್ಲದ
ಹಣ್ಣಿನಂತೆ
ವ್ಯರ್ಥ || ೨ ||

ಬರಿ
ತೋರಿಕೆಗಾಗಿ
ಮಾಡುವ
ಪ್ರತಿ
ಕೆಲಸ
ಮಾನವ
ಜನಾಂಗದ
ಬೆಳವಣಿಗೆಯ
ಬೊಕ್ಕಸದ
ಸೋರಿಕೆ || ೩ ||
ಬುಡ ಬುಡ್ಕಿ ಬಾಬಾ

Saturday, March 5, 2016

ಬಾಳಿನ ಚದುರಂಗದಾಟ

ಬಾಳಿನ ಚದುರಂಗದಾಟ ಭಾರೀ ಜಟಿಲ
ಹುಷಾರಾಗಿರಿ ಗೆಳೆಯರೇ
ಆನೆ ಕುದುರೆ ಒಂಟೆ ಮಂತ್ರಿ ಎಂಬ ಪದವಿಗಳ ತಲೆಗೇರಿಸಿಕೊಳ್ಳದೆ || ೧ ||

ತಮ್ಮ ಆಟದ  ಗೆಲುವಿಗಾಗಿ
ಕಾಯಿಗಳ ಹುಡುಕಾಟದಲ್ಲಿರುತ್ತಾರೆ  ನಿಪುಣರು
ಕೊಡಬಹುದು ಅವರು ನೀವು ಕೇಳಿದ ಪದವಿಯನು || ೨ ||

ನಿಮ್ಮನ್ನು ಮುನ್ನಡೆಸುತ್ತಾರೆ ವಿಧ ವಿಧ ಬಿರುದುಗಳ ಕೊಟ್ಟು
ಆದರೆ ಅದು ನಿಮ್ಮ ಒಳಿತಿಗಾಗಿ ಅಲ್ಲ
ಅವರ ಆಟಕ್ಕೆ ಸಹಕಾರಿಯಾಗಿದ್ದೀರಿ ಎಂಬುದಕೆ || ೩ ||

ಅವರ ಆಟದ ಗೆಲುವಿಗೆ ನಿಮ್ಮ ಬಲಿ ಬೇಕಾದರೆ
ಒಂದು ಕ್ಷಣ ಯೋಚಿಸದೇ ನಿಮ್ಮ ಬಲಿ ಕೊಟ್ಟು
ತಮ್ಮ ಆಟ ಮುಂದುವರೆಸುತ್ತಾರೆ || ೪ ||

ಕೈ ತೊಳೆದುಕೊಂಡು ನಿಮ್ಮ ಬೆವರು ರಕ್ತ ಕಣ್ಣೀರನ್ನು
ಮತ್ತೆ ಅನುವಾಗುತ್ತಾರೆ ಹುಡುಕಲು ಹೊಸ ಕಾಯಿ ಅವರ ಹೊಸ ಆಟಕ್ಕೆ
ಎಚ್ಚರ ಅವರ ಮುಂದಿನ ಕಾಯಿ ನೀವು ಆಗಿರಬಹುದು || ೫ ||

ನೀಲಿ ಬಾನ

ನನ್ನಿಂದ ಅದಾಗುವುದಿಲ್ಲ ನನ್ನಿಂದ ಇದಾಗುವದಿಲ್ಲ
ನಾನಿದಕೆ ಲಾಯಕಲ್ಲ ನಾನೆಂದೂ ಇದನು ಮಾಡೆ ಇಲ್ಲ
ಎಡವಿ ಮುಗ್ಗರಿಸಿದರೆ ಗಾಯ ಸಹಿಸಲಾಗುವುದಿಲ್ಲ
ಬಿದ್ದು ಬಿಟ್ಟರೆ ಏಳಲಾಗುವುದಿಲ್ಲ
ಎಂಬ ಸಲಾಕೆಗಳ ಬಳಸಿ
ಪಂಜರ ಒಂದನ್ನು ಕಟ್ಟಿ ಬಿಡುತ್ತೇವೆ ನಮ್ಮ ಸುತ್ತ || ೧ ||

ಪಂಜರಕೆ  ಭಯದ ಬಾಗಿಲೊಂದು ಮಾಡಿ
ಸಂದೇಹದ ಬೀಗ  ಜಡಿದು ಅದರಿಂದ
ಆತ್ಮ ವಿಶ್ವಾಸದ ಕೀಲಿ ಕೈಯನ್ನು ತೆಗೆದು
ಮನಸಿನ ಮೂಲೆಯೆಂಬ ಕಿಸಿಯೆಲ್ಲೆಲ್ಲೋ
ತುರುಕಿ ಮರೆತುಬಿಡುತ್ತೇವೆ || ೨ ||

ಆಮೇಲೆ ಬಿಡುವುದಿಲ್ಲ ಯಾರನ್ನೂ
ದೇವರನೂ ಕೂಡ ದೂಷಿಸಿ
ಬಂಧನಕೆ ಕೊಡುತೆವೇ ನೂರಾರು ಕಾರಣ
ಅದು ಸರಿ ಇಲ್ಲ ಇದು ಹೀಗಾಗಿಲ್ಲ
ಮತ್ತಿನೆನನ್ನೊ ಬಡ ಬಡಿಸುತ್ತಾ ಜೀವನ ಕಳೆಯುತ್ತೇವೆ || ೩ ||

ಇದೆಲ್ಲದರ ಬದಲು ಮನಸಿನ ಕಿಸೆ ತಡುಕಿ
ಆತ್ಮ ವಿಶ್ವಾಸದ ಕೀಲಿ ಕೈ ಹುಡುಕಿ
ಸಂದೇಹದ ಬೀಗ ತೆರೆದು ನಾವೇ ಮಾಡಿದ
ಪಂಜರದಿಂದ ಬಿಡುಗಡೆ ಹೊಂದಿ
ಹಾರಿ ನೋಡಿ ಬಿಡಬಹುದಲ್ಲ ನೀಲಿ ಬಾನ ಒಮ್ಮೆ || ೪ ||


ಬದುಕುವ ರೀತಿ

ತಾ ಬದುಕುವ
ರೀತಿ
ತನ್ನ ತಾನು
ಗೌರಿವಿಸಿ
ಮೆಚ್ಚುವಂತಿದ್ದರೆ
ಸಾಕು

ಕೆಸರಲ್ಲಿ ಕಮಲ

ಕೆಲವೊಮ್ಮೆ
ಕೆಸರು ಅಥವಾ
ಕೆಸರಂತಿರುವ
ವಾತಾವರಣದಲ್ಲಿ
ಇರುವುದು ಬಿಟ್ಟು
ಬೇರೆ ಆಯ್ಕೆ
ಉಳಿದಿರುವುದಿಲ್ಲ
ಆಗ
ಕಾಲವನ್ನು
ಕಳೆಯಬೇಕು
ಕೆಸರಲ್ಲೂ
ಅರಳುವ
ಕಮಲವನ್ನು
ನೆನೆಪಿಸಿಕೊಂಡು





ನುಗ್ಗೋಣ ನುಗ್ಗೋಣ ನುಗ್ಗೋಣ

ನುಗ್ಗಲೇಬೇಕು
ನುಗ್ಗುವುದು ಅನಿವಾರ್ಯ
ಕೈ ಚೆಲ್ಲಿ ಕೂಡಲಾಗದು
ಎಡುವಿ ಬೀಳುವ ಭಯಕೆ || ೧ ||

ಎಡವುದಕೆ ಎದೆಗುಂದುವುದೇ
ಛೇ ! ಎಂದೂ ಇಲ್ಲ
ಎಡವಿದರೂ ಕ್ಷಣ ಮಾತ್ರದಲಿ
ಸುಧಾರಿಸಿಕೊಳ್ಳುವ
ಚಾಕ ಚಕ್ಯತೆ ಬೆಳಸಿಕೊಳ್ಳೋಣ || ೨ ||

ನುಗ್ಗೋಣ ಸುಂಟರ ಗಾಳಿಯಂತೆ
ನುಗ್ಗೋಣ ಮದವೇರಿದ ಸಲಗದಂತೆ
ನುಗ್ಗೋಣ ಧುಮ್ಮಿಕ್ಕುವ ಜಲಪಾತದಂತೆ
ನಮ್ಮ ಮನ ಬಯಸಿದ ಹಾದಿಯಲಿ || ೩ ||

ಹಾದಿಯ ಅಡೆತಡೆಗಳನು
ನಿರ್ನಾಮ ಮಾಡಿ
ಕೊನೆಯುಸಿರಿರುವರೆಗೂ
ನುಗ್ಗೋಣ ನುಗ್ಗೋಣ ನುಗ್ಗೋಣ || ೪ ||

ನಿಶ್ಚಿತತೆ ಅನಿಶ್ಚಿತತೆ

ನಿಶ್ಚಿತತೆ ಬದುಕುವುದು
ಅನಿಶ್ಚಿತತೆಯ ನೆರಳಿಗಂಜಿ
ಅನಿಶ್ಚಿತತೆ ಸದಾ ಸಿದ್ದವಿರುತ್ತದೆ
ನಿಶ್ಚಿತತೆಯ ಸ್ವಾಗತಿಸಲು || ೧ ||

ನಿಶ್ಚಿತತೆಯ ಕ್ಷಣಿಕ ಸುಖ
ಅನಿಶ್ಚಿತತೆಯ ದುಗುಡ
ಬಂಧಿಸಿವೆ ಬದುಕನ್ನು || ೨ ||

ನಿಶ್ಚಿತತೆ ಅನಿಶ್ಚಿತತೆಯ
ಮೀರಿ ಎದ್ದು ಹೊರಟುಬಿಡಿ
ಆಮೇಲೆ ಉಳಿದದ್ದು
ತಂತಾನೇ ಆಗುತ್ತೆ || ೩ ||
ಬುಡ ಬುಡ್ಕಿ ಬಾಬಾ

ಕೊನೆ ಎರಡು ಸಾಲನ್ನು ರಾಧಾಕೃಷ್ಣ ಭಡ್ತಿ ಅವರ ಲೇಖನದಿಂದ ಎರವಲು ಪಡೆದಿದ್ದು

Thursday, March 3, 2016

ಅಂತ: ಸತ್ವ

ಅಂತಸ್ತುಗಳ
ಮೇಲೆ
ಅಂತಸ್ತುಗಳ
ಕಟ್ಟಿದ ಮಾತ್ರಕ್ಕೆ
ಅಂತ: ಸತ್ವ
ಬೆಳೆಯುವುದಿಲ್ಲ || ೧ ||

ಮನೆಗಳ
ಮೇಲೊಂದು
ಮನೆಯ
ಕೊಂಡ ಮಾತ್ರಕ್ಕೆ
ಮನ
ಮಾಗುವುದಿಲ್ಲ || ೨||

ಹಣದ
ಮೂಟೆ
ಮೂಟೆಗಳ
ಕೂಡಿಟ್ಟ ಮಾತ್ರಕ್ಕೆ
ಹೆಣವಾಗುವುದು
ತಪ್ಪುವುದಿಲ್ಲ || ೩||
ಬುಡ ಬುಡ್ಕಿ ಬಾಬಾ

Wednesday, March 2, 2016

ಯಾರಿಗಾಗಿ ಸೌಂದರ್ಯ ?

ಕಾವ್ಯವೊಂದು ಕೇಳಿತು ಕವಿಗೆ
ಯಾರಿಗಾಗಿ ತುಂಬಿದೆ ನನ್ನಲ್ಲಿ ಸೌಂದರ್ಯ ನೀನು || ೧ ||

ಕವಿ ಹೇಳಿದ ಕಾವ್ಯಕ್ಕೆ
ಬೆಟ್ಟದ ಹೊವಿನ ಪರಿಮಳ ಯಾರಿಗಾಗೋ ಅವರಿಗಾಗಿ
ನವಿಲುಗರಿಯ ಕಣ್ಣು  ಯಾರಿಗಾಗೋ ಅವರಿಗಾಗಿ
ಕಾಡಿನ ಹಕ್ಕಿಗಳ ಕಲರವ ಯಾರಿಗಾಗೋ ಅವರಿಗಾಗಿ
ಯಾರಾದರೂ ಅನುಭವಿಸಲಿ ಅನುಭವಿಸದಿರಲಿ
ಎಲ್ಲದರಲೂ ಸೌಂದರ್ಯವನು ತುಂಬಿದವನಿಗಾಗಿ || ೨ ||

ಶೀನು ಸೀನು SCENE (ಮಯೂರ ಫೆಬ್ರವರಿ ೨೦೧೬ [ಅನೇಕ: ದ ಮಾರ್ಜಿನಲ್ ಮ್ಯಾನ್, ಕೆ. ವಿ. ತಿರುಮಲೇಶ ] ಕತೆಯ ಒಂದು ಘಟನೆ)

ಫರ್ಸ್ಟ್ RANK ಶೀನುಗೆ
ಮನಸಾಗಿತ್ತು
ಕಾಲೇಜಿಗೆ
ಹೊಸತಾಗಿ ಸೇರಿದ
ಶಾರ್ಟ್ ಸ್ಕರ್ಟ್
ಸುಂದರಿ
ಏಂಜೆಲಾ ಮೇಲೆ || ೧ ||

ಪೇಟೆಯನೆಲ್ಲ
ತಡಕಾಡಿ
ಕೊನೆಗೂ
ಬುಕ್ ವರ್ಮ
ಕೊಂಡಿದ್ದ
ಬೂಕೆಯನೊಂದು
ಮೊದಲ ಬಾರಿ || ೨ ||

ಮರುದಿನ
ಕಾಲೇಜಿನ
ಗೇಟ್ ಬಳಿ
ಕಾದು ಏಂಜೆಲಾಗೆ
ಬೂಕೆಯನು
ನಡಗುವ ಕೈಯಿಂದ
ಕೊಟ್ಟಿದ್ದ || ೩ ||

ನಸುನಕ್ಕು
ಏಂಜೆಲಾ
ಬೂಕೆಯ
ಮೂಸಿದಾಗ
ಬುಕ್ ವರ್ಮಗೆ
ಸ್ವರ್ಗ ಮೂರೇ
ಗೇಣು || ೪ ||

ಏಂಜೆಲಾ ಎಂದಳು
ಎಕ್ಷಿ ಎಹ ಎಹ ಎಕ್ಷಿ
ಸೀನು
ಸೀನಿನ ಮೇಲೊಂದು ಸೀನು
ಸರಣಿ ಸೀನು
ಅದನು ಕೇಳಿ
ಕಾಲೇಜಿನವರೆಲ್ಲ ಸುತ್ತ
ನೆರೆದಾಗ ಆಗಿತ್ತು
ಶೀನುನ SCENE || 5 ||

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...