Friday, October 28, 2016

ದೀಪಾವಳಿ - ೨೦೧೬

ಸುಂದರ ಸದ್ಗುಣಗಳು ಸೇರೆಯಾಳಾಗಿವೆ
ತಮೋಗುಣಗಳೆಂಬ ನರಕಾಸುರನಿಗೆ
ಪ್ರತಿ ನರಕ ಚತುರ್ದಶಿಗೆ ತಮೋ
ಗುಣಗಳೆಂಬ ನರಕಾಸುರನ ಸಂಹರಿಸಿ
ಸದ್ಗುಣಗಳ ಬಿಡಿಸಿ ಉದ್ಧರಿಸೊ
ನಮ್ಮನೆಲ್ಲ  ಶ್ರೀ ಕೃಷ್ಣ

Thursday, October 27, 2016

ಆಕಾಶ ಬುಟ್ಟಿಯ ದೀಪ

















(ದೀಪದಂತೆ ಉರಿದು ನಮ್ಮ ಜೀವನಕೆ ಬಣ್ಣ ಬಣ್ಣದ ಬೆಳಕು ಕೊಡುವ ನಮ್ಮ ಭಾರತೀಯ ಸೇನೆಗೆ)

ದೀಪಾವಳಿಯ ರಾತ್ರಿಯಲಿ
ಆಕಾಶ ಬುಟ್ಟಿಯ
ಬಣ್ಣ ಬಣ್ಣದ ಬೆಳಕನ್ನು
ಕಂಡು ಅದನು ಹೊಗಳುವರೆ
ಕೇಳುವವರೇ  ಎಲ್ಲರೂ
ಆದರೆ ಅದರ ಒಳಗಿದ್ದು
ಯಾರಿಗೂ ಕಾಣದೆ
ಉರಿದು ಬಿಸಿಯಾಗಿ ಕಪ್ಪಾಗಿ
ಬೆಳಕ ನೀಡಿದ ಆ ದೀಪವ
ಕಂಡವರಾರು ಕೇಳಿದವರಾರು?
ಬುಡ ಬುಡ್ಕಿ ಬಾಬಾ

Sunday, October 23, 2016

ಬಾಳೊಂದು ಮಹಾಭಾರತ

ಬಾಳೊಂದು ಮಹಾಭಾರತ
ಪ್ರತಿ ದಿನದ ಜೀವನವೇ ಕುರುಕ್ಷೇತ್ರ ಯುದ್ಧ
ಬರೀ ಶತ್ರುಗಳಿಲ್ಲ ರಣರಂಗದಲ್ಲಿ
ಉಂಟು ಇಲ್ಲಿ ಬಂಧು ಮಿತ್ರರೂ ಕೂಡ
ಮಹಾಭಾರತದ ಯುದ್ಧಕ್ಕಿಂತ
ಜೀವನದ ಯುದ್ಧ ಕಠಿಣ || ೧ ||

ಕೌರವರು ಕೌರವರೇ ಆಗಿ ಉಳಿಯರು
ಪಾಂಡವರು ಪಾಂಡವರಾಗೀ ಉಳಿಯರು
ನಡೆದಿದೆ ಪಕ್ಷಗಳ ಬದಲಾವಣೆ ಆಗಾಗ
ಧರ್ಮದ ಧ್ರುವ ನಕ್ಷತ್ರ ಹುಡುಕಿ
ಸರಿಯಾದ ಪಕ್ಷ ಆರಿಸಿದರೆ
ಅರ್ಧ ಯುದ್ಧ ಗೆದ್ದಂತೆ || ೨ ||

Saturday, October 22, 2016

ಸಾವು - ಹುಟ್ಟು

ಜೀವನದ ಕಥೆ ಪುಸ್ತಕದಲಿ
ದಿನಗಳೆಂಬ ಹಾಳೆಯಲಿ ಬರೆಯುತಿವೆ
ನಮ್ಮ ಕರ್ಮಗಳು ಕಥೆ ಪ್ರತಿ ಕ್ಷಣ
ಸಾವಲ್ಲ ಈ ಕಥೆಯ ಕೊನೆ
ಅದು ಬರಿ ಅಧ್ಯಾಯದ ಕೊನೆ
ಮುಂದುವರೆಯುವದು ಅದೇ ಕಥೇ
ಹುಟ್ಟೇ೦ಬ  ಹೊಸ ಅಧ್ಯಾಯದಲಿ

Friday, October 21, 2016

ಕರ್ಮಗಳ ಖಾತೆ

ತೆರೆಯಲು ಈ ಖಾತೆ ನಿಲ್ಲ ಬೇಕಿಲ್ಲ ಸಾಲಲ್ಲಿ
ತೆರೆಯಲು ಈ ಖಾತೆ ಬೇಕಿಲ್ಲ ಯಾರ ಶಿಫಾರಸು ಪತ್ರ
ತೆರೆದರೆ ಒಮ್ಮೆ ಈ ಖಾತೆ ಇರುವುದು ಇದು ಸದಾ ಸಕ್ರಿಯ
ಈ ಖಾತೆಯಲಿ ಪ್ರತಿ ತಿಂಗಳು ಲೆಕ್ಕ ಪತ್ರ ಇಡುವ ಜಂಜಾಟವಿಲ್ಲ
ಈ ಖಾತೆಯಲಿ ಕೊನೆ ಪೈಸೆ ವರೆಗೂ ಸದಾ ಲೆಕ್ಕ ಪಕ್ಕಾ
ಸತ್ತರೂ ಮುಚ್ಚದು ಈ ಖಾತೆ
ಜನ್ಮಾಂತರಕ್ಕೂ ಕೂಡ ಯಾವುದೇ ಅರ್ಜಿ ಯಾರ ಮುಲಾಜ ಇಲ್ಲದೆ
ವರ್ಗಾವಣೆ ಆಗುವ ಏಕೈಕ ಖಾತೆ ಇದು
ಅನುಭವಿಸಿ ಮುಗಿಸುವವರೆಗೂ ಸದಾ ನಿಮ್ಮ ಸೇವೆಯಲ್ಲಿ
ಅನವರತ ನಿರತ ನಿಮ್ಮ "ಕರ್ಮಗಳ ಖಾತೆ"

Friday, October 14, 2016

ಅರ್ಧ ಸತ್ಯ

ಸುಳ್ಳು ತಲೆಗೆ ಹೊಡೆದ ಗುಂಡಿನಂತೆ
ಕ್ಷಣ ಮಾತ್ರದಲಿ ಪ್ರಾಣ ತಗೆಯುವುದು
ಅರ್ಧ ಸತ್ಯ ಮಾತ್ರ ಬೆನ್ನಿಗೆ ಚುಚ್ಚಿದ
ಭರ್ಚಿಯಂತೆ ಹನಿ ಹನಿಯಾಗಿ ಕೊಲ್ಲುವುದು
ಬುಡ ಬುಡ್ಕಿ ಬಾಬಾ

Tuesday, October 11, 2016

ದಾಳದಾಟ

ಜೀವನ ನಮ್ಮ ಜೊತೆಗೆ ಆಡುವ
ಅತಿ ಭಯಂಕರ ದಾಳದಾಟ
ಅದ್ಯಾವ ನಾಡಲ್ಲಿ
ಅದ್ಯಾವ ಮನೆತನದಲ್ಲಿ
ಅದ್ಯಾವ ತಂದೆ ತಾಯಿಗೆ
ನಾವು ಹುಟ್ಟುತ್ತೇವೋ ಎಂಬುದು
ಆದರೆ ಒಂದೇ ಸಮಾಧಾನ
ಅದು ಈಗಾಗಲೇ ನಡೆದು ಹೋಗಿದೆ

ನೆನಪು

ಕನಸು ಕಂಡು
ಅದೆಷ್ಟೋ ಜತನದಿಂದ ಕಟ್ಟಿ
ತಮ್ಮ ಜೀವನಕೆ  ಸಾಕ್ಷಿಯಾದ
ಸ್ವಂತ ಮನೆಯನ್ನು ತೊರೆದು
ಹೋಗುವವರು
ಮನೆ ತೊರೆಯುವುದು
ದುಡ್ಡಿಗಾಗೋ ?
ಅನುಕೂಲಕ್ಕಾಗೋ?
ಅಥವಾ
ಆ ನೆನಪಿಂದ ದೂರವಾಗಲೋ?

ಅದ್ಯಾಕೋ ಹಿಂಗಪ್ಪಾ?

ರಕ್ತ ಸಂಬಂಧವಲ್ಲದಿದ್ದರೂ ಅದೇ ಸೆಳೆತ ಇದ್ದ ಸಂಬಂಧಗಳೇಕೊ?
ಎಂದು ನೋಡಿರದ ಯಾವುದೋ ಸ್ಥಳಕ್ಕೆ ಜನ್ಮ ಭೂಮಿಯಂತ ಆಕರ್ಷಣೆ ಇದ್ದದ್ದೇಕೋ?
ಚಿರಪರಿಚಿತರಲ್ಲೂ ಇಲ್ಲದ  ಆತ್ಮೀಯತೆ ಹಿಂದೆಂದೂ ಭೇಟಿಯಾಗಿರದ ಮುಂದೆಂದೂ ಭೇಟಿಯಾಗುವ ಭರವಸೆ ಇರದ ಅಪರಿಚಿತರಲ್ಲಿ ಇದ್ದದೇಕೋ?
ಕಂಡು ಕೇಳಿರದ ವ್ಯಕ್ತಿಯ ರಕ್ತ ನಮ್ಮ ದೇಹಕ್ಕೆ ಹೊಂದಿಕೆ ಆಗಿ ಹರಿದದ್ದೇಕೋ ? || ೧ ||

ಈ ಜಗದ ಸೃಷ್ಟಿಯಿಂದ ಇಲ್ಲಿಯವರೆಗೆ
ಮಾತಾಡಿದ ಒಟ್ಟು ಮಾತುಗಳೆಷ್ಟೋ ? ಕೊಟ್ಟ ವಚನಗಳೆಷ್ಟೋ? ಕಲಿತ ಭಾಷೆಗಳೆಷ್ಟೋ?
ಅದೆಷ್ಟೋ ಬಾರಿ ಒಂದಾಗಿ  ಬೇರೆಯಾಗಿ ಮತ್ತ್ತೆ ಒಂದಾಗಿದ್ದು ಎಷ್ಟೋ?
ಅದೆಲ್ಲೋ ಹುಟ್ಟಿ ಅದೆಲ್ಲೋ ಬೆಳೆದು ಅದೆಲ್ಲೋ ಮಡಿದು ಮತ್ತೇನೋ ಆಗಿ ಹುಟ್ಟಿದ್ದೆಷ್ಟೋ?
ದೇಶ ಕಾಲ ದೇಹವೆಂಬ ಪರದೆ ನಮ್ಮಿಂದ ನಮ್ಮನ್ನೇ ಮುಚ್ಚಿಟ್ಟದ್ದೆಷ್ಟೋ? || ೨ ||


Sunday, October 9, 2016

ನಗರ ಜೀವನ

ಭಾವ ವೃಕ್ಷಗಳನು ಕಡಿದ
ಭಾವಹೀನತೆಯ ಬಯಲಲ್ಲಿ
ಪ್ರಾಪಂಚಿಕ ಸುಖಕೆ ಹಾತೊರೆಯುವ
ಗಗನ ಚುಂಬಿಗಳಲಿ ನೆಲಸಿ
ವಾಹನ ದಟ್ಟಣೆಯ ನದಿಯಲಿ ಹರಿದು
ಲೋಭದ ಕೆರೆಯಲಿ ತುಂಬಿದ
ಕಾಮ ಕ್ರೋಧ ಮತ್ಸರದ
ನೀರು ಕುಡಿದು
ಮದವೇರಿದ ಸಲಗವಾಗಿ
ಹುಚ್ಚು ಕುದುರೆಯ ನಾಗಾಲೋಟದಂತೆ
ಎಂದು ಸಿಗದ ಮಾಯಾ ಜಿಂಕೆಯ ಹಿಂದೆ
ಓಡುವ ಬದುಕೇ
ನಗರ ಜೀವನ
ಬುಡ ಬುಡ್ಕಿ ಬಾಬಾ

Monday, October 3, 2016

ಪ್ರತಿಭೆ

 ಪ್ರತಿಭೆ ಅಡಗಿರಬಹುದು
ಅಜ್ಞಾನದ ಪರದೆಯ ಹಿಂದೆ
ತೆರೆದ ಮನದಿಂದ
ನೋಡುತಿದ್ದರೆ ಸುತ್ತಮುತ್ತ
ಸ್ಪೂರ್ತಿಯ ಕೈ ಎಲ್ಲಿಂದಲೂ ಬಂದು
ಪರದೆ ಸರಿಸಿ
ಪ್ರತಿಭೆ ಅನಾವರಣಗೊಳಿಸಬಹುದು
ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...