Tuesday, August 28, 2018

ಅಭಿಮನ್ಯು

ಚಕ್ರವ್ಯೂಹದ
ಒಳಗೆ
ಹೋಗುವುದು
ಮಾತ್ರ ಗೊತ್ತಿತ್ತು
ಹೊರ ಬರುವುದು
ಗೊತ್ತಿರಲಿಲ್ಲ
ಆ ಹಸುಳೆ
ಅಭಿಮನ್ಯುವಿಗೆ
ಆದರೇನು? || ೧ ||

ಕೈ ಕಟ್ಟಿ
ಕೂಡಲಿಲ್ಲ
ಹಿಂಜರಿಯಲಿಲ್ಲ
ಮುನ್ನುಗ್ಗಿ
ಭೇದಿಸಿದ ಆ
ಚಕ್ರವ್ಯೂಹವನ್ನು
ಗರ್ಜಿಸಿ
ಆತ ಕಾದಾಡಿದ
ಕ್ಷಣಗಳು  ಅಲ್ಪ
ಆದರೇನು? || ೨ ||

ಘಟಾನುಘಟಿಗಳ
ಜಂಘಾ ಬಲ
ಉಡಗಿಸಿದ
ಅವರ ಧರ್ಮದ
ಮುಖವಾಡ
ಕಳಚಿದ
ಹೌದು ಹೂರ
ಬರಲಿಲ್ಲಆತ
ಆದರೇನು? || ೩ ||

ಇತಿಹಾಸದ
ಪುಟದಲ್ಲಿ
ಅನೇಕರ
ಮನಪಟಲದಲ್ಲಿ
ದಾಖಲಾದ
ಸ್ಪೂರ್ತಿಯ
ನಿರಂತರ
ಚಿಲುಮೆಯಾಗಿ || ೪ ||

 ಬುಡ ಬುಡ್ಕಿ ಬಾಬಾ

Monday, August 27, 2018

ಋಣಾನುಬಂಧ

ಸಂಬಂಧಗಳು
ಋಣಾನುಬಂಧಗಳೆಂಬ
ಕೊಂಡಿಯಿಂದ
ಬೆಸೆದವು || ೧ ||

ಕೆಲವು ನಾವೆಂದೋ
ಕೊಟ್ಟ  ಸಾಲ
ಮರಳಿ ಪಡೆಯುವ
ನಿಮಿತ್ತದಿಂದಾದರೆ
ಇನ್ನುಳಿದವು
ನಾವೆಂದೋ
ಇಸಿದುಕೊಂಡ
ಸಾಲ  ಬಡ್ಡಿ ಸಹಿತ
ಮರಳಿ ಕೊಡಲು || ೨ ||

ಸೇವೆ ಪ್ರತೀಕಾರಗಳ
ಬಾಬ್ತಿನಲ್ಲಿ
ಲೆಕ್ಕ ಚುಕ್ಕ್ತಾ
ಆಗದ ಹೊರತು
ತೀರದು ಈ
ಋಣಾನುಬಂಧ  || ೩ ||
 ಬುಡ ಬುಡ್ಕಿ ಬಾಬಾ

Thursday, August 16, 2018

ಮದುವೆ

ಶುದ್ಧ ಸುಳ್ಳು 
ಮದುವೆಗಳು ಆಗಿಲ್ಲ ಸ್ವರ್ಗದಲ್ಲಿ
ಯಾರು ಹುಟ್ಟಿಲ್ಲ  ಒಬ್ಬರಿಗಾಗಿ ಇನ್ನೊಬ್ಬರಾಗಿ || ೧ ||

ಅದೆಲ್ಲೋ ಹುಟ್ಟಿ
ಅದ್ಯಾವುದೋ ಮನೆಯಲ್ಲೀ ಬೆಳೆದು
ಅದ್ಯಾವುದೋ ಕನಸಿನ ಬಾನಲ್ಲಿ ಹಾರುತಿರುವ
ಗಂಡು ಹೆಣ್ಣೆಂಬ ಹಕ್ಕಿಗಳು
ಮದುವೆಯೆಂಬ ಜಾರು ಬಂಡೆಯಲ್ಲಿ
ಜಾರಿ  ಜೋಡಿಯಾದ  ಮಾತ್ರಕ್ಕೆ
ಅದ್ಹೇಗೆ ಆಗಲು ಸಾಧ್ಯ ಒಬ್ಬರಿಗಾಗೇ ಇನ್ನೊಬ್ಬರು || ೨ ||

ಮದುವೆ ಒಂದು ಆರಂಭವಷ್ಟೇ
ಬಲು ದೂರದ ಜೀವನ ಪಯಣಕೆ
ಈ ಪಯಣ ಅಲ್ಲ ಸರಳ ನೇರ ದಾರಿ
ಅಂಕು ಡೊಂಕುಗಳುಂಟು
ಕಡಿದಾದ ತಿರುವುಗಳುಂಟು
ಏರು ಬೀಳುಗಳುಂಟು
ದಾರಿ ತಪ್ಪಿದರೆ ಭಾರೀ ಜುಲ್ಮಾನೆಗಳುಂಟು
ಸರಿ ದಾರಿ ನಡೆದಾಗ
ಅಲ್ಲಲ್ಲಿ ಖುಷಿಯ ಓಯಸೀಸುಗಳೂ ಉಂಟು || ೩ ||

ಈ ಪಯಣದ ಮಜ ಬೇಕಿದ್ದರೆ ಮೊದಲು
ಒಬ್ಬರನೊಬ್ಬರು ಸಹಿಸಬೇಕಿದೆ
ಸಹಿಸಿ ಇತಿಮಿತಿಗಳ ಅರಿಯಬೇಕಿದೆ
ಅವನೇ ನನಗಾಗಿ ಬದಲಾಗಲಿ
ಅವಳೇ ನನಗೆ ಹೊಂದಿಕೊಳ್ಳಲಿ
ಎಂಬ ಅಹಂಕಾರ ತೊರೆಯಬೇಕಿದೆ
ನಮ್ಮ ಬೆನ್ನು ಆಗಾಗ ನಾವೇ ನೋಡಬೇಕಿದೆ
ಅವಳ ನ್ಯೂನತೆಗೆ ಇವನ ಬಲ
ಇವನ ದೌರ್ಬಲ್ಯಕ್ಕೆ ಅವಳ ತ್ರಾಣ ತುಂಬಬೇಕಿದೆ
ಇಬ್ಬರ ದಾರಿ ಬೇರೆ ಬೇರೆಯಾದರೂ
ಗುರಿ ಒಂದೇ ಎಂದು ಅರಿಯಬೇಕಿದೆ || ೪ ||

ಒಬ್ಬರು ಹತ್ತಲು ಇನ್ನೊಬ್ಬರು ಹೆಗಲು ಕೊಡಬೇಕಿದೆ
ಹೆಗಲು ಕೊಟ್ಟವರ ಕೈ ಹಿಡಿದು ಮೇಲೆ ಎಳೆಯಬೇಕಿದೆ
ಸೋತಾಗ ಹಿಂದೆ ನಿಂತು ಆಸರೆಯಾಗಬೇಕಿದೆ
ಗೆದ್ದಾಗ ಖುಷಿ ಪಟ್ಟು ಅದನು ಇಮ್ಮಡಿ ಮಾಡಬೇಕಿದೆ
ಹೆಜ್ಜೆಗೆ ಹೆಜ್ಜೆ ಹಾಕಿ ನಡೆದಂತೆಲ್ಲ
ಹೆಚ್ಚೆಚ್ಚು ಒಬ್ಬರನೊಬ್ಬರು ಅರಿಯಬೇಕಿದೆ
ಅವರಿದ್ದ ಹಾಗೆ ಅವರ ಒಪ್ಪಬೇಕಿದೆ
ಒಂದಕ್ಕೆ ಒಂದು ಸೇರಿದರೂ ಕೂಡ
ಬಾಳಿನ ಒಟ್ಟು ಮೌಲ್ಯ 
ಎರಡಕ್ಕಿಂತ ಹೆಚ್ಚಾಗುವಂತೆ ಬಾಳಬೇಕಿದೆ || ೫||

ಇದನರಿತು ಬಾಳ ಸಂಘರ್ಷ
ಜೊತೆಗೂಡಿ  ಎದುರಿಸಿದ್ದೇ ಆದರೆ
ಮದುವೆಗೊಂದು ಸಾರ್ಥಕ್ಯವಿದೆ
ದೇವತೆಗಳೇ ಕಾದಾರು ನಿಮಗಾಗಿ
ಸ್ವರ್ಗದ ಬಾಗಿಲಲಿ ಹೂ ಹಿಡಿದು
ನೀವಲ್ಲಿ ತಲುಪಿದಾಗ ಅಂದಾರು
ಈ ಮದುವೆ ಆದದ್ದು ಸ್ವರ್ಗದಲ್ಲಲ್ಲ
ಈ ಮದುವೆ ಆದದ್ದು ಭುವಿಯಲ್ಲೇ ಸ್ವರ್ಗ ಸೃಸ್ಟಿಸಲು
ಇವರಿಬ್ಬರೂ ಹುಟ್ಟಿದ್ದು ಒಬ್ಬರಿಗಾಗಿ ಇನ್ನೊಬ್ಬರಲ್ಲ
ಇವರಿಬ್ಬರೂ ಬಾಳಿದ್ದು ಒಬ್ಬರಿಗಾಗಿ ಇನ್ನೊಬ್ಬರಂತೆ
ಅದಕಾಗೆ ಇವರಿಗಿಲ್ಲಿ ಸ್ವಾಗತ ಸುಸ್ವಾಗತ || ೬ ||

 ಬುಡ ಬುಡ್ಕಿ ಬಾಬಾ

Thursday, August 2, 2018

ನಮ್ಮತನ

ನಾನು ಅವನಂತಾಗಬೇಕು
ನಾನು ಇವನಂತಾದರೆ ಇನ್ನೂ ಚೆನ್ನ
ಅದ್ಯಾರೋ ಹೇಳಿದ ಮಾತು ಕೇಳೋಣ
ಆ ಒಳ್ಳೆ ಗುಣ ಕಲಿಯೋಣ
ಈ ದಿನಚರಿ ರೂಡಿಸಿಕೊಳ್ಳೋಣ
ಒಟ್ಟು ನಮ್ಮಲ್ಲಿ ಇದ್ದದ್ದನ್ನು ಬಿಟ್ಟು
ಬೇರೆಲ್ಲ ಬಯಸೋಣ
ಅದಾಗದಿದ್ದಾಗ ನಮ್ಮನ್ನೇ ನಾವು
ದೂರಿಕೊಳ್ಳೋಣ ಮಾತು ಮಾತಿಗೂ
ಹೀಯಾಳಿಸಿ ಗೇಲಿ ಮಾಡೋಣ
ಗೊಣಗಿ ಗೊಣಗಿ ಅವಮಾನಿಸೋಣ
ಅಷ್ಟು ಸಾಕಾಗದಿದ್ದರೆ ಮನಸಲ್ಲೇ
ನಮ್ಮ ವ್ಯಕ್ತಿತ್ವದ ಕೊಲೆ ನಾವೇ ಮಾಡೋಣ
ಯಾರಿಗೂ ಸಂಶಯ ಬಾರದಂತೆ
ಮನದ ಯಾವುದೋ ಮೂಲೆಯಲಿ
ನಮ್ಮತನದ ಶವ ಹೂಳೋಣ
ನೆನಪಾದಗೊಮ್ಮೆ ಅದರ ಮೇಲೆ
ಒಂದೆರಡುಬಾಡಿದ ಹೂವು ಬಿಸಾಕೋಣ
ಬಿಕ್ಕಿ ಬಿಕ್ಕಿ ಅತ್ತು ಹಗುರಾಗೋಣ
ಮರು ಕ್ಷಣ ಮತ್ತೆ ಹೊಸ ನಕಲು
ಮಾಡಲು ಅತ್ತಿತ್ತ ನೋಡೋಣ
 ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...