Tuesday, December 27, 2016

ಕೆರೆ - ಭಾವಿ

ಸಾಧನೆಯ ಹಾದಿಯಲಿ ಬಂದಿತಂತೆ
ಒಂದೆಡೆ ಕೆರೆ ಒಂದೆಡೆ ಭಾವಿಯಂತೆ ||೧ ||

ತಲೆ ಕೆರೆದು ಸಾಧಕ ನೋಡಿದನಂತೆ
ಒಮ್ಮೆ ಭಾವಿಯ ಕಡೆ ಒಮ್ಮೆ ಕೆರೆಯ ಕಡೆಯಂತೆ || ೨ ||

ಅವನ ಮನವನೆ ಓದಿದ ಹಾಗೆ ಕೆರೆ ಹೇಳಿತಂತೆ
ನೋಡು ನಾನು ಭಾವಿಯಂತಲ್ಲ || ೩ ||

ಅದಕೆ ಅಬ್ಬರಿಸಿ ಭಾವಿಯು ಹೇಳಿತಂತೆ
ನೋಡು ನಾನು ಕೆರೆಯಂತಲ್ಲ || ೪ ||

ನೀವೆರಡು ಒಂದೇ ನನಗೆ ಅವನಂದನಂತೆ ಏಕೆಂದರೆ
ಎಲ್ಲೀ ಬಿದ್ದರೂ ಹೋಗುವುದು ಅವನ ಪ್ರಾಣವಂತೆ  || ೫ ||

Friday, December 23, 2016

ಮರೆವು

ಏಳು ಗಂಟೆ ಏಳು ಏಳು ಅಂದರೂ
ಎಳದ ನಾನು ಅದೇಕೋ ಅಂದು
ಬೇಗ ಎದ್ದಿದ್ದೆ ರವಿ ಮೂಡದಿದ್ದರೂ
ಮನದಲ್ಲೆಲ್ಲ ಗಾಢ ಮೌನ ಮೂಡಿತ್ತು || ೧ ||

ಅದ್ಯಾರೋ ಇದೇನಾಗಿದೆ ಎಂದು
ಇಣಚಿಯಂತೆ  ಇಣುಕಿ ಇಣುಕಿ
ನೋಡುತಿದ್ದದ್ದು ಕಂಡಿತು
ಏಯ ಯಾರದು ಇತ್ತ ಬನ್ನಿ ಅಂದೆ
ಸ್ವಲ್ಪ ಅಳುಕಿ ಕುಪ್ಪಳಿಸುತ್ತ ಬಂದು
ಕೂತಿತು ಮುಂದೆ ಹಳೇ ನೆನಪೊಂದು || ೨ ||

ಯಾರು ನೀನು ಅಂದೆ ಅಯ್ಯೋ
ನಾನೋ ನೆನಪಿಲ್ವಾ ಅಂದಿತು
ವಯಸ್ಸಾಯಿತಲ್ಲ ಹಾಳಾದ ಮರೆವು
ನೆನಪಾಗುತಿಲ್ಲ ನನಗೆ ಅಂದೆ || ೩ ||

ಅದಕದು ಪರವಾಗಿಲ್ಲ ಬಾ ನೆನಪಿಸುವೆ
ಎಂದು ಮಾತಿನ ಮೆರವಣಿಗೆಯಲಿ
ಕರೆದು ಕೊಂಡು ಹೋಯಿತು
ಅದ್ಯಾವೋದು ಕಾಲದ ಓಣಿಗಳಲಿ || ೪ ||

ಆ ಓಣಿ ಆ ಮನೆ ಆ ಜನ
ಎಲ್ಲ ಕನಸಿನಂತೆ ಅನಿಸುತಿತ್ತು
ಆ ತಿರುವಿನಲ್ಲಿ ಗಕ್ಕನೆ
ನಿಂತು ಬಿಟ್ಟಿತು ಹಳೇ ನೆನಪು
ಒಮ್ಮೆ ಕೆಮ್ಮಿ  ಕನ್ನಡಕ ಸರಿ ಪಡಿಸಿ
ದಿಟ್ಟಿಸಿ ನೋಡಿತು ಮುಂದೆಲ್ಲ ಮುಸುಕು || ೫ ||

ಏನಾಯಿತೋ ಅಂದೆ ಅದಕನ್ದಿತು
ಹಳೇ ನೆನಪು
ವಯಸು ನಿನಗಷ್ಟೆ ಅಲ್ಲ
ನನಗೂ ಆಗಿದೆ ಈಗ
ಹಾಳಾದ ಮರೆವು ಕವಿದಿದೆ
ಮುಂದಿನ ದಾರಿ ನೆನಪಾಗುತಿಲ್ಲ ಎಂದು || ೬ ||

ಬುಡ ಬುಡ್ಕಿ ಬಾಬಾ

Saturday, December 17, 2016

ಹೊಯ್ದಾಟ

ಸರ್ಕಲ್ಲಲ್ಲಿ ಬಿದ್ದು
ಹೊಯ್ದಾಡುವ
ಖಾಲಿ ಪಾಲಿಥೀನ್
ಚೀಲದಂತಾಗಿತ್ತು
ಈ ಮನ || ೧ ||

ಗಾಳಿ ಬಂದತ್ತ ತೂರುತಿತ್ತು
ಗಿರ ಗಿರ ತಿರುಗುತ್ತಿತ್ತು
ಕಂಡ ಕಂಡದ್ದರ ಹಿಂದೆ
ಅಡ್ಡಾ ದಿಡ್ಡಿ ಓಡುತಿತ್ತು || ೨ ||

ಯಾವುದರ ಪರಿವಿಲ್ಲದೆ
ಯಾವದಕ್ಕೂ ಆಂಟದೆ
ಮತ್ತೆ ಮತ್ತೆ
ಕಳಚಿಕೊಳ್ಳುತಿತ್ತು || ೩ ||

ಹಾರಾಡಿ ಹಾರಾಡಿ
ಕೊನೆಗೂ ದಣಿದು
ಬಿದ್ದು ಕೊಂಡಿತು
ಮುದುರಿ
ಅದೇ ಸರ್ಕಲಲ್ಲಿ
ಕಾರಣವಿಲ್ಲದೆ
ಕು೦ಯಗುಡುವ
ನಾಯಿ ಕುನ್ನಿಯಂತೆ || ೪ ||

Friday, December 9, 2016

ನಿಜ ರೂಪ

ಕತ್ತಲ ಆ ರಾತ್ರಿಯಲಿ
ದೀಪ ಉರಿಯುತಿದ್ದದ್ದು
ಆ ಗಾಜಿನ ಕೋಣೆಯಲಿ ಮಾತ್ರ
ಸರಿಯಾಗಿ ಕಂಡೇ ಇಬ್ಬರೇ
ಮಾತನಾಡುತಿದ್ದರು ಆದರೆ
ಶಬ್ದ ಮಾತ್ರ ಆರು ಜನರಿದ್ದಂತಿತ್ತು || ೧ ||

ದೇವರ ಬೇಡಿಕೊಂಡೆ ಕೊಡು
ನನಗೆ ದಿವ್ಯದೃಷ್ಟಿ
ಮತ್ತೊಮ್ಮೆ ಇಣುಕಿ ನೋಡಿದೆ
ನನ್ನ ಕಣ್ಣು ಕಂಡ ದೃಶ್ಯಕ್ಕೆ
ನನ್ನ ಹಳೇ ನಂಬಿಕೆಗಳೆಲ್ಲ
ಬುಡಮೇಲಾಗಿತ್ತು || ೨ ||

ನಾನಂದುಕೊಂಡಿದ್ದೆ ಬರೀ ದೇವರಿಗೆ
ಉಂಟು ರೂಪಗಳು ಅನೇಕ
ಅದರಲ್ಲಿ ಕಂಡಿದ್ದು ಪ್ರತಿ
ಮನುಜನಿಗೂ ಮೂರು ರೂಪಗಳು
ಆತನ ನಿಜ ರೂಪ
ಆತ ತನ್ನ ಬಗ್ಗೆ ತಾನೆಂದುಕೊಂಡ ರೂಪ
ಬೇರೆಯವರು ಆತನ ಕಾಣುವ ರೂಪ || ೩ ||

ಮಜಕೂರವೆಂದರೆ
ಆತ ತನ್ನ ಬಗ್ಗೆ ತಾನೆಂದುಕೊಂಡ
ಬೇರೆಯವರು ಕಾಣುವ ರೂಪಗಳ
ಭರಾಟೆಯಲಿ ಆತನ ನಿಜ ರೂಪ
ಬಸವಳಿದು ಬಿಳಚಿತ್ತು  || ೪ ||
ಬುಡ ಬುಡ್ಕಿ ಬಾಬಾ

Saturday, December 3, 2016

ಗೋಪುರದ ಗಡಿಯಾರ

ಎತ್ತರದ ಹಳೆಯ
ಗೋಪುರದ ಗಡಿಯಾರ
ನೋಡುತಿತ್ತು ಎಲ್ಲವನು
ಅರೆ ಕ್ಷಣ ಕೂಡ
ಕಣ್ಣು ಪಿಳುಕಿಸದೆ
ಭಾರೀ ಕೂತುಹಲ
ನನಗೆ ಅದರ ಬಗ್ಗೆ  || ೧ ||

ಅದೊಂದು ದಿನ ಕೇಳಿದೆ
ಗೋಪುರದ ಗಡಿಯಾರಕೆ
ಹೇಳುವೆಯಾ ಏನೆಲ್ಲ
ಅಡಗಿದೆ ನಿನ್ನ ಕಾಲಗರ್ಭದಲಿ
ಅದಕನ್ದಿತು ಗೋಪುರದ ಗಡಿಯಾರ
ತಡಕೊಳ್ಳೋ ತಮ್ಮಾ ಅದಕಿನ್ನೂ
ಕಾಲ ಕೂಡಿ ಬಂದಿಲ್ಲಾ ||೨ ||

Friday, December 2, 2016

ಕಾವ್ಯದ ಚಿಂತೆ

ಕಾವ್ಯ ಚಿಂತಾಕ್ರಾಂತವಾಗಿತ್ತು
ಅಯ್ಯೋ ಮಾರಾಯ
ಹೇಗೆ ದಾಟಿಸಿವೆಯೋ ನನ್ನ ನೀ
ಈ ಕಣ್ಣೀರ ಸಾಗರದಾಚೆ
ಇಲ್ಲ ನಿನ್ನ ಬಳಿ
ವ್ಯಾಕರಣದ ಹರಿಕೊಲು
ಭಾಷಾ ಪಾಂಡಿತ್ಯದ ದೋಣಿ || ೨ ||

ಹೇಳಿದೆ ಸಮಾಧಾನ ಕಾವ್ಯಕ್ಕೆ
ಚಿಂತೆ ಬಿಡು ಇದೇ ನನ್ನ ಬಳಿ
ಭಾವದ ಹರಿಕೋಲು
ಕಣ್ಣೀರಿಂದ ಬೆಳೆದ ಮರದ ದೋಣಿ
ದಾಟುವೆವು ಈ ಕಣ್ಣೀರ ಸಾಗರ
ಕ್ಷಣ ಮಾತ್ರದಲಿ || ೩ ||

ಏಕತಾರಿ

















ಅಂತರಾಳದ ಕೂಗು ಕೇಳುವುದು
ನಿಂತು ವರುಷಗಳೇ ಕಳೆದಿತ್ತು
ತಲೆ ಚಿಟ್ಟು ಹಿಡಿದಿತ್ತು
ಕೊರೆದೆ ತಲೆಗೆ ರಂಧ್ರವೊಂದು
ನೆಟ್ಟೆ ಅದರಲಿ ಕೋಲನೊಂದು
ಎಳೆದು ಬೀಗಿದೆ ಕೋಲಿಗೆ
ಮನವನೆ  ಏಕತಾರಿಯಂತೆ || ೧ ||

ಮೀಟಿದರೆ ಶಬ್ದವಿಲ್ಲ
ಸ್ವರದ ಕುರುಹಿಲ್ಲಾ
ಜಡದಿಂದ ಜಿಡ್ಡುಗಟ್ಟಿದೆ ಪದಪದರು
ಮನದ ತಂತಿಯಲಿ
ಆದರೂ ಹಠ ಬಿಡಲಿಲ್ಲ
ಮೀಟುತ್ತ ಹೋದೆ || ೨ ||

ಮೀಟಿದ ಕಂಪನಕೆ
ಅನುದಿನದ ಸುಖ ದುಃಖ
ಅದು ಬೇಕು ಇದು ಬೇಕು
ಅದಾಗಬೇಕು ಇದಾಗಬೇಕೆಂಬ
ಹೊರಪದರು ಮನದ ತಂತಿಯಿಂದ
ಜಿಗಿ ಜಿಗಿದು ಉದರಿದವು ಒಣಗಿದ
ಹೂವಿನ ಪಕಳೆಯಂತೆ || ೩ ||

ಕೇಳಿತು ಕ್ಷೀಣ ಧ್ವನಿಯೊಂದು
ಮೀಟುವ ವೇಗ ಬಲ ಹೆಚ್ಚಿಸಿದೆ
ಹಳೇ ನೆನಪು ಹೊಸ ಕನಸು
ಒಂದೊಂದೇ ಹೊರಬಂದು
ಸೋಲಲೊಪ್ಪದ ವೀರರಂತೆ
ಹೋರಾಡಿ ಮಡಿದವು
ಅಲ್ಲಿಗೆ ಕಳಚಿತು
ಪದರ ಮತ್ತೊಂದು || ೩ ||

ಏಕತಾರಿಯ ಝೇಂಕಾರ ಕೇಳುತಿತ್ತು
ಸ್ವರವಿರಲಿಲ್ಲ ಅದರಲಿ ಇಷ್ಟಾದರೂ
ನಾನದು ನಾನೀದು ಎಂಬ
ಭ್ರಮೆ ಬಿಟ್ಟಿರಲಿಲ್ಲ
ಮೀಟುವುದು ನಿಲ್ಲಿಸಿರಲಿಲ್ಲ
ಅಹಂಕಾರದ ಜಿಡ್ಡು
ಹನಿ ಹನಿಯಾಗಿ ಕರಗಿತ್ತು
ಮನದ ತಂತಿ ಈಗ
ಶುಭ್ರವಾಗಿ ಹೊಳೆದಿತ್ತು|| ೪ ||

ಸ್ವರ ಮೂಡುತಿತ್ತು
ಲಯವಿನ್ನೂ ಕಂಡಿಲ್ಲ
ಮೀಟುತ್ತಲೇ ಇರುವೆ ನಾ
ಮನದ ಏಕತಾರಿ
ಹುಡುಕುತ ಅಂತರಾಳದ
ಆ  ಸ್ವರಕಾಗಿ || ೫ ||
ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...