Thursday, April 28, 2016

ಹಲ್ಲು ಮತ್ತು ಶೇಂಗಾ











ಹಲ್ಲ ಇದ್ದಾಗ ಶೇಂಗಾ ಇಲ್ಲಾ
ಶೇಂಗಾ ಇದ್ದಾಗ ಹಲ್ಲ ಇಲ್ಲಾ
ಹಲ್ಲು ಶೇಂಗಾ ಎರಡು ಇದ್ದಾಗ
ತಿನ್ನಲಿಕ್ಕೆ ಟೈಮ್ ಇಲ್ಲ ಅಂದ್ರ
ನಿನ್ನಂತಹ ಮಂಗ್ಯಾ ಇನ್ನೊಂದ ಇಲ್ಲ

Wednesday, April 27, 2016

ಮಕ್ಕಳ ಕೊಡುಗೆ












ಸ್ವಾರ್ಥದ ಹಂಗು
ತೊರೆಯಲು ಜೀವನವೇ
ತೇದರು ಸಾಧಕರು ಅನೇಕ
ಅದರೂ ತಿಳಿಯದೆ
ಹೋಯಿತು ದಾರಿ || ೧ ||

ತಂದೆ ತಾಯಿ ಆಗುವದರಲ್ಲಿ
ಅಡಗಿದೆ
ಸ್ವಾರ್ಥದ ಬಳ್ಳಿಯ ಛೇದನ
ನಿಸ್ವಾರ್ಥದ ಬಳ್ಳಿಯ ಬಿಜಾ೦ಕುರ || ೨ ||

ತನಗೇನು ತನಗೇನು ಎಂದು
ಜಪಿಸುತ ಬೆಳೆದ ಹುಡುಗಿ ತಾಯಿಯಾದ ನಂತರ
ಅಂದಳಂತೆ ಮಕ್ಕಳಿಗೇನು ಮಕ್ಕಳಿಗೇನು  
ಮರೆಯಿತಂತೆ ಅವಳಿಗೆ ತನಗೇನು ತನಗೇನು ಎಂದು || ೩ ||

ನಾ ಗೆಲ್ಲ ಬೇಕು ನಾ ಗೆಲ್ಲ ಬೇಕು ಎಂದು
ಹಠದಿಂದ ಬೆಳೆದ ಹುಡುಗ ತಂದೆಯಾದ ನಂತರ
ಅಂದನಂತೆ ಮಕ್ಕಳೊಂದಿಗೆ ನಾ ಸೋಲಬೇಕು ನಾ ಸೋಲಬೇಕು
ಮರೆಯಿತಂತೆ ಅವನಿಗೆ ನಾ ಗೆಲ್ಲ ಬೇಕು ನಾ ಗೆಲ್ಲ ಬೇಕು ಎಂದು || ೪ ||

ಹೇಳಿ ಇದಕಿಂತ ಹೆಚ್ಚಿನ ಕೊಡುಗೆ
ಬೇಕೇ ಮನುಷ್ಯ ಜನ್ಮಕ್ಕೆ
ಅತ್ಯುನ್ನುತ ಕೊಡುಗೆ ಇದು
ಮಕ್ಕಳಿಂದ ತಂದೆ ತಾಯಿಗೆ
ಇದೆಯಾ ಸ್ವಾರ್ಥ ತ್ಯಜಿಸಲು
ಇದಕಿಂತ ಹೆಚ್ಚಿನ ಸುಲಭ ಮಾರ್ಗ || ೫ ||

ಹೌದು ಸಂದೇಹವೇ ಇಲ್ಲ
ತಂದೆ ತಾಯಿ ಗೌರವಾರ್ಹರು
ಆದರೆ ಮಕ್ಕಳು ಕೂಡ
ಅಭಿನಂಧಾನರ್ಹರಲ್ಲವೇ ? || ೬ ||

Tuesday, April 26, 2016

ದೀರ್ಘ ರಜೆ












ದೀರ್ಘ ರಜೆಯ
ನಂತರದ
ಎಲ್ಲರ ಪ್ರಶ್ನೆ
ಏನು ಮಾಡಿದೆ
ರಜದಲಿ ಎಂದು || ೧ ||

ಹೇಗೆ ಹೇಳಲಿ
ಏನು ಮಾಡಿದೆ
ದೀರ್ಘ ರಜೆಯಲಿ
ಎಂದು  || ೨ ||

ಹೇಳಲಾದಿತೆ
ಕುಳಿತಿದ್ದೆ
ಘಂಟೆಗಟ್ಟಲೆ
ಒಂದು ನಿಮಿಷ ಕೂಡ
ವಿರಮಿಸಿದ
ತುಂಟ
ಮಗುವಿನಂತಿರುವ
ಮನಸಿನ
ಜೊತೆಗೆ
ಸುಮ್ಮನೆ
ಎಂದು  || ೩ ||

ಹೇಳಲಾದಿತೆ
ಮಲಗಿದ್ದೆ
ಕಣ್ಣು ಮುಚ್ಚಿ
ಭಾವನಾ ಸಮುದ್ರದ
ದಡದಲ್ಲಿ
ಅಪ್ಪಳಿಸುವ
ಅಲೆಗಳ
ಶಬ್ದ ಕೇಳುತ್ತಾ
ತೋಯುತ್ತಾ
ಎಂದು || ೪ ||

ಹೇಳಲಾದಿತೆ
ಹತ್ತಿದ್ದೆ
ಅನುಭವಗಳ
ಬೆಟ್ಟವನ್ನು
ನೋಡಲು
ಜೀವನದ
ಒಟ್ಟು ಭಾವಗಳ
ದೃಶ್ಯವನ್ನು
ಎಂದು   || ೫ ||

ಛೆ! ಹೀಗೆಲ್ಲ ಹೇಳಲಾಗದು
ನಕ್ಕಾರು ಎಲ್ಲರೂ
ಪಟ್ಟಿ ಮಾಡಿದೆ ಕೆಲ
ಪ್ರಸಿದ್ಧ  ಪ್ರವಾಸಿ ಸ್ಥಳಗಳ
ಹೇಳಿದೆ ಹೋಗಿದ್ದೆ ಅಲ್ಲಿ ಎಂದು
ಅದ ಕೇಳಿ ಕಣ್ಣರಳಿಸಿ
ಎಲ್ಲರೆಂದರು
ವಾಹ ! ವಾಹ !
ಎಂದು || ೬ ||




ಮಂಥನದ ಮಥನ











ಅನುಭವಗಳ ಕೆನೆ ಕೊಡಿಸಿ
ಧ್ಯಾನದ ಹೆಪ್ಪು ಹಾಕಿ
ಆಗಾಗ ಮಂಥನದ ಮಥನ ನಡೆಸಿ
ಬಂದ ಒಳನೋಟಗಳ ಬೆಣ್ಣೆಯನು
ಜೀವನದ ಬಾಣಲೆಯಲಿ ಕಾಸಿ
ಆ ತಾಪದಿಂದ ಬಂದ ತುಪ್ಪವನು
ಸವಿದು ಬೆಳೆಸಿಕೊಳ್ಳೋಣ
ಮನದ
ಅಂತ: ಸತ್ವವನು
ಬುಡ ಬುಡ್ಕಿ ಬಾಬಾ


Friday, April 22, 2016

ಬೋರು ಹೊಡೆಸು

ಅತ್ಯಂತ ಆಸಕ್ತಿಕರ ವ್ಯಕ್ತಿಯಿಂದ
ಅತ್ಯಂತ ಬೋರು ಹೊಡೆಸುವ
ವ್ಯಕ್ತಿಯಾಗಲು ಅತಿ ಸುಲಭ
ಮಾರ್ಗ
ಅಂತ: ಸತ್ವವಿದ್ದ ತನ್ನ ಭೂತಕಾಲದ
ಆವೃತ್ತಿಯನ್ನು
ವರ್ತಮಾನದಲಿ ಕೇವಲ
ಬಾಹ್ಯ ಲಕ್ಷಣಗಳಿಂದ
ಅನುಕರಿಸುವದು
ಬುಡ ಬುಡ್ಕಿ ಬಾಬಾ

NOTE: Inspired by Siddu's Commentary in IPL 2016

ಮಿಂಚಿನ ಓಟ

ಕಪ್ಪನೆಯ ಕಾರ್ಮೋಡಗಳಿಂದ
ಆಚೆ ಜಿಗಿದ
ಆತ ಓಡಿ ಮಾಯವಾದ || ೧ ||

ಕೇಳಿತು ಆತನ ಹೆಜ್ಜೆಯ ಸದ್ದು
ಆತ ಕಂಡು ಮರೆಯಾದ
ಕೆಲ ಕ್ಷಣಗಳ ನಂತರ || ೨ ||

ಜಘ ಜಘನೆ ಮಿಂಚಿತು ಬಾನಲ್ಲಿ
ಮಿಂಚಿದ ಕೆಲ ಕ್ಷಣಗಳಲೆ
ಕೇಳಿತು ಭಾರೀ ಗುಡುಗು
ಜಲಪಾತದಂತೆ ಸುರಿಯಿತು ಮಳೆ || ೩ ||

ಅಳಿಸಿತು ಆತನ ಪ್ರತಿ ಹೆಜ್ಜೆ ಗುರುತನ್ನು
ಕಳೆದು ಹೋದ ಆತ ಆ ಕತ್ತಲೆಯಲಿ
ಇನ್ನೆಂದೂ ಹುಡುಕಲಾರದ ಹಾಗೆ || ೪ ||
ಬುಡ ಬುಡ್ಕಿ ಬಾಬಾ

ಓಟ

ಪ್ರತಿ ವಿಷಯಕ್ಕೂ
ಮೂಗಿನ ನೇರಕ್ಕೆ
ಮಾತನಾಡುವ
ಆತ
ಜ್ಯಾಮಿತಿಯ
ಸರಳ ರೇಖೆಯಂತಿರುವ
ನೇರವಾದ ಹಾದಿಯಲಿ
ಓಡಿದ ಓಡಿದ ಓಡಿದ
ಪ್ರತಿ ಕ್ಷಣಕೂ ಆತನ
ಕಾಯ
ಮಸಕು ಮಸುಕಾಗಿ
ಕರಗಿ
ಕಣ್ಣಿಂದ ಕಣ್ಮರೆಯಾಗಿ
ಮನದಲ್ಲಿ ಹಪ್ಪುಗಟ್ಟಿತು
ಬುಡ ಬುಡ್ಕಿ ಬಾಬಾ

ದು:ಖದ ಆಳ

ಅವಳೆಂದಳು
ನಾನು ತಿಳಿಯಬೇಕು
ನಿನ್ನ  ದು:ಖದ ಆಳ || ೧ ||

ಆತ ಎಚ್ಚರಿಸಿದ
ಬೇಡ ಹುಡುಗಿ
ಅದರ ಆಳ ಬಹಳ || ೨ ||

ಹಠ ಬಿಡದ  ಆಕೆ
ಜಿಗಿದೆ ಬಿಟ್ಟಳು
ದು:ಖದ ಆಳ ನೋಡಲು|| ೩ ||

ಆತನ ಜೀವನವೇ
ಸರಿದು ಹೋದರೂ ಕೇಳಲಿಲ್ಲ
ಆಕೆ ತಳ ಮುಟ್ಟಿದ ಸದ್ದು || ೪ ||

ಆತ ಕಾಯುತ್ತಲೇ ಇದ್ದ
ಅವಳ ಕೂಗಿಗಾಗಿ
ತನ್ನ ಕೊನೆಯುಸಿರು ಹಿಡಿದು || ೫ ||

Thursday, April 21, 2016

ವಾಸ್ತವ

ಕಥೆಯ ಪಾತ್ರವೊಂದು
ಕಥೆಯ ಏಕತಾನತೆಗೆ  ಬೇಸರವಾಗಿ
ವಾಸ್ತವಕೆ ಬಂದು
ವಾಸ್ತವದ ವಿವಿಧತೆಗೆ ಉಸಿರುಗಟ್ಟಿ
ಮತ್ತೆ ಕಥೆಗೆ ಮರಳಿತು || ೧ ||

ವಾಸ್ತವದ ಪಾತ್ರವೊಂದು
ವಾಸ್ತವದ ವಿವಿಧತೆಗೆ ಬೇಸರವಾಗಿ
ಕಥೆಗೆ ಬಂದು
ಕಥೆಯ ಏಕತಾನತೆಗೆ ಉಸಿರುಗಟ್ಟಿ
ಮತ್ತೆ ವಾಸ್ತವಕೆ ಮರಳಿತು || ೨ ||

Friday, April 15, 2016

ಸರ್ಕಸ್ಸಿನ ಜೋಕಾಲಿ ಆಟ















ಸರ್ಕಸ್ಸಿನ
ಜೋಕಾಲಿ ಆಟದಲಿ
ಜಿಗಿಯುತ್ತಾರೆ
ಕೈಯಲ್ಲಿನ  ಜೋಕಾಲಿ ಬಿಟ್ಟು
ಇನ್ನೊಂದು ಜೋಕಾಲಿಗೆ
ಅದು ಹತ್ತಿರ ಬಂದಾಗ  ನಂಬಿ
ಕೆಳಗಿನ ಸುರಕ್ಷತಾ ಬಲೆಯನ್ನು  || ೧ ||

ಜೀವನದ ಸರ್ಕಸ್ಸಿನ
ಜೋಕಾಲಿ ಆಟದಲಿ
ಜಿಗಿಯಬೇಕು
ಕೈಯಲ್ಲಿನ ಜೋಕಾಲಿ ಬಿಟ್ಟು
ಮುಂದಿನ ಜೋಕಾಲಿಗೆ ಅದು
ಕಾಣದೆಯೂ ಕೂಡ
ಬರೀ ಆತ್ಮ ವಿಶ್ವಾಸವೆಂಬ
ಸುರಕ್ಷತಾ ಬಲೆ ನಂಬಿ  || ೨ ||


ಅದಕೆ ಏನೋ
ಜೀವನದ ಸರ್ಕಸ್ಸಿನ
ಜೋಕಾಲಿ ಆಟದಲಿ
ಎದೆ ಝಲ್ಲೆನ್ನುವುದು ಜಾಸ್ತಿ || ೩ ||

ಯಥಾರ್ಥಕೆ ದಾರಿದೀಪ

ಬಿಡಿ ಬಿಡಿಯಾಗಿ ವಿಷಯ
ತಿಳಿಯುವದು ಸರಳ
ಅನುಭಗಳಿಂದ
ಆದ ಗ್ರಹಿಸಬಹುದು
ಮಾನಸ ಸರೋವರದಲಿ
ಅಲೆಗಳಿದ್ದಾಗೂ ಕೂಡ || ೧ ||

ಒಟ್ಟು ಭಾವ ಗ್ರಹಿಸಲು ಮಾತ್ರ
ವಿಚಾರಗಳ  ಅಲೆ
ನಿಲ್ಲಬೇಕು
ಮಾನಸ ಸರೋವರ
ತಿಳಿಯಾಗಬೇಕು
ಅದಾದಾಗಲೇ ಕಾಣುವುದು
ಭಾವದ ಆಳ || ೨ ||


ಒಟ್ಟು ಭಾವದಿಂದ ಬಿಡಿ ವಿಷಯದ ಗ್ರಹಿಕೆ
ಬಿಡಿ ವಿಷಯಗಳ ಅನುಭವದಿಂದ
ಒಟ್ಟು ಭಾವದ ಗ್ರಹಿಕೆ
ಒಂದಕೊಂದು ಪೂರಕ ಅನ್ಯೋನ್ಯ ಅನಿವಾರ್ಯ
ಅವೆರಡರ ನಿರಂತರ ಒಡನಾಟವೇ
ಯಥಾರ್ಥಕೆ ದಾರಿದೀಪ || ೩ ||
ಬುಡ ಬುಡ್ಕಿ ಬಾಬಾ

Wednesday, April 13, 2016

ಉಹೂ೦ ಉಹೂ೦

ಉಹೂ೦  ಉಹೂ೦
ಅದು ಹಾಗಲ್ಲ
ಇದು ಹೀಗೆ ಮಾಡಬಾರದು
ಅದು ಸಾಧ್ಯವೇ ಇಲ್ಲ
ಇದು ಮಾಡಿದರೆ ಹುಚ್ಚನೆನ್ನುತ್ತಾರೆ
ನೀನಗೆ ತಲೆ ಕೆಟ್ಟಿದೆ
ನಾವು ಒಪ್ಪುವುದಿಲ್ಲ
ನಮಗದು ಸುತಾರಾ೦ ಇಷ್ಟವಿಲ್ಲ || ೧ ||

ಅದೆಲ್ಲವ ಗಾಳಿಗೆ ತೂರಿ
ಜಿಗಿ ಜಿಗಿದು ಕುಣಿದಿದ್ದ
ಕುಣಿ ಕುಣಿದು ಜಿಗಿದಿದ್ದ
ನೆಗೆದು ಕುಪ್ಪಳಿಸಿದ್ದ
ತನ್ನ ತಾ ಮೈ ಮರೆತಿದ್ದ
ತನ್ನಾತ್ಮದ ಪ್ರಚಂಡ
ಕರತಾಡನಕೆ ಮನ ಸೋತಿದ್ದ || ೨ ||

ಢ೦ ಢ೦ ಢ೦ ಢ೦
ಉದಿತು ರಣಕಹಳೆ
ಮೊಳಗಿತು ಶಂಖನಾದ
ಹರಿಯಿತು ಅವನೆಡೆಗೆ
ಬಾಣಗಳ ನದಿ
ಛೇದಿಸಿತು ದೇಹವನು
ಪುಟಿಯಿತು ರಕ್ತದ ಕಾರಂಜಿ
ನೃತ್ಯ ನಿಲ್ಲಲಿಲ್ಲ
ಲಯ ತಪ್ಪಲಿಲ್ಲ
ಹೆಜ್ಜೆ ಹಿಂದು ಮುಂದಾಗಲಿಲ್ಲ
ಬಸಿಯಿತು ರಕ್ತದ ಕೊನೆಯ ಹನಿ || ೩ ||

ಆರಲಿಲ್ಲ ಜೀವ ಚೇತನದ ಜ್ಯೋತಿ
ಬೆಳಗಿತು ಇನ್ನೂ ಪ್ರಖರವಾಗಿ
ಹರಿಯಿತು ಜೀವ ಜ್ಯೋತಿ ಬಾಣಗಳಲಿ
ಬಾಣಗಳೇ ದೇಹವಾಗಿ
ಲಯದಿ ಲೀನವಾಗಿ ನಡೆಯಿತು
ನಿರಂತರ ನೃತ್ಯಾರಾಧನೆ
ವ್ಯಾಪಿಸಿ ಎಲ್ಲಡೆ ತುಂಬಿ ತುಳುಕಿತು
ಜಯಭೇರಿ
ಢ೦ ಢ೦ ಢ೦ ಢ೦ || ೪ ||

ಕಠಿಣ ನಿರ್ಧಾರಗಳು

ಮುಂದೂಡಲಾಗದ ಕಠಿಣ
ನಿರ್ಧಾರಗಳ
ನೆನೆಗುದಿಯಲ್ಲಿ
ಇಟ್ಟು ಸಾಗುವುದು
ಭಾರವಾದ ಕಲ್ಲನ್ನು ಹೊತ್ತು
ಕಡಿದಾದ ಬೆಟ್ಟ ಏರಿದಂತೆ
ಸಮಯ ಸರಿದಂತೆ ಭಾರ
ಹೆಚ್ಚಾಗುವದೇ ಹೊರತು
ಕಡಿಮೆಯಾಗುವುದಿಲ್ಲ
ಬುಡ ಬುಡ್ಕಿ ಬಾಬಾ

ನನ್ನ ತಪ್ಪುಗಳು

ಬೇರೆಯವರ ತಪ್ಪು ನೋಡಿ ಕಲಿಯುವದರಲ್ಲಿ
ತಪ್ಪೇನಿಲ್ಲ
ಬೇರೆಯವರ ತಪ್ಪಿಂದ ಕಲಿತದ್ದರಿಂದ
ನನಗಾದದ್ದು
ನನ್ನ ಮುಖ ಪರಿಚಯ ಮಾತ್ರ
ಆದರೆ
ನನಗೆ ನಾನು ಚಿರಪರಿಚಿತನಾಗಿದ್ದು
ನನಗೆ ನಾನು ಆತ್ಮೀಯನಾಗಿದ್ದು
ನನಗೆ ನಾನು ಹೆಚ್ಚು ತಿಳಿದದ್ದು
ನಾನೇ ಮಾಡಿದ ತಪ್ಪುಗಳಿಂದ

Monday, April 11, 2016

ಮರೆತ ವಿಷಯ

ಮರೆತ
ವಿಷಯವೊಂದು
ಅಯ್ಯೋ
ಮರೆತೇ
ಮರೆತೇ
ಎಂದು
ಮರಗುವದು
ಬಿಟ್ಟಾಗ
ನೆನಪಾಗಿತ್ತು || ೧ ||

ನಾ ಮರೆಯುತ್ತೇನೆ
ಮರೆಯುತ್ತೇನೆ
ಎಂದು
ಮರಗುತಿದ್ದೆ
ಅದೊಂದು
ದಿನ
ನಾ ಮರೆಯುತ್ತೇನೆ
ಎಂಬುದೇ
ಮರೆತು
ಹೋಯಿತು || ೨ ||


ಬುಡ ಬುಡ್ಕಿ ಬಾಬಾ

Sunday, April 10, 2016

ಸ್ಪರ್ಧೆ ಇಲ್ಲದ ಸ್ಥಳ

ನೂಕು ನುಗ್ಗಲು ಒಬ್ಬರನೊಬ್ಬರು ದೂಕಿ ಎಳೆದಾಡಿ
ಮುಂದೆ ಹೋಗಲು ಒದ್ದಾಡುವುದನ್ನು ಕಂಡು ಕೇಳಿದೆ
ಏನಿದು ಗದ್ದಲ ಏಕೆ ಈ ಪೈಪೋಟಿ ನುಗ್ಗಲು ಒಳಗೆ
ಅಲ್ಲೇ ನುಗ್ಗುತಿದ್ದವನೆಂದ ಈ ಬಾಗಿಲಿಂದಾಚೆ
ಇದೆ ಸ್ಪರ್ಧೆಯೇ ಇಲ್ಲದ ಸ್ಥಳಕ್ಕೆ ಹೋಗುವ ದಾರಿ

ಚಹಾ

ಒಲೆಯ ಮೇಲಿನ ನೀರು ಚಹಾ ಪುಡಿ
ತನ್ನೊಳಗೆ ತಾನು
ಕುದ್ದು ಕುದ್ದು ಮೂತಿ ಕಪ್ಪಾಗಿಸಿಕೊಂಡಿತ್ತು
ರುಚಿ ಕಹಿಯಾಗಿಸಿಕೊಂಡಿತ್ತು || ೧ ||

ಇದ್ದಷ್ಟೇ ಹಾಲು ಹೊಯ್ದು
ಸಕ್ಕರೆ ಸುರಿದು
ಬಣ್ಣ ರುಚಿ ಬದಲಾಯಿಸಿ
ಅಂದವಾದ ಕಪ್ಪಲ್ಲಿ ಸೋಸಿದಾಗ
ಕಂಡಿತು ಒಲ್ಲದ ಗಂಡನ
ವಧು ಪರೀಕ್ಷೆಗೆ ಸಿದ್ದವಾದ
ಹುಡುಗಿಯಂತೆ || ೨ ||

Saturday, April 9, 2016

ಅನ್ನದ ಒಡ್ಡು ಹಾಗೂ ಸಾರು

ನಾನು ಕಲಿತ ಇಂಜಿನಿಯರಿಂಗ್ ಕೌಶಲ್ಯ ಲೆಕ್ಕಾಚಾರ ಬಳಸಿ
ಕಟ್ಟಿದ್ದೆ ಅನ್ನದ ಒಡ್ದನೊಂದನ್ನು ಹಸಿರು ಬಾಳೆ ಎಲೆಯಲ್ಲಿ
ಕಾದಿದ್ದೆ ಕಾತರದಿಂದ ಸಾರಿಗಾಗಿ ಒಡ್ಡನ್ನು ಪರೀಕ್ಷೆಗೆ ಒಡ್ಡಲು || ೧ ||

ಗಂಗೆ ಧುಮುಕಿದಂತೆ ಸುರಿದ ಸಾರನ್ನು ಬಡಿಸುವವ ಭಗೀರಥನಾಗಿ
ಸುರಿದ ರಭಸಕ್ಕೆ ನನ್ನ ಲೆಕ್ಕಾಚಾರವೆಲ್ಲ ಬುಡಮೇಲಾಗಿ
ಅನ್ನದ ಒಡ್ಡು ಓಡಿದು  ಹರಿದಿತ್ತು ಬಿಸಿ ಬಿಸಿ ಸಾರು
ಎಲೆಯ ಎಲ್ಲೆಡೆಗೆ ತನ್ನ ಎಲ್ಲೆ ಹದ್ದು ಬಸ್ತು ಮೀರಿ || ೨ ||

ಮುಳುಗಿಸಿತ್ತು ಅಲ್ಲೇ ಮಲಗಿದ್ದ ವಡೆ ಸಿಹಿ ಹೋಳಿಗೆಯನ್ನು
ಜಹ್ನು ಋಷಿಯು ಕೋಪಗೊಂಡು ಗಂಗೆಯ ಕುಡಿದಂತೆ
ಎಲ್ಲೆ ಮೀರಿದ ಸಾರನ್ನು ಸುರು ಸುರು ಹೀರಿ ಮುಗಿಸಿದೆ
ಆದ ಕಂಡ ಸಾರು ಬಡಿಸುವ ಭಗೀರಥ ಮತ್ತೆ ಸುರಿದ ಸಾರನ್ನು || ೩ ||

ಬುಡ ಬುಡ್ಕಿ ಬಾಬಾ

Friday, April 8, 2016

ನಾ ಮುಕ್ತನಾದೆ

ಸಂಬಂಧಗಳು ಹರಿಯದಿರಲಿ
ಎಂದು
ನನ್ನ ನಾನೇ ಹರಿದು
ತೇಪೆ ಹಾಕಿ ಹೊಲಿದು
ಜೀವಂತವಿರಿಸಲು ಹೆಣಗಿದ್ದೆ
ಅದೊಂದು ದಿನ
ಖಾಲಿಯಾಗಿದ್ದೆ ನಾನು
ಉಳಿದಿರಲಿಲ್ಲ ಏನು
ಅಂದಿಂದ ನಾ ಮುಕ್ತನಾದೆ

ನಾನು ತಿಳಿಯಲಾಗುತ್ತಿರಲಿಲ್ಲ


ನನ್ನ ಪ್ರೇಮಿಸದ ಜೀವಿಗಳಿಗೆಲ್ಲ ನಾನು ಚಿರಋಣಿ
ನಿಮ್ಮ ಪ್ರೇಮ ಬಂಧನದಲ್ಲಿ ನನ್ನ ಸಿಲುಕಿಸಿದ್ದರೆ
ತಮ್ಮ ನಿಜ ಪ್ರೀತಿಯ ಋಣ ನನ್ನನಾವರಿಸಿದ್ದರೆ
ನಾನು ತಿಳಿಯಲಾಗುತ್ತಿರಲಿಲ್ಲ ನಾನ್ಯಾರೆಂದು
ನಡೆಯಲಾಗುತ್ತಿರಲಿಲ್ಲ ನನಗಿಷ್ಟವಾದ ದಾರಿಯಲ್ಲಿ || ೧ ||

ನನ್ನ ಬಳಸಿ ಎಸೆದ ಜೀವಿಗಳಿಗೆಲ್ಲ ನನ್ನ ಧನ್ಯವಾದ
ನಿಮ್ಮ ಬಳಕೆಗಷ್ಟೆ ನನ್ನ ಉಪಯೋಗಿಸದೆ
ತಮ್ಮ ಕೃತಜ್ಞತೆಯ ಪಾಶದಲ್ಲಿ ಕಟ್ಟಿದ್ದರೆ
ನಾನು ತಿಳಿಯಲಾಗುತ್ತಿರಲಿಲ್ಲ ನಾನ್ಯಾರೆಂದು
ನಡೆಯಲಾಗುತ್ತಿರಲಿಲ್ಲ ನನಗಿಷ್ಟವಾದ ದಾರಿಯಲ್ಲಿ || ೨ ||

ನನ್ನ ಪ್ರತಿ ಕೆಲಸವ ಟೀಕಿಸಿದ ಜೀವಿಗಳಿಗೆಲ್ಲ ನನ್ನ ನಮನ
ನಿಮ್ಮ ಬುದ್ದಿಯ ಉಪಯೋಗಿಸಿ ಎಲ್ಲದರಲ್ಲೂ ಕೊಂಕು ತೋರದಿದ್ದರೆ
ತಮ್ಮ ಕಣ್ಣು ನನ್ನ ಪ್ರತಿ ಗುಣದಲ್ಲಿ ಅವಗುಣ ಕಂಡಿರದಿದ್ದರೆ
ನಾನು ತಿಳಿಯಲಾಗುತ್ತಿರಲಿಲ್ಲ ನಾನ್ಯಾರೆಂದು
ನಡೆಯಲಾಗುತ್ತಿರಲಿಲ್ಲ ನನಗಿಷ್ಟವಾದ ದಾರಿಯಲ್ಲಿ || ೩ ||

ನನ್ನ ಗಳಿಕೆಗೆ ಸಂತೃಪ್ತಿ ತೋರದ ಜೀವಿಗಳಿಗೆಲ್ಲ ಸಾಷ್ಟಂಗ ನಮಸ್ಕಾರ
ನಿಮ್ಮ ಸಂತೃಪ್ತಿಯ ತೋರಿ ಅದರಿಂದ ನಾನು ಹರ್ಷಿಸಿದ್ದರೆ
ತಮ್ಮ ಸಂತೃಪ್ತಿಗಾಗಿ ಮಾರಿಕೊಳ್ಳುತಿದ್ದೆ ನನ್ನನ್ನೇ ನಾನು
ನಾನು ತಿಳಿಯಲಾಗುತ್ತಿರಲಿಲ್ಲ ನಾನ್ಯಾರೆಂದು
ನಡೆಯಲಾಗುತ್ತಿರಲಿಲ್ಲ ನನಗಿಷ್ಟವಾದ ದಾರಿಯಲ್ಲಿ || ೪ ||

Thursday, April 7, 2016

ಬಾಗಿದ ಹುಬ್ಬು

ಬಾಗಿದ ಕತ್ತಿಯ ಹಿಡಿದ ಮಹಾ ಯೋಧನ ಮುಂದೆ
ಬಿಚ್ಚುಗತ್ತಿ ವೀರನಾಗಿ ಕಾದು ಗೆದ್ದು ಬಿಡಬಹುದು

ಬಾಗಿದ ಹುಬ್ಬಿನ ಅಲಂಕಾರದ ಸುಂದರಿಯ ಮುಂದೆ
ಬಿಚ್ಚು ಮನಸಿನ ಮಾತುಗಾರನಾಗಿ ಹೃದಯ ಗೆದಿಯಲಾಗದು

ಯುಗಾದಿ

ಕಹಿಯ ಕೊನೆಗೆ
ನಿರಾಳತೆ ಇದ್ದರೂ
ವಿಷಾದ ಆವರಿಸುವ
ಆತಂಕವಿದೆ || ೧ ||

ಸಿಹಿಯ ಕೊನೆಗೆ
ಹೇಗಾದರೂ ಮಾಡಿ
ಅಂಟಿಕೋಬೇಕೆಂಬ
ಆಕರ್ಷಣೆ ಇದೆ || ೨ ||

ಸಿಹಿ ಕಹಿಯ ಮೀರಿ
ಅರ್ಥಪೂರ್ಣತೆಯ ಕಡೆಗೆ
ಕರೆದೊಯ್ಯುವ ರುಚಿಗೆ
ಈ ಯುಗಾದಿ ಆದಿಯಾಗಲಿ || ೩ ||

ಬುಡ ಬುಡ್ಕಿ ಬಾಬಾ

ಅರ್ಧ ದಾರಿ

ಅರ್ಧ ದಾರಿ
=======
ಜೀವನದ
ಕಾಡಲ್ಲಿ
ದಾರಿ
ಅರ್ಧ
ಕ್ರಮಸಿದಾಗ
ಅದೆಲ್ಲೋ
ಕಳೆದುಕೊಂಡಿದ್ದೆ

ಚಿರಂಜೀವಿ
=======
ಚಿರಂಜೀವಿಯಾಗಿ
ಯುಗ ಯುಗಗಳೇ
ಕಳೆದಿವೆ
ತಂಪಾಗಿದೆ
ಮೈಯಲ್ಲಿ
ಹರಿವ ರಕ್ತ
ಜೀವನದ
ಸೂಜಿಯು
ದಾರವಾಗಿ
ನನ್ನ ಸೆಳೆದು
ಬೆಚ್ಚನೆಯ
ಹಾಸಿಗೆ
ಹೊಲಿದರೆ
ನಾ ಸಿದ್ಧ
ಮತ್ತೆ
ಮರ್ತ್ಯನಾಗಲು


ಬುಡ ಬುಡ್ಕಿ ಬಾಬಾ

Inspired by: movie - the mirror  by Andrei Tarkovsky 

ಆ ಪದ

ಆ ಪದದ
ಜೊತೆಗೆ
ಇಳಿದಿದ್ದೆ
ಕುಸ್ತಿಗೆ
ಅರ್ಥದ
ಭಾರ
ಹಾಕಿ
ನನ್ನ
ಕೆಡವಿ
ಗೆದ್ದೇ
ಬಿಡ್ತು


ದಿನಗಳು

ಮುಗಿಯಲಿ ಎನ್ನುವ ದಿನಗಳು ಮುಗಿಯುವದಿಲ್ಲ
ಮುಗಿಯದಿರಲಿ ಎನ್ನುವ ದಿನಗಳು ನಿಲ್ಲುವದಿಲ್ಲ || ೧ ||

ಮರೆಯಲಿ ಎನ್ನುವ ದಿನಗಳು ಮರೆಯುವದಿಲ್ಲ
ಮರೆಯದಿರಲಿ ಎನ್ನುವ ದಿನಗಳು ನೆನಪಿನಲ್ಲಿರುವದಿಲ್ಲ || ೨ ||

ಅದೇಕೆ ಹೀಗೆ ಎಂದು ಇನ್ನೂ ತಿಳಿದಿಲ್ಲ
ತಿಳಿಯಲು ಹೋದವರು ಇನ್ನೂ ಮರಳಿ ಬಂದಿಲ್ಲ || ೩ ||
ಬುಡ ಬುಡ್ಕಿ ಬಾಬಾ

ಕಹಿ ಸಂಬಂಧ

ಕಹಿ ಸಂಬಂಧದ ಕೊನೆ
ದುಖವಾಗದಿದ್ದರೂ
ವಿಷಾದದವಂತೂ
ಇದ್ದೇ ಇದೆ

ಅದೆಂತಹ ನಾಟಕ

ನಾಟಕ ಮುಗಿದಾಗಿತ್ತು
ಚಪ್ಪಾಳೆ ತಟ್ಟಾಗಿತ್ತು
ಪರದೆ ಮಾತ್ರ ಬೀಳಲಿಲ್ಲ
ಮುಚ್ಚಿದ ಕದ ತೆರೆಯಲಿಲ್ಲ
ಪಾತ್ರಗಳು ಬಣ್ಣ ತಗೆಯಲಿಲ್ಲ
ಪ್ರೇಕ್ಷಕ ಕಣ್ಣು ಸರಿಸಲಿಲ್ಲ || ೧ ||

ಕೆಲ ಕ್ಷಣ ಮೊದಲು
ನೀರಂತೆ ಹರಿದದ್ದು
ಇದೀಗ
ಮಂಜುಗಡ್ಡೆಯಂತೆ  ಘನೀಕರಿಸಿತ್ತು
ಆವರಿಸಿತ್ತು ಮಂಪರು ಎಲ್ಲಡೆ || ೨ ||

ಕಳೆದು ಹೋಗಿತ್ತು
ಕಾಣದ ವಸ್ತುವೊಂದು
ಮಾಂತ್ರಿಕನ ಮಾಟಕ್ಕೆ
ಮೋಹಗೊಂಡಂತೆ
ಪರವಶವಾಗಿತ್ತು ಎಲ್ಲ || ೩ ||

ಅದೆಂತಹ ನಾಟಕ
ಅದೆಂತಹ ಕತೆ
ಅದೆಂತಹ ಪಾತ್ರ
ಅದೆಂತಹ ಪ್ರೇಕ್ಷಕ
ಅದೆಂತಹ ಚಪ್ಪಾಳೆ
ಆದ ಹೇಳಲು ಯಾರಿಲ್ಲ ಈಗ || ೪ ||

Friday, April 1, 2016

ನೆಗಡಿ ಬಂದಿತ್ತು

ಗಡ ಗಡ ಅನ್ನುತ್ತಾ ನೆಗಡಿ ಬಂದಿತ್ತು
ಮೈಕೈ ಗಡ ಗಡನೆ ನಡುಗಿತ್ತು
ಸೀನುಗಳ ಸುರಿಮಳೆ ತಂದಿತ್ತು
ಮೂಗು ಮಾಳಿಗೆಯಂತೆ ಸೋರಿತ್ತು
ಉಸಿರಾಟ ವನ್ ವೇ ಟ್ರಾಫೀಕ್ಕಿನಂತಾಗಿತ್ತು
ಗಂಟಲು ಮೆಂಟಲ್ಲ೦ತೆ ಕೆರೆದಿತ್ತು
ಹಣೆ ಹಂಚಂತೆ ಕಾದಿತ್ತು
ರುಚಿ ರೊಚ್ಚು ಹಿಡಿದಿತ್ತು
ಕಣ್ಣಲ್ಲಿ ಮಂಜು ಕವಿದಿತ್ತು
ತಲೆ ಬಾಂಬಂತೆ ಸಿಡಿದಿತ್ತು
ನೆಗಡಿಯ ನೆಪದಲಿ ಜ್ವರ
ಕೆಮ್ಮು ಸರದಿಯಲಿ ಕಾದಿತ್ತು
ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...