Friday, September 30, 2016

ಕಲಾಕಾರನ ಸವಾಲು

ಕಲಾಕಾರನ ಸಾಧನೆಯ
ದಾರಿಯ ಅತಿ ದೊಡ್ಡ
ಸವಾಲು ಯಶಸ್ಸಲ್ಲ
ಯಶಸ್ಸನ್ನು ಉಳಿಸಿಕೊಳ್ಳುವದಲ್ಲ
ಆ ಯಶಸ್ಸಿನಿಂದ ತಾನು
ತನ್ನ ಕಲೆಯನ್ನು ಉಳಿಸಿಕೊಂಡು
ಪ್ರಾಮಾಣಿಕನಾಗಿರುವುದು

Tuesday, September 27, 2016

ಬಾಯಿ ಸತ್ತವ

ಮನೆಯಲಿ ತಪ್ಪು ನಿನ್ನದಾದರೂ ಕೂಡ
ಜವಾಬ್ದಾರಿ ಎಲ್ಲರದು
ಹೊರ ಜಗದಲಿ ತಪ್ಪು ನಿನ್ನದಾದರೆ
ಜವಾಬ್ದಾರಿ ಕೂಡ ನಿನ್ನದು
ನೀನು ಬಾಯಿ ಸತ್ತವನಾಗಿದ್ದರೆ ತಪ್ಪು
ಯಾರದಾದರೂ ಜವಾಬ್ದಾರಿ ನಿನ್ನದು

Sunday, September 25, 2016

ಗುಣ - ದೋಷ

ತಮ್ಮ ಆನೆಯಂತ ದೋಷವನ್ನು ಮರೆತು
ಬೇರೆಯವರ ಇರುವೆಯಂತ ದೋಷವನ್ನು
ಆನೆಯಂತೆ ಪ್ರತಿಬಿಬಿಂಬಿಸುವುದು
ಬೇರೆಯವರ ಆನೆಯಂತ ಗುಣವನ್ನು ಮರೆತು
ತಮ್ಮ ಇರುವೆಯಂತ ಗುಣವನ್ನು
ಆನೆಯಂತೆ ಪ್ರತಿಬಿಬಿಂಬಿಸುವುದು
ಕೆಲವರ ಹುಟ್ಟುಗುಣ

ಅಂತರ

ಅವಳೆಂದುಕೊಂಡಳು ಆತ
ಕಟ್ಟಿದರೆ ನನ್ನ ಕನಸಿನ ಗೋಪುರ
ಆಗಬಹುದು ನಾವಿಬ್ಬರು ಹತ್ತಿರ || ೧ ||

ಅವನೆಂದುಕೊಂಡ ಅವಳ
ಕನಸ ನನಸಾಗಿಸಿದರೆ
ಆಗಬಹುದು ನಾವಿಬ್ಬರು ಹತ್ತಿರ || ೨ ||

ಒಂದೊಂದೇ ಇಟ್ಟಿಗೆ ಕೂಡುತ್ತಾ ಹೋದ ಆತ
ಒಂದೊಂದೇ ಇಟ್ಟೆಗೆ ಜೋಡಿಸುತ್ತಾ ಹೋದಳು ಅವಳು || ೩ ||

ಕಾಲದ ಪರಿವೆ ಮರೆತು ಕಟ್ಟಿ ಮುಗಿಸಿದಾಗ
ಗೋಪುರದ ತುದಿ ಚುಂಬಿಸಿತ್ತು ಆಗಸವನ್ನು
ಅವಳಿದ್ದಳು ಗೋಪುರದ ತುದಿಯಲ್ಲಿ
ಆತನಿದ್ದ ಗೋಪುರದ ತಳದಲ್ಲಿ
ಅವರಿಬ್ಬರ ನಡುವಿತ್ತು ಭೂಮ್ಯಾಕಾಶದ
ಅಂತರ || ೪ ||
ಬುಡ ಬುಡ್ಕಿ ಬಾಬಾ

Thursday, September 22, 2016

ಕಾಯುವುದು

ಕೆಲವು ವಿಷಯಗಳೇ ಹಾಗೆ
ಹೇಳಬೇಕೆನಿಸಿದರೂ ಹೇಳಲಾಗದು
ಗೊತ್ತಾದರೂ ಗೊತ್ತಾಗಿದೆಯೆನ್ನಲಾಗದು
ಮೊಗ್ಗು ಹೂವಾಗಿ ಹೂವು ಹಣ್ಣಾಗುವುದಕ್ಕೆ
ಕಾದಂತೆ ಕಾಲದ ಪಕ್ವತೆಗೆ  ಕಾಯಬೇಕು
ಬುಡ ಬುಡ್ಕಿ ಬಾಬಾ

ಆಸ್ವಾದ

ಕಾವ್ಯ
ಅಸ್ವಾದಿಸಲಾಗದು
ನಮ್ಮ
ತರ್ಕದ
ಗಡಿ ದಾಟಿ
ಕಾವ್ಯದ
ಭಾವದಲಿ
ತಲ್ಲೀನವಾಗದೆ
ಬುಡ ಬುಡ್ಕಿ ಬಾಬಾ

Tuesday, September 20, 2016

ಅಧ್ಯಾತ್ಮ ಹಾಗೂ ವಿಜ್ಞಾನ

ಅಧ್ಯಾತ್ಮವನ್ನು ವಿಜ್ಞಾನದ ಹಿನ್ನೆಲೆಯಲಿ
ವಿಜ್ಞಾನವನ್ನು ಆಧ್ಯಾತ್ಮದ ಹಿನ್ನೆಲೆಯಲಿ
ನೋಡುವದಕಿಂತ ದೊಡ್ಡ ದುರಂತ
ಇನ್ನೊಂದಿಲ್ಲ

ಕಾವ್ಯ

ಈ ಕ್ಷಣ ಈ ಸ್ಥಳದಲ್ಲಿ
ಕುಳಿತಲ್ಲೇ ಕುಳಿತು
ಬ್ರಹ್ಮಾಂಡದ ಯಾವುದೋ
ತುದಿ ತಲುಪಿ
ಮನಸಿನಲಿ ಅಡಗಿ
ಇದ್ದು ಇರದಂತಿರುವ
ಭಾವದ ಬಿಂಬವನ್ನು
ಶಬ್ದಗಳ ಪರಿಧಿ ದಾಟಿ
ಶಬ್ದಗಳ ನಡುವಿನ ಅರ್ಥದ
ದರ್ಪಣದಲಿ ಮಾಡುವ
ಅನಾವರಣವೇ
ಕಾವ್ಯ
ಬುಡ ಬುಡ್ಕಿ ಬಾಬಾ

Saturday, September 17, 2016

ಶಬ್ದ ನಿಶ್ಯಬ್ದ

ಅವಳಿಗಳಾಗಿ ಹುಟ್ಟಿ
ಜಗದ ಜಾತ್ರೆಯಲಿ
ಕಳೆದು ಹೋದ
ಶಬ್ದ ನಿಶ್ಯಬ್ದಗಳು
ಮುಖಾಮುಖಿಯಾಗಿದ್ದವು
ಕಳೆದು ಹೋದ ವರುಷಗಳ
ಲೆಕ್ಕ ತಪ್ಪಿದ ನಂತರ || ೧ ||

ಶಬ್ದ ಹೇಳಿ ಕೊಂಡಿತು
ಒಂದು ಉಸಿರಿಗೂ
ಅವಕಾಶ ಕೊಡದೆ
ಅದು ಇದು ಹಾಗೆ ಹೀಗೆ
ತಿಳಿದದ್ದು ಅರ್ಧ ತಿಳಿದದ್ದು
ತಿಳಿಯದರ ಬಗ್ಗೆಯೂ
ಒಂದೆರಡೂ ಸೇರಿಸಿ || ೨ ||

ಅದನೆಲ್ಲ ಅದ್ಯಾವಾಗಲೋ
ಮೀರಿದ್ದ ನಿಶ್ಯಬ್ದ
ಸುಮ್ಮನೆ ಕೇಳೀ
ಕೇವಲ ನಸುನಕ್ಕಿತು
ಆ ಮಿಂಚಿನ ನಸುನಗೆಯ
ಭಾವ ಅರಿತ
ಶಬ್ದ ನಿಶ್ಯಬ್ದವಾಯಿತು || ೩ ||

Saturday, September 10, 2016

ಅಮ್ಮ ಹಾಗೂ ಹೆಂಡತಿ

ಅಮ್ಮ ಹಾಗೂ ಹೆಂಡತಿ
ಬಡಿಸುವ ರೀತಿಯಲ್ಲಿ
ವ್ಯತ್ಯಾಸ ಬಲು ಅಲ್ಪ || ೧ ||

ಅಮ್ಮ ಬಡಿಸುವಳು
'ಬೇ'ಕೇ 'ಬೇ'ಕೇ
ಅನ್ನುತ್ತಾ
ಹೆಂಡತಿ ಬಡಿಸುವಳು
'ಸಾ'ಕೇ 'ಸಾ'ಕೇ
ಅನ್ನುತ್ತಾ || ೨ ||

ತಪ್ಪು ತಿಳಿಯದಿರಿ
ಅಮ್ಮನಿಗೆ ಮಗ
ಸೊರಗುವ ಚಿಂತೆ
ಹೆಂಡತಿಗೆ ಗಂಡ
ದಪ್ಪನಾಗುವ ಚಿಂತೆ || ೩ ||
ಬುಡ ಬುಡ್ಕಿ ಬಾಬಾ

ಹೊಸ ಅಧ್ಯಾಯ

ಆ ಹಳೇ ಕಟ್ಟಡವ
ಒಡೆದು
ಧರಾಷಾಯಿಯಾಗಿಸಿದ್ದರು
ಅದರ ಅವಶೇಷಗಳನು
ಆಗಲೇ ಸಾಗಿಸಾಗಿತ್ತು
ಬಿದ್ದಿದ್ದವು ಎಷ್ಟೋ
ವರ್ಷ ಆಸರೆಯಾಗಿದ್ದ
ಉಕ್ಕಿನ ಸರಳುಗಳು
ಅಸ್ಥಿ ಪಂಜರದಂತೆ
ಅನಾಥವಾಗಿ
ಮುಗಿದು ಹೋಗಿತ್ತು
ಇತಿಹಾಸದ ಅಧ್ಯಾಯವೊಂದು
ಅಲ್ಲೇ ಆಡುತಿತ್ತು
ಕೂಲಿಕಾರರ ಕೂಸೊಂದೂ
ಹೊಸ ಅಧ್ಯಾಯದ
ಮೊದಲ ಪುಟದಂತೆ
ಬುಡ ಬುಡ್ಕಿ ಬಾಬಾ

ಬದಲಾವಣೆ

ಕೇವಲ ಬಾಹ್ಯ ಬದಲಾವಣೆಯಿಂದ
ಆಂತರಿಕ ಬದಲಾವಣೆ ಸಾಧ್ಯವೇ?
ಆಂತರಿಕ ಬದಲಾವಣೆಯಾದಾಗ
ಅದರ ಬಾಹ್ಯ ತೋರ್ಪಡಿಕೆ ತಪ್ಪೇ?
ಬುಡ ಬುಡ್ಕಿ ಬಾಬಾ

Friday, September 9, 2016

ಅಪೂರ್ಣತೆ

ಅಪೂರ್ಣತೆಯೂ ಒಂದು ಕಲೆ
ಹೇಳು ಹೇಳುತ್ತಲೆ ಸುಮ್ಮನಾಗಿಬಿಡುವುದು
ಚಲನ ಚಿತ್ರ ಇನ್ನೂ ಬಾಕಿ ಎಂದೆನಿಸುವಾಗ ಮುಗಿದುಬಿಡುವುದು
ಇನ್ನೂ ಮುಂದೇನು ಎಂದು ನಡೆಯುವಾಗ ದಾರಿ ಕೊನೆಯಾಗುವುದು
ಜೀವನ ಎಂದೂ ಮುಗಿಯದು ಅಂದುಕೊಳ್ಳುತ್ತಲೇ
ಬುಡ ಬುಡ್ಕಿ ಬಾಬಾ

ಸ್ಪೂರ್ತಿ: http://vikaeksta.com/index.php?/pages/bio/

Thursday, September 8, 2016

ಸಾರ್ಥಕ ಪ್ರೀತಿ

ನಾನಲ್ಲ ಪರಿಪೂರ್ಣ
ನೀನಲ್ಲ ಪರಿಪೂರ್ಣ
ನಾನು ನೀನು ಕೂಡಿ
ಒಬ್ಬರ ನ್ಯೂನತೆಗಳಿಗೆ
ಇನ್ನೊಬ್ಬರ ಶಕ್ತಿಯ
ಆಸರೆ ಕೊಟ್ಟರೆ
ಆಗಬಹುದೇನೋ
ನಮ್ಮಿಬ್ಬರ ಜೀವನ
ಪರಿಪೂರ್ಣ
ಆಗಬಹುದೇನೋ
ನನ್ನ ನೀನ್ನ
ಪ್ರೀತಿ ಸಾರ್ಥಕ
ಬುಡ ಬುಡ್ಕಿ ಬಾಬಾ

Saturday, September 3, 2016

ಹದಿ ಹರೆಯ

ಹದಿ ಹರೆಯ
ತುಂಬಿತ್ತು
ಸಾವಿರಾರು
ಕನಸುಗಳಿಂದ
ಪ್ರತಿ ಕನಸು
ಗಾಢ ಬಣ್ಣಗಳ
ಓಕುಳಿ ಹಬ್ಬದಂತಿತ್ತು || ೧ ||

ಅದರ ಮುಗ್ಧತೆಯಲಿ
ಅಡಗಿತ್ತು
ಜಗದಲ್ಲೆಲ್ಲ ಬರಿ
ಸೌಂದರ್ಯವನ್ನೇ
ತೋರುವ
ಅಧ್ಭುತ್ ಮಾಂತ್ರಿಕತೆ || ೨ ||

ಎಲ್ಲ ಸಾಧ್ಯತೆಗಳಿಗೂ
ಧುಮ್ಮಿಕ್ಕುವ
ಜಲಪಾತದಂತೆ
ಮುಕ್ತವಾಗಿ
ನುಗ್ಗುವ
ಉತ್ಸಾಹವಿತ್ತು || ೩ ||

ಕಗ್ಗತ್ತಲು ಕ್ಷಣ
ಮಾತ್ರವೂ ಇರಲಿಲ್ಲ
ಕತ್ತಲಿದ್ದಾಗೂ
ದೀಪಾವಳಿಯ
ಹಬ್ಬದ ದೀಪದಂತ
ಪ್ರಭೆ ಸುತ್ತಲೂ
ಅವರಿಸಿರುತಿತ್ತು || ೪ ||

ಅಸಾಧ್ಯ ಎಂಬುದು
ಇದೆ ಎಂದೇ
ಅನಿಸಿರಲಿಲ್ಲ
ಕಾಲದ ಜೋಳಿಗೆಯಲ್ಲಿ
ಅಡಗಿದೆ
ತನಗೆ ಬೇಕಾದದೆಲ್ಲ
ಎಂಬ ಅದಮ್ಯ
ವಿಶ್ವಾಸವಿತ್ತು || ೫ ||

Friday, September 2, 2016

ಮಂತ್ರ ಮುಗ್ಧ

ಅದೆಂತಹದೊ ಧ್ವನಿ ಕೇಳಿತು
ನೋಡಿದರಾರಿಲ್ಲಾ ಸುತ್ತಲೂ ಯಾರು
ಆದರೂ ಅದೇಕೋ ಭಯವಿಲ್ಲ
ಅದರಲಿತ್ತು ಆಪ್ತತೆ ಚಿರಪರಚಿತ ಧ್ವನಿಯಂತೆ
ಅಂತರಂಗವ ತಟ್ಟಿ ಮನದಲಿ ಅನುರಣಿಸಿ
ಅದೆಲ್ಲಿಂದೋ ಬಂದು ಕರೆಯಿತು
ನಡೆ ಇನ್ನೂ ಸಾಕು ಹೊರಡೋಣ ಎಂದು
ಇದ್ದುದೆಲ್ಲವ ಬಿಟ್ಟು ನಡೆದು ಬಿಟ್ಟೆ
ಬಂದಿತ್ತದು ಕಾಲದ ಎಲ್ಲ ಪರಿಧಿಯ ದಾಟಿ
ತನಗಾಗಿಯೇ ಅದ್ಯಾವುದೋ ಜನ್ಮದಲ್ಲಿ
ತಾನೇ ಬಿಟ್ಟ ಕರೆಯಂತೆ ಕೈ ಹಿಡಿದು
ಕರೆದುಕೊಂಡು ಹೊರಟುಬಿಟ್ಟಿತು
ನಾ ಹಿಂಬಾಲಿಸಿದ್ದೆ ಮಂತ್ರ ಮುಗ್ಧನಾಗಿ
ಬುಡ ಬುಡ್ಕಿ ಬಾಬಾ


ದಾರಿ ತಪ್ಪಿದವರ ದಾರಿ

ಮುಗುಳ್ನಗೆ ಸುಳ್ಳು
ಪರಿಚಯ ಸುಳ್ಳು
ಬಣ್ಣ ತುಂಬಿದ್ದರೂ
ಏಕಾಂಗಿ ಎಲ್ಲರೂ
ದಾರಿ ತಪ್ಪಿದವರ
ದಾರಿ ಇದು

ಹಿಂದಿ ತಲಾಶ  ಚಿತ್ರದ ಮುಸ್ಕಾನೆ ಝೂಟಿ ಪಲ್ಲವಿಯ ಅನುವಾದ

ಹೋರಾಟ ಹಾರಾಟ

ಕಾಣದ ಸರಪಳಿಗಳು
ಬಂಧಿಸಿವೆ ಕನಸುಗಳನ್ನು
ಸುತ್ತಲೂ ಕವಿದ
ಗಾಢಂಧಕಾರಕ್ಕೆ
ಕಣ್ಣಿದ್ದೂ ಕುರುಡು || ೧ ||

ಗಾಳಿಯ ಕಣ ಕಣ
ಕೂಡಿಸಿ ಒಂದೊಂದೇ
ಉಸಿರೆಳೆಯುತ್ತಾ
ಸಾಗಿದೆ ಪಯಣ
ಹರಿಯುವ ನೀರಿಗೆ
ವಿರುದ್ಧವಾಗಿ || ೨ ||

ಸಾಗಿ ಬಂದ
ದಾರಿಯಲ್ಲಿಲ್ಲ
ಸಿಹಿ ತಾಣಗಳು
ಹಿಂತಿರುಗಿ
ನೋಡುವುದು
ಸಾಧ್ಯತೆಯೇ ಅಲ್ಲ || ೩ ||


ಗಾಳಿಯ ಜೊತೆ
ಹೋರಾಡುತ್ತಾ
ಅಂಧಕಾರವನ್ನು
ತಡೆದಿರುವ
ದೂರದಲ್ಲಿರುವ
ಮಿಣುಕು ದೀಪವೇ
ಸಂಗಾತಿ ಹಾಗೂ ಸ್ಪೂರ್ತಿ || ೪ ||

ನಿಲ್ಲದಿರಲಿ ಪಯಣ
ತುಂಬಿರಲಿ ಕಾಲಲ್ಲಿ
ನಿರಂತರ ಶಕ್ತಿ
ಮನಸಲ್ಲಿ ಸದಾ
ಉಕ್ಕುವ ಉತ್ಸಾಹ
ರಟ್ಟೆಯಲ್ಲಿ ಬಲ
ನುಗ್ಗುವ ಛಲ  || ೫ ||

ಇದೇನು
ಕತೆಯ ಕೊನೆಯೊ
ಹೊಸ ಕತೆಯ
ಆರಂಭವೋ
ಇದೇನು
ದಿನದ ಕೊನೆಯೊ
ಹೊಸ ದಿನದ
ಆರಂಭವೋ  || ೬ ||

ಸಾಧ್ಯವಿಲ್ಲ ಇನ್ನೂ
ಈ ಹಾರಾಟವನ್ನು
ತಡೆಯಲು
ಹಳೆಯದಕೆಲ್ಲ ಬೀಳ್ಕೊಡುಗೆ
ಕೊಟ್ಟು
ಆರಂಭವಾಗಲಿ
ಹೊಸ ಹೋರಾಟ ಹಾರಾಟ || ೭ ||

ಬುಡ ಬುಡ್ಕಿ ಬಾಬಾ

ಸ್ಪೂರ್ತಿ: ಹಿಂದಿ ಚಲನ ಚಿತ್ರ ಉಡಾನ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...