Tuesday, May 31, 2016

ಅಸಾಮಥ್ಯ೯

ಅಸಾಮಥ್ಯ೯ವನು ಅಡಗಿಸಲು ವ್ಯರ್ಥ
ಮಾಡದಿರು ಶಕ್ತಿ ಹಾಗೂ ಸಮಯವನು
ಅರ್ಥವಿಲ್ಲ ಅದರಲಿ ಒಂದಿಷ್ಟು
ನಿನ್ನ ಪ್ರತಿ ಅಸಾಮಥ್ಯ೯ವು ಬೆಳಕಿಗೆ
ಬಂದರೂ ಚಿಂತೆಯಿಲ್ಲ ಆದರೆ ಒಂದು
ಸಾಮಥ್ಯ೯ವೂ ಮುಚ್ಚಿ ಹೋಗದಿರಲಿ  || ೧ ||

ಅಸಾಮಥ್ಯ೯ವನು ಅಡಗಿಸಲು ಯಶಸ್ವಿಯಾದರೂ
ಸೋತಂತೆ ಸತ್ತಂತೆ ಮುಂದೆಂದೋ ಸಿಡಿಯುವ
ಸಿಡಿ ಮದ್ದನ್ನು ತಲೆಗೆ ಕಟ್ಟಿಕೊಂಡು ಮೆರೆದಂತೆ
ಸಾಮಥ್ಯ೯ ಕಂಡುಕೊಳ್ಳುವದು ಬೀಜ ಬಿತ್ತಿದಂತೆ
ಹೆಚ್ಚು ಹೆಚ್ಚು ಬೀಜಗಳು ಬಿತ್ತಿದರೆ ಒಂದಾದರೂ
ಸಸಿ ಬೆಳೆದು ಹೆಮ್ಮರವಾಗುವುವ ಸಾಧ್ಯತೆಯುಂಟು || ೨ ||

ಅಸಾಮಥ್ಯ೯ವನು ಅಡಗಿಸಲು ಯಶಸ್ವಿಯಾಗುವದು
ನೀ ಮುಗ್ಗರಿಸಿದ ಮೇಲೆ ಬೀಳುವ ಸಮಯವನ್ನು
ಹಿಗ್ಗಿಸಿದಂತೆ ಮಾತ್ರ ಬೀಳುವುದು ತಪ್ಪಿಸಲು ಸಾಧ್ಯವಿಲ್ಲ
ನೀ ಅಡಗಿಸಿದ ಪ್ರತಿ ಅಸಾಮಥ್ಯ೯ ಬೀರುವುದು ತನ್ನ
ಕರಿ ನೆರಳನ್ನು  ಸಾಮಥ್ಯ೯ದ ಸಸಿಗಳ ಮೇಲೆ
ಕುಂಠೀಸುವದು ಕೊಲ್ಲುವದು ಅವುಗಳ ಬೆಳವಣಿಗೆ || ೩ ||

ಪ್ರಕೃತಿಯ ಪ್ರತಿ ಜೀವಿ ತನ್ನ ತಾ ಗುರುತಿಸಿಕೊಂಡಿದೆ
ತನ್ನ ಸಾಮಥ್ಯ೯ದಿಂದ ಹೊರತು ಅಸಾಮಥ್ಯ೯ ಅಡಗಿಸಿ ಅಲ್ಲ
ಮೀನು ಮೀನಾಗಿರುವುದು ಈಜಿನಿಂದ ಹೊರತು  ಮರ  ಹತ್ತಲಾಗದನ್ನು  ಅಡಗಿಸಿ ಅಲ್ಲ
ಮಾನವನಿಗೇಕೆ ಈ ತೆವಲು ಅಸಾಮಥ್ಯ೯ಗಳಿಗೆ ತೇಪೆ ಹಾಕಲು; ಬಿಟ್ಟು ಬಿಡು
ಅಸಾಮಥ್ಯ೯ಗಳ ಭಾರ ಹೊತ್ತು ನಡೆದು ಸಾಮಥ್ಯ೯ಗಳ ಬೆನ್ನು ಮುರಿಯದಿರು
ಜೀವನದ ಪ್ರತಿ ಉಸಿರು ಸಾಮಥ್ಯ೯ಗಳಿಗೆ ಬಳಸಿ ಸಾರ್ಥಕಗೊಳಿಸು || ೪ ||

ಬುಡ ಬುಡ್ಕಿ ಬಾಬಾ

Monday, May 23, 2016

ಎಲ್ಲ ಓಕೇ ಈ ಕಾಮೆಂಟ್ ಯಾಕೆ?

ಹೊಸಬರ ಕಲೆಗೆ ಪ್ರಥಮ ಪ್ರತಿಕ್ರಿಯೆ
ಒಹ್ ಬಹಳ ಮುಕ್ತ ಸಮಯವಿದೆ
ನಿನ್ನ ಹತ್ತಿರ ಎಂದು ಕಾಣುತ್ತೆ ಅಂತ
ಏಕೆ ಆಗಿರುತ್ತೆ? || ೧ ||

ಟೀವೀ ಮುಂದೆ ಕುಳಿತು
ಘಂಟೆ ಗಟ್ಟಲೆ ಯಾವುದೇ
ಉಪಯೋಗಕ್ಕೆ ಬಾರದ
ಕಾರ್ಯಕ್ರಮ ನೋಡಿದರೂ
ಓಕೇ
ಆದರೆ ಕಲೆಗಷ್ಟೆ ಮಾತ್ರ ಈ ತರಹದ
ಕಾಮೆಂಟ್ ಯಾಕೆ? || ೨ ||
- ಬುಡ ಬುಡ್ಕಿ ಬಾಬಾ

Saturday, May 21, 2016

ಕ್ರಾಂತಿ ಆಗಬೇಕಿದೆ

ಅಧರ್ಮ ಓಡುತಿದೆ
ಧರ್ಮ ಕುಂಟುತಿದೆ
ಕ್ರಾಂತಿ ಆಗಬೇಕಿದೆ || ೧ ||

ಪ್ರಾಮಾಣಿಕತೆ ನೆಲ ಕಚ್ಚಿದೆ
ಮೋಸ ಮುಗಿಲ ಮುಟ್ಟಿದೆ
ಕ್ರಾಂತಿ ಆಗಬೇಕಿದೆ || ೨ ||

ಶ್ರಮಿಕನ ಶವ ಬಿದ್ದಿದೆ
ಕಪಟಿಯ ಕೀರ್ತಿ ಎದ್ದಿದೆ
ಕ್ರಾಂತಿ ಆಗಬೇಕಿದೆ || ೩ ||

ಕಾಂತಿ ಕುಂದುತಿದೆ
ಕತ್ತಲು ಕುದುರುತಿದೆ
ಕ್ರಾಂತಿ ಆಗಬೇಕಿದೆ || ೪ ||

ಕಣ್ಣು ತೆರೆಯಬೇಕಿದೆ
ಕಿವಿ ಕೇಳಬೇಕಿದೆ
ಕ್ರಾಂತಿ ಆಗಬೇಕಿದೆ || ೫ ||

ಅಸತ್ಯ ಅಳಿಯಬೇಕಿದೆ
ಸತ್ಯ ಉಳಿಯಬೇಕಿದೆ
ಕ್ರಾಂತಿ ಆಗಬೇಕಿದೆ || ೬ ||
ಬುಡ ಬುಡ್ಕಿ ಬಾಬಾ

ಕಲಿಯಬೇಕಿದೆ (Inspired by: David Foster)

ಕಲಿಯಬೇಕಿದೆ ಸ್ವಗತವ ಮೆಟ್ಟಿ
ಜಾಗ್ರತನಾಗಿ ಗಮನ ಕೊಡುವುದನ್ನು
ಕಷ್ಟವಲ್ಲವೇ ? ಭಾರೀ ಕಷ್ಟ || ೧ ||

ಕಲಿಯಬೇಕಿದೆ ಯೋಚಿಸುವದಕಿಂತ
ಮುಖ್ಯವಾಗಿ ಯಾವುದರ ಬಗ್ಗೆ
ಹಾಗೂ ಹೇಗೆ ಯೋಚಿಸುತ್ತೇನೆ
ಎಂಬುದರ ಮೇಲಿನ ಹಿಡಿತವನ್ನು || ೨ ||

ಕಲಿಯಬೇಕಿದೆ ಪ್ರಜ್ಞಾಪೂರ್ವಕವಾಗಿ
ಯಾವ ವಿಷಯಕ್ಕೆ ಗಮನ ಕೊಡಬೇಕು
ಹೇಗೆ ಅನುಭವಗಳಿಂದ ಅರ್ಥವನು
ಸೋಸೀ ಹೊರ ತಗೆಯಬೇಕೆಂದು  || ೩ ||

ಕಲಿಯದೆ ಇದನು ಆತ್ಮಹತ್ಯೆ
ಮಾಡಿ ಕೊಳ್ಳುವರು ತಲೆಗೆ ಗುಂಡು
ಹೊಡೆದುಕೊಂಡು ಆದರೆ ಸತ್ಯವೆನೆಂದರೆ
ಬಂದೂಕಿನ ಕುದುರೆ ಎಳೆಯುವ
ಮುನ್ನವೇ ಅವರು ಸತ್ತು ಹೋಗಿದ್ದರೆಂದು || ೪ ||

ಬುಡ ಬುಡ್ಕಿ ಬಾಬಾ

Inspired by following article:
https://www.brainpickings.org/2012/09/12/this-is-water-david-foster-wallace/

Friday, May 20, 2016

ಮಾತಿನ ನಡುವಿನ ಮೌನ

ಮಾತಿನ ನಡುವಿನ ಮೌನ
ತರುವುದು ಮಾತಿಗೆ ಅರ್ಥ  || ೧ ||

ಮಾತಿನ ನಡುವಿನ ಮೌನ
ಹೊಸ ವಿಚಾರಗಳ ಹುಟ್ಟಿಗೆ ನಾಂದಿ || ೨ ||

ಮಾತಿನ ನಡುವಿನ ಮೌನ
ಕೇಳುಗರಿಗೆ ತೋರುವ ಗೌರವ || ೩ ||

ಮಾತಿನ ನಡುವಿನ ಮೌನ
ವಿಷಾದದ ಸಂಭಾವ್ಯತೆಗೆ ತಡೆಗೋಡೆ  || ೪ ||

ಮಾತಿನ ನಡುವಿನ ಮೌನ
ನೀ ನಿನ್ನೊಡನೆ  ನಡೆಸುವ ಸಂಭಾಷಣೆ || ೫ ||
ಬುಡ ಬುಡ್ಕಿ ಬಾಬಾ

ಅಂತೆ ಕಂತೆ

ತಿಳಿದಿಲ್ಲ ಯಾರಿಗೂ
ಅದೇನ೦ತೆ
ಅದೇಕ೦ತೆ || ೧ ||

ನಡೆದು ಬಂದಿದೆ
ಬಹುಕಾಲದಿಂದ ಇದು
ಹೀಗೆಯಂತೆ || ೨ ||

ನಡೆಯಬೇಕಂತೆ
ಮುಂದೆ ಕೂಡ
ಈಗಿರುವಂತೆ || ೩ ||

ಅಯ್ಯೋ ! ತಿಳಿಯದಪ್ಪ
ನನಗೆ ಈ
ಅಂತೆ ಕಂತೆ  || ೩ ||

ಸಾಕಾದರೇನಂತೆ
ಸಾಗರದಲಿ ಬಿದ್ದ ಮೇಲೆ
ಈಸಬೇಕಂತೆ || ೪ ||
ಬುಡ ಬುಡ್ಕಿ ಬಾಬಾ

ಅಂತೆ ಕಂತೆ ? https://kn.wikipedia.org/s/15k6

Wednesday, May 18, 2016

ಕಾಗೆ ಗೂಡು

ಕಾಗೆ ಗೂಡಿದು
ಕಾಗೆ ಗೂಡಿದು ಎಂದು
ಕಡೆಗಣಿಸದಿರಿ ನೆನಪಿಡಿ
ಕೋಗಿಲೆ ಹುಟ್ಟಿದ್ದು
ಕಾಗೆ ಗೂಡಲ್ಲೇ
ಬುಡ ಬುಡ್ಕಿ ಬಾಬಾ

Tuesday, May 17, 2016

ಹೆಂಡ ಕುಡಿದೇ ಇಲ್ಲವೇ?

ಹೆಂಡ ಕುಡಿದೇ ಇಲ್ಲ ಎಂದು ಅಹಂಕಾರ ಬೇಡ
ಹೆಂಡ ಮುಟ್ಟೆ ಇಲ್ಲ ಎಂದು ಅಹಂಕಾರ ಬೇಡ
ಹೆಂಡಕಿಂತ ಹೆಚ್ಚು ಮತ್ತು ಬರಿಸುವ
ಕಾಮ ಕ್ರೋಧ ಮೋಹ ಮದ ಮತ್ಸರ ಲೋಭಗಳೆಂಬ
ವಿಚಾರಗಳುಂಟು ಈ ಜಗದಲಿ
ಸುಳಿದೇ ಇಲ್ಲವೇ ಆ ವಿಚಾರಗಳು ನಿನ್ನ ಮನದಲಿ
ಸುಳಿದಾಗ ಆ ವಿಚಾರಗಳು ನೀ  ಕೊಟ್ಟೆ ಇಲ್ಲವೇ ಪೋಷಣೆ
ಇಡು ನಿನ್ನ ಕೈಯ ನಿನ್ನ ಹೃದಯದ ಮೇಲೆ
ಹೇಳು ಈಗ
ಹೆಂಡ ಕುಡಿದೇ ಇಲ್ಲವೇ?
ಹೆಂಡ ಮುಟ್ಟೆ ಇಲ್ಲವೇ?
ಬುಡ ಬುಡ್ಕಿ ಬಾಬಾ

Saturday, May 14, 2016

ಬದಲಿಸಿಲಾಗದು ಯಾರನ್ನೂ

ನಾನು ಬದಲಿಸಿ ಬಿಡುವೆ
ನಾನು ಬದಲಿಸಿ ಬಿಡುವೆ ಎಂಬ ಭ್ರಮೆ ಬೇಡ
ಬದಲಿಸಲು ಸಾಧ್ಯವಿಲ್ಲ ನೀನೆಂದುಕೊಂಡಂತೆ
ತಂದೆ ತಾಯಿ ಹೆಂಡತಿ ಮಕ್ಕಳು ಬಂಧು ಬಳಗ
ಗೆಳೆಯ ಸಹದ್ಯೋಗಿ ಯಾರನ್ನೂ || ೧ ||

ಗಾಳಿಗೆ ಗುದ್ದಿ ಮೈ ನೋಯಿಸಿಕೊಂಡಂತೆ  ವ್ಯರ್ಥ ಆ ಪ್ರಯತ್ನ
ಬದಲಿಸಿಲಾಗದು ಬಲವಂತವಾಗಿ ಯಾರನ್ನೂ
ಅಂತರಿಕವಾಗಿರುವ ಅಂಧಕಾರವನು ತಾನೇ ಕಂಡು
ಹಣತೆ ಎಣ್ಣೆ ಬತ್ತಿ ಜೋಡಿಸಿಕೊಂದು  ಕಾದವನ
ಮನದ ದೀಪ ಪ್ರಜ್ವಲಿಸಬಹುದೇ ಹೊರತು
ಹೊರಗಿನ ದೀಪ ಒಳಗಿಡಲಾಗದು || ೨ ||

ನೋಡಿ ನಾನೇ ಬದಲಿಸಿದೆ ಎಂದು ನೀನೆಂದುಕೊಂಡಿದ್ದರೆ
ಅದೊಂದು ಬಿಳಿ ಕೂದಲಿಗೆ ಹಾಕಿದ ಕರಿ ಬಣ್ಣದಂತೆ
ಹೊಂದದಿದ್ದರೂ ಹೇಗೋ ಅಷ್ಟಿಷ್ಟು ಅಂದ ಹೆಚ್ಚಿಸಿ
ಕೆಲ ಸಮಯದಲ್ಲೇ ಮಾಸಿ ತಲೆಯಲ್ಲ ಕರಿ ಬಿಳಿಯ
ತೇಪೆಯಂತಾಗಿ ಕೂರೂಪಿಯಾಗುವದೇ ಹೊರತು
ಶಾಶ್ವತ ಸುರುಪಿಯಾಗಲಾರದು || ೩ ||

ಈ ನಡಿಗೆ

ನಡಿಗೆ
ಬಿಡಬೇಡಿ
ಬಿಟ್ಟು
ಕೆಡಬೇಡಿ
ನಿಮ್ಮ
ಹೊಟ್ಟೆಯಲಿ
ಅಡಗಿರುವ
ಗಡಿಗೆ
ಒಡೆಯುವ
ಬಡಿಗೆ
ಈ ನಡಿಗೆ

Tuesday, May 10, 2016

ಕನಸುಗಳು ಅಪರಿಮಿತವಾಗಿರಲಿ

ಮನಸು
ಮಾಗಿದ ಮಾತ್ರಕ್ಕೆ
ಕಲ್ಪನಾತೀತ
ಕನಸುಗಳು
ವಾಸ್ತವದ
ಅಲೆಗೆ
ಕೊಚ್ಚಿ ಹೋಗದಿರಲಿ || ೧ ||

ಮನಸು
ಮಾಗಿದ ಮಾತ್ರಕ್ಕೆ
ಕಲ್ಪನಾತೀತ
ಕನಸುಗಳು
ಅನುಭವಗಳ
ಕೋಟೆಯಲ್ಲಿ
ಬಂಧಿ ಆಗದಿರಲಿ || ೨ ||

ಮನಸು
ಮಾಗಿದ ಮಾತ್ರಕ್ಕೆ
ಕಲ್ಪನಾತೀತ
ಕನಸುಗಳು
ಅರಿವಿನ
ಪರಿಧಿಗೆ
ಸೀಮಿತ ಆಗದಿರಲಿ || ೩ ||

ಮನಸು
ಮಾಗಿದ ಮಾತ್ರಕ್ಕೆ
ಕಲ್ಪನಾತೀತ
ಕನಸುಗಳು
ಪರಿಮಿತವಾಗದಿರಲಿ
ಅವು ಸದಾ
ಅಪರಿಮಿತ ಆಗಿರಲಿ || ೪ ||
ಬುಡ ಬುಡ್ಕಿ ಬಾಬಾ

Monday, May 2, 2016

ಮಹಾ ಪೂಜೆ

ನಿನ್ನಲ್ಲಿ
ನೀನಿಡುವ
ನಂಬಿಕೆ
ನೀನ್ನ
ಸೃಷ್ಟಿಸಿದ
ಭಗವಂತನಿಗೆ
ನೀ
ಸಲ್ಲಿಸುವ
ಮಹಾ ಪೂಜೆ
ಬುಡ ಬುಡ್ಕಿ ಬಾಬಾ

ಕೆಲಸವೆಂದರೇನು ? (ಅನುವಾದ: ON WORK - Kahlil Gibran)

ಕೆಲಸ ಮಾಡುವುದು ಎಂದರೆ
ಭೂಮಿಯ ಹಾಗೂ ಭೂಮಿಯ ಆತ್ಮದ
ಜೊತೆ ಜೊತೆಗೆ ಹೆಜ್ಜೆ ಹಾಕಿದಂತೆ || ೧ ||

ಕೆಲಸ ಮಾಡದಿರುವುದು ೠತುಗಳಿಗೆ ಅಪರಿಚಿತನಾದಂತೆ
ಭವ್ಯ ಜೀವನದ ಮೆರವಣಿಗೆಯಿಂದ ಹೊರಗೆ ಬಂದಂತೆ
ಹೆಮ್ಮೆಯಿಂದ ಆ ಅನಂತಕ್ಕೆ ತಲೆ ಬಾಗುವ ಅವಕಾಶವಂಚಿತನಾದಂತೆ || ೨ ||

ಕೆಲಸ ಮಾಡಿದಾಗ ನೀನೊಂದು ಕೊಳಲಂತೆ
ಆ ಕೊಳಲ ಹೃದಯದಲಿ ಸಮಯದ ಎದೆಬಡಿತ
ಮಧುರ ಸಂಗೀತವಾಗಿ ಹೊರ ಹೊಮ್ಮುವುದು || ೩ ||

ನೀ ಕೇಳಿದಂತೆ  ಕೆಲಸ ಶಾಪವಲ್ಲ ಕೆಲಸ ದುರಾದೃಷ್ಟವಲ್ಲ
ನೀ ಕೆಲಸ ಮಾಡಿದಾಗ ಭೂಮಿ ಕಂಡ ಕನಸನ್ನು ನನಸು ಮಾಡಿದಂತೆ
ಆ ಕನಸಿನ ಹುಟ್ಟಿನಲಿ ನಿನಗೆ ಕೊಟ್ಟ ಪಾತ್ರವನ್ನು ನೀ ನೆರವೇರಿಸಿದಂತೆ || ೪ ||

ಕೆಲಸದ ಶ್ರಮವು ಕೊಂಡೊಯ್ಯುವುದು ನಿನ್ನ
ಸತ್ಯ ಪ್ರೀತಿಸುವ ಜೀವನಕೆ ಸಮೀಪ ಆ ಸಾಮಿಪ್ಯವೇ
ಜೀವನದ ಆಳದಲಿ ಹುದುಗಿರುವ ರಹಸ್ಯಕ್ಕೆ ದಾರಿಯಂತೆ || ೫ ||

ನೀ ನಿನ್ನ ನೋವಲ್ಲಿ ಹುಟ್ಟೂ೦ದು ಹಿಂಸೆಯೆಂದುಕೊಂಡಿದ್ದರೆ
ಹೊಟ್ಟೆಪಾಡನ್ನು ನಿನ್ನ ಹಣೆ ಬರಹದಲಿ ಬರೆದ ಶಾಪವೆಂದುಕೊಂಡಿದ್ದರೆ
ಅದಕೆ ನಾ ಹೇಳುವ ಉತ್ತರ ಅಲ್ಲ ಅದು ಹಾಗಲ್ಲ
ಶ್ರಮದಿಂದ ಹರಿದ ಬೆವರ ಹನಿ ಆಳಿಸುವದು ಬರೆದ ಹಣೆ ಬರಹವನ್ನು  || ೬ ||

ನೀ ಕೇಳಿರಬಹುದು ಜೀವನವೊಂದು ಕಗ್ಗತ್ತಲೆ ಎಂದು
ನಿನ್ನ ಬಳಲಿಕೆಯ ಕ್ಷಣದಲಿ ನೀನು ಅದನೇ ಪ್ರತಿಧ್ವನಿಸಿರಬಹುದು
ಆದರದು ಅಸಹನೆಯಿಂದ ಹೇಳಿದ ಮಾತಷ್ಟೇ || ೭ ||

ಜೀವನವಾಗುವುದು ಕಗ್ಗತ್ತಲೆ ಪ್ರೇರಣೆಯಿಲ್ಲದಿರುವಾಗ
ಪ್ರೇರಣೆಯಾಗುವುದು ಕುರುಡು ಜ್ಞಾನವಿಲ್ಲದಿರುವಾಗ
ಜ್ಞಾನವೆಲ್ಲಾ ವ್ಯರ್ಥ ಕೆಲಸವಿಲ್ಲದಿರುವಾಗ
ಕೆಲಸವೆಲ್ಲಾ ಟೊಳ್ಳು ಪ್ರೀತಿಯಿಲ್ಲದಿರುವಾಗ
ಪ್ರೀತಿಯಿಂದ ಕೆಲಸ ಮಾಡುವುದೆಂದರೇನು? || ೮ ||

ನಿನ್ನ ಪ್ರೀತಿ ಪಾತ್ರರು ನೀ ನೇಯ್ದ ಬಟ್ಟೆ ಧರಿಸುವರೇನೋ ಎಂಬಂತೆ
ಹೃದಯದಿಂದ ತಗೆದ ನೂಲಿನಿಂದ ಬಟ್ಟೆ ನೇಯ್ದಂತೆ || ೯ ||

ನಿನ್ನ ಅಚ್ಚು ಮೆಚ್ಚಿನವರು ನೀ ಕಟ್ಟಿದ ಮನೆಯಲಿಇರುವರೇನೋ ಎಂಬಂತೆ
ಅಕ್ಕರೆಯಿಂದ ಮನೆ ಕಟ್ಟಿದಂತೆ || ೧೦ ||

ನಿನ್ನ ಒಲವು ಗೆದ್ದವರು ಆ ಹಣ್ಣು ತಿನ್ನುವರೇನೋ ಎಂಬಂತೆ
ಮೃದುವಾಗಿ ಬೀಜ ಬಿತ್ತಿ ಖುಷಿಯಾಗಿ ಸುಗ್ಗಿ ಮಾಡಿದಂತೆ || ೧೧ ||

ನಿನ್ನ ಪೂರ್ವಜರೆಲ್ಲ ಸಾವಿನಿಂದ ಎದ್ದು ನಿನ್ನನ್ನೇ ನೋಡುತಿರುವರೇನೋ ಎಂಬ ಅರಿವಿನಲ್ಲಿ
ನೀ ರೂಪಿಸುವ ಪ್ರತಿ ವಸ್ತುವಿನಲಿ ನಿನ್ನ ಚೇತನದ ಉಸಿರು ತುಂಬಿದಂತೆ || ೧೨ ||

ಮೇಲಿಂದ ಮೇಲೆ ಕೇಳಿದ್ದೇನೆ ನಿದ್ದೆಯಲಿ ಬಡಬಡಿಸಿದಂತೆ ಹೇಳಿದುದನು
ಅಮೃತ ಶಿಲೆಯನು ಕಡಿದು ತನ್ನ ಆತ್ಮವನೆ ಆ ಶಿಲೆಯಲಿ ಕಂಡವನು
ಭೂಮಿ ಉಳುವನಿಗಿಂತ ಶ್ರೇಷ್ಠನೆಂದು
ಕಾಮನ ಬಿಲ್ಲನ್ನು ಹಿಡಿದು ಬಟ್ಟೆಯ ಮೇಲೆ ಮೂಡಿಸಿ ಮೆಚ್ಚುಗೆ ಪಡೆದವನು
ಕಾಲಿಗೆ ಚಪ್ಪಲಿ ಹೊಲಿಯುವನಿಗಿಂತ ಶ್ರೇಷ್ಠನೆಂದು
ಆದರೆ ಕೇಳಿ ನಾನು ಹೇಳುತ್ತಿಲ್ಲ ಮಂಪರಿನಲಿ ಸಂಪೂರ್ಣ ಜಾಗರೂಕನಾಗಿ ಹೇಳುತಿದ್ದೇನೆ
ಬೀಸುವ ಗಾಳಿಯ ಸವಿ ಆಲದ ಮರಕೊಂದು ಹುಲ್ಲಿನ ಕಡ್ಡಿಗೊಂದು ಅಲ್ಲ
ಶ್ರೇಷ್ಠ ಅವನೊಬ್ಬನೇ ಯಾರು ಬೀಸುವ ಗಾಳಿಯ ಶಬ್ದವನ್ನು ಕೂಡ
ತನ್ನ ಪ್ರೀತಿಯಿಂದ ಸವಿ ಸಂಗೀತವಾಗಿ ಮಾಡುವನೋ ಅವನು ಮಾತ್ರ || ೧೩ ||

ಕೆಲಸ ಪ್ರೀತಿಯ ವ್ಯಕ್ತ ರೂಪದಂತೆ
ನೀ ಪ್ರೀತಿಯಿಂದ ಕೆಲಸ ಮಾಡಲಾಗದೆ ಬರಿ ಜಿಗುಪ್ಸೇಯಿಂದ ಕೆಲಸ ಮಾಡುವ ಬದಲು
ಯಾವೋದೊ ಗುಡಿಯ ಮುಂದೆ ಕುಳಿತು ಆನಂದದಿಂದ ಕೆಲಸ ಮಾಡಿದವರ ಮುಂದೆ
ತಿರುಪೆ ಎತ್ತುವುದು ಎಷ್ಟೋ ವಾಸಿ || ೧೪ ||

ಏಕೆಂದರೆ ನೀ ಅಸಡ್ಡೆಯಿಂದ ಅನ್ನ ಬೇಯಿಸಿದರೆ ಆ ಕಹಿ ಅನ್ನ
ಹಸಿದವನು ಉಂಡರೂ ತುಂಬುವದೋ ಮಾತ್ರ ಅರೆ ಹೊಟ್ಟೆ || ೧೫ ||

ಏಕೆಂದರೆ ನೀ ದ್ವೇಷದಿಂದ ದ್ರಾಕ್ಷಿಗಳ ತುಳಿದರೆ ಆ ದ್ವೇಷ ವಿಷವಾಗಿ
ಬಟ್ಟಿ ಇಳಿಯುವದು ಸೋಸಿದ ದ್ರಾಕ್ಷಾ ರಸದಲಿ || ೧೬ ||

ಏಕೆಂದರೆ ನೀ ಗಂಧರ್ವರಂತೆ ಹಾಡಿದರೂ ಕೂಡ ಆ ಹಾಡಿನ ಬಗ್ಗೆ ಪ್ರೀತಿಯಿಲ್ಲದಿದ್ದರೆ
ಕೇಳುಗರ ಕಿವಿಗೆ ದಿನ ರಾತ್ರಿಯ ಸಂಗೀತದ ಧನಿ ಅಡಗಿಸಿದಂತೆ || ೧೭ ||

ಬುಡ ಬುಡ್ಕಿ ಬಾಬಾ

Source: http://www.katsandogz.com/onwork.html

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...