Sunday, July 31, 2016

ಗುರಿ ಇರಲಿ

ಗುರಿ ಇರಲಿ ಗುರಿ ಇರಲಿ
ಜೀವನಕೊಂದು ಗುರಿ ಇರಲಿ
ದೊಡ್ಡದೋ ಚಿಕ್ಕದೋ
ಸಮೀಪದ್ದೋ ದೂರದ್ದೋ
ಮನ ಮೆಚ್ಚುವ ಒಂದು
ಗುರಿ ಇರಲಿ || ೧ ||

ಜಗದಲಿದೆ ಒಂದಕಿಂತ ಒಂದು
ಮನ ಮೆಚ್ಚುವ ಗುರಿಗಳು
ಒಂದಾರಿಸಿಕೊಂಡ ಮೇಲೆ
ಮತ್ತೊಂದಕ್ಕೆ ಮನ
ಹಾತೊರೆಯುವಂತೆ ಮಾಡುವ
ಆಕರ್ಷಕ ಗುರಿಗಳು || ೨ ||

ನೋಡು ಅತ್ತಿತ್ತ ತಪ್ಪೇನಿಲ್ಲ
ವಿನಿಯೋಗಿಸು ಕೆಲ ಸಮಯ
ನಿನಗಿಷ್ಟವಾದ ಗುರಿಗಳಲಿ
ಬದಲಾಯಿಸು ನಿನ್ನ ಗುರಿ
ಅದೇ ನಿನ್ನ ಆಂತರಿಕ
ಕರೆಯಾಗಿದ್ದರೆ || ೩ ||

ಹೊಸ ಗುರಿಯ ಆಕರ್ಷಣೆ
ಬಹು ಬೇಗ ಕುಂದಿದರೂ
ಒಳ್ಳೆಯದೇ ಆಯಿತು
ಆಯ್ದು ಪೂರಕ ವಿಷಯಗಳ
ಮರೆಯದೆ  ಮರಳು
ಮತ್ತೆ  ನೀ ನಿನ್ನ
ಮುಖ್ಯ ಗುರಿಯ ದಾರಿಗೆ || ೪ ||
ಬುಡ ಬುಡ್ಕಿ ಬಾಬಾ

Saturday, July 30, 2016

ಹಣೆಬರಹ

ನಿನ್ನೆಲ್ಲ ಪ್ರಯತ್ನದ
ನಂತರವೂ
ನಿನಗಿಷ್ಟವಾದದ್ದು
ಸಿಗದಿರಬಹುದು
ಸಿಕ್ಕದ್ದು ಬಹು ಕಾಲ
ಉಳಿಯದಿರಬಹುದು || ೧ ||

ಆದರೇನಂತೆ ಎಲ್ಲ ನಡೆದಿದೆ
ನಮ್ಮ ಹಣೆಬರಹದಂತೆ
ನಮಗರಿವಿಲ್ಲದೆಯೆ
ಕರೆದುಕೊಂಡು ಹೊರಟಿದೆ
ನಾವು ಮುಟ್ಟಬೇಕಾದ
ನಮಗೆ  ದಕ್ಕಬೇಕಾದ
ಅತ್ಯುನ್ನತ್ತ ಸ್ಥಾನದತ್ತ || ೨ ||

ಅಚಲ ನಂಬಿಕೆಯಿಂದ
ದಣಿಯದೆ ಕೊರಗದೆ
ಕೊನೆಯುಸಿರಿರುವವರೆಗೆ
ನಿರಂತರ ನಮ್ಮ ಪಾತ್ರ
ಉತ್ಕೃಷ್ಟವಾಗಿ ಮನ:
ಸಾಕ್ಷಿ ಮೆಚ್ಚುವಂತೆ
ನಿಭಾಯಿಸುವುದಷ್ಟೆ
ನಮ್ಮ ಕೆಲಸ || ೩ ||
ಬುಡ ಬುಡ್ಕಿ ಬಾಬಾ

Friday, July 29, 2016

ಹಪಾ ಹಪಿ

ತನಗೆ ತಾನೇ ಯಾರೆಂದು
ತಿಳಿಯದಿದ್ದರೂ ಕೂಡ
ಅದೋ ಇದೋ
ಏನೋ ಒಂದು
ಆಗುವ
ಹಪಾ ಹಪಿ
ಸದಾ ಕಾಲ
ಸರಿಯೋ ತಪ್ಪೋ
ನಿಲ್ಲಲಂತೂ ಆಗದು
ಆದರೂ
ಬಂಗಾರದ ಗಣಿಯ
ಅದಿರಿನಲ್ಲಿ
ಕೆಲ ಅಂಶ ಬಂಗಾರ
ಅಡಗಿರುವಂತೆ
ನಮ್ಮತನ ತೋರುವದು ನಾವು
ಮಾಡುವ ಪ್ರತಿ ಕೆಲಸದಲ್ಲಿ
ಕೆಲ ಅಂಶವಾಗಿಯಾದರೂ
ಏನಾದರೂ ಆಗುವದು
ಬರಿ ದಾರಿ ಮಾತ್ರ
ಗುರಿ ಮಾತ್ರ
ಅಂಶ ಅಂಶವಾಗಿ
ತನ್ನ ತಾನು
ಅರಿಯುವದಾಗಿರಲಿ
ಬುಡ ಬುಡ್ಕಿ ಬಾಬಾ

Saturday, July 23, 2016

ದಮ್ಮಯ್ಯ ಬಿಟ್ಟು ಬಿಡಿ

ಬಾಳೊಂದು ಹೋರಾಟ
ಹೋರಾಟಗಾರರು ನಾವೆಲ್ಲ
ಹೋರಾಟವೆಂದ ಮೇಲೆ
ಹರಿಯುವುದು ನದಿಯಾಗಿ
ರಕ್ತ ಕಣ್ಣೀರು
ಹೋರಾಟದ ಕೊನೆಗೆ
ಸಾವು ಖಚಿತ || ೧ ||

ಇದನರಿತು ಕೂಡ
ಬಂಧಿಸದಿರಿ ಮಕ್ಕಳ
ಕನಸುಗಳನ್ನು ದಮ್ಮಯ್ಯ
ಬಿಟ್ಟು ಬಿಡಿ
ಹಾರಲು ಅವನು
ನೀಲಾಕಾಶದಲಿ || ೨ ||

ಬಿಟ್ಟು ಬಿಡಿ
ಅವರೇ ಆಯ್ದುಕೊಳ್ಳಲಿ
ತಮ್ಮ ಹೋರಾಟವನ್ನು
ದಮ್ಮಯ್ಯ ಬಂಧಿಸದಿರಿ
ಅವರನು ಬರಿ
ಹೊಟ್ಟೆಪಾಡಿನ ಗೊಟಕ್ಕೆ || ೩ ||

ಜೀತದಾಳಾಗಿ ದುಡಿದರೇನು
ಬಂತು ಸಂತೃಪ್ತಿ
ಗಳಿಸಿದ ಸಂಪತ್ತನ್ನು
ಅನುಭವಿಸಲು ಆಗದೆ
ಸತ್ತಂತೆ ಜೀವಿಸುವ
ಜೀವಂತ ಶವವಾಗಿಸುವ
ಬದಲು ದಮ್ಮಯ್ಯ
ಬಿಟ್ಟು ಬಿಡಿ || ೪ ||

ಹೋರಾಡಲಿ ಮಕ್ಕಳು
ಅವರು ಆಯ್ದ
ಹೋರಾಟವನ್ನು ಮನ
ಬಿಚ್ಚಿ ವೀರಾವೇಶದಿಂದ
ಹೊಟ್ಟೆ ತುಂಬದೆ
ಸತ್ತರೆ ಸಾಯಲಿ
ಬಿಡಿ ಸಿಗುವುದು
ಸಾವಲ್ಲೂ ಸಂತೃಪ್ತಿ || ೫ ||

ದಮ್ಮಯ್ಯ ಬಿಟ್ಟು
ಬಿಡಿ ನೀವು
ಕಂಡ  ಸೀಮಿತ
ಜೇವನವನ್ನೇ  ಏಕೆ
ಮಾಡುತಿರುವಿರಿ
ಜೀವನದ ಪರಿಭಾಷೆ
ದಮ್ಮಯ್ಯ ಬಿಟ್ಟು
ಬಿಡಿ ಮಕ್ಕಳ
ಕನಸುಗಳನು ಹಾರಲಿ
ಅವು ನೀಲಾಕಾಶದಲ್ಲಿ || ೬ ||
ಬುಡ ಬುಡ್ಕಿ ಬಾಬಾ

Thursday, July 21, 2016

ಗಾಳಿಗಿಂತ ಹಗುರ

ಕೇಳ್ರಪ್ಪೊ ಕೇಳ್ರಿ
ಗಾಳಿಗಿಂತ ಹಗುರವಾದ ಮತ್ತೊಂದು
ಹೊಸ ವಸ್ತುವಿನ ಆವಿಷ್ಕಾರವಾಗಿದೆಯಂತೆ
ಅದು ಕೆಲವರ ಮಾತಂತೆ
ಮಾತು ಗಾಳಿಗಿಂತ ಹಗುರ ಮಾಡುವುದು
ಅತಿ ಸುಲಭವಂತೆ || ೧ ||

ಆಡಿದ ಮಾತಿಗೆ  ಮಾಡುವ ಕೃತಿಗೆ
ಯಾವುದೇ ಸಂಬಂಧವಿಟ್ಟುಕೊಳ್ಳದೆ
ಆಡುವುದೊಂದು ಮಾಡುವುದೊಂದು
ಮಾಡಿ ಮಾಡಿ  ಮಾತನ್ನು
ಗಾಳಿಗಿಂತ ಹಗುರ
ಮಾಡಬಹುದಂತೆ || ೨ ||

ಇನ್ನೂ ಬಲುನೂಗಳಿಗೆ ಇದನೆ
ತುಂಬಿ ಹಾರಿ ಬಿಡುವ ಹೊಸ
ಬಲೂನು ಭಾಗ್ಯ  ಯೋಜನೆ
ಕೂಡ ಇದೆಯಂತೆ
ಆಸಕ್ತಿ ಇರುವವವರು ಕೂಡಲೇ
ನೋಂದಣೆ ಮಾಡಿಕೊಂಡು
ಭಾಗವಹಿಸಬೇಕಂತೆ || ೩ ||
ಬುಡ ಬುಡ್ಕಿ ಬಾಬಾ

Sunday, July 17, 2016

ಕವಿತೆ

ಅದೊಂದು ಸಂಜೆ ಆಕಾಶ
ಮೋಡಗಳು ಪಕ್ಷಿಗಳು
ಉದಯಿಸುತ್ತಿರುವ ಚಂದ್ರ
ಇವೆಲ್ಲವನು ಪದಗಳಲ್ಲಿ ಹಿಡಿದು
ಕವಿತೆ ಮಾಡಲು ತಿಣುಕುತ್ತಿದೆ
ಆದ ಕಂಡು ನಸು ನಕ್ಕು
ಆಕಾಶ ನುಡಿಯಿತು ಅಯ್ಯೋ
ಮಂಕೇ ಮೊದಲು ಮನ ತೆರೆದು
ನಮ್ಮನ್ನು ಕಂಡು ಆನಂದಿಸಿ
ಅನುಭವಿಸುವದನು ಕಲೆ
ಕವಿತೆ ತಾನಾಗೇ ಬರುತ್ತೆ

ಅವಿವಾಹಿತ ಪ್ರಶ್ನೆಗಳು

ಎಲ್ಲ ಪ್ರಶ್ನೆಗಳು
ಉತ್ತರವನ್ನು
ಮದುವೆಯಾಗಿ
ಸುಖವಾಗಿ
ಇದ್ದು
ಬಿಡಲು
ಇಚ್ಚಿಸುವದಿಲ್ಲ
ಕೆಲ ಪ್ರಶ್ನೆಗಳು
ಉತ್ತರವಿಲ್ಲದೆ
ಯಾವಾಗಲೂ
ಕಾಡುತ್ತಾ
ಏಕಾಂಗಿಯಾಗಿ
ಇದ್ದು
ಸ್ವಾರಸ್ಯವನ್ನು
ಕಾದು
ಕೊಂಡಿರುತ್ತವೆ
ಬುಡ ಬುಡ್ಕಿ ಬಾಬಾ

Friday, July 15, 2016

ಮಾಯಾಬಜಾರು

ಎಚ್ಚರಿಕೆ
ಮನಸೊಂದು
ಮಾಯಾಬಜಾರು
ಮಹಾ
ಮಾಯಾಬಜಾರು || ೧ ||

ಭೂತಕಾಲದ ನೆನಪುಗಳ
ತಿರುಚಿ
ಸಿಹಿ ನೆನಪನ್ನು ಕಹಿ
ಕಹಿ ನೆನಪನ್ನು ಸಿಹಿ
ಮಾಡುವುದು || ೨ ||

ಭವಿಷ್ಯದ ಬಗ್ಗೆ
ಹುಸಿಯಾದ
ಭರವಸೆಯಲ್ಲಿ ಭಯ
ಭಯದಲ್ಲಿ ಭರವಸೆ
ಬಿತ್ತುವುದು || ೩ ||

ಮರೆಯದಿರಿ
ಭೂತಕಾಲದ ಮಾಸಿದ
ನೆನಪುಗಳಲಿ ಸತ್ತ್ವವಿಲ್ಲ
ಭವಿಷ್ಯದ ಬಣ್ಣ ಬಣ್ಣದ
ಕನಸುಗಳಲಿ ಸತ್ಯವಿಲ್ಲ || ೪ ||

ಸತ್ತ್ವ ತುಂಬಿದ ಸತ್ಯ
ಈ ಕ್ಷಣವೊಂದೇ
ಈ ಉಸಿರೊಂದೇ
ಮತ್ತೆಲ್ಲ ಬರಿ
ಮಾಯಾ ಬಜಾರು
ಮಹಾ
ಮಾಯಾಬಜಾರು || ೫ ||
ಬುಡ ಬುಡ್ಕಿ ಬಾಬಾ

ಗುರುತೇ೦ಬ ಅಚ್ಚು

ಗುರುತೇ೦ಬುದಲ್ಲ
ಸರೋವರದಲ್ಲಿ
ನಿಂತ ನೀರು
ಅದು
ಅನಂತ ಸಮುದ್ರದತ್ತ
ಹರಿಯುವ ನದಿ || ೧ ||

ಗುರುತೇ೦ಬುದಲ್ಲ
ಆಳವಾಗಿ ಬೇರೂರಿ
ನಿಂತ ಮರ
ಅದು
ದಿಗಂತದತ್ತ ಮುಖಮಾಡಿ
ಹಾರುವ ಹಕ್ಕಿ || ೨ ||

ಅದೆಂತಹ ಮಾಯೆ
ಅದು
ತನ್ನ ಕೈಯಿಂದಲೇ
ರೂಪಿಸಿದ
ಗುರುತೇ೦ಬ  ಅಚ್ಚು
ಈಗ ಬಂಧಿಸಿದೆ ತನ್ನನ್ನೇ  || ೩ ||

ಬುಡ ಬುಡ್ಕಿ ಬಾಬಾ

Wednesday, July 13, 2016

ಶ್ರೀಮಂತಿಕೆ

ಶ್ರೀಮಂತಿಕೆ ಚೆನ್ನ
ಎರಡು ಮಾತಿಲ್ಲ
ಆದರೆ
ಶ್ರೀಮಂತಿಕೆ  ನಾವು
ಮಾಡಿಕೊಂಡ
ಹೊಂದಾಣಿಕೆಗಿಂತ
ಮಾಡಿದ
ಕೊಡುಗೆಯ
ಸಾಧನೆಯ
ಪ್ರತೀಕವಾದರೇ
ಇನ್ನೂ ಚೆನ್ನ
ಅಲ್ಲ್ವಾ?
ಬುಡ ಬುಡ್ಕಿ ಬಾಬಾ

ಬಾಹ್ಯಾಂತರ

ಮನುಜನ
ಬಾಹ್ಯಾಂತರದ
ಮೌಲ್ಯಗಳ
ಅಂತರ
ಹೆಚ್ಚಾದಂತೆ
ಘರ್ಷಣೆ  ಹೆಚ್ಚು
ಬಾಳ ಬಂಡಿಯಲಿ
ಪಯಣ ಕಠಿಣ
ಗುರಿ ತಲುಪುವುದು
ಅನಿಶ್ಚಿತ
ಹೇಗೋ ಮಾಡಿ
ಸುತ್ತಿ ಬಳಸಿ
ತಲುಪಿದರೂ
ಸೇರುವುದು
ತಪ್ಪು ಗುರಿ
ಮಾಡಿದೆಲ್ಲಾ
ಹೊಳೆಯಲ್ಲಿ
ಹುಣಸೆ ತೊಳೆದಂತೆ
ಬುಡ ಬುಡ್ಕಿ ಬಾಬಾ

Saturday, July 9, 2016

ಶಿಥಿಲತೆ

ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿದಾಗ
ಮೊದಲಾಗುವದು ಬೇಸರ
ಬೇಸರ ಹೆಚ್ಚಾದಾಗ ಬರುವುದು ಸಿಟ್ಟು
ಸಿಟ್ಟೆಲ್ಲ ಕೂಡಿ ಆಗುವದು ಜಗಳ
ಜಗಳವೇ ಜೀವನವಾದಾಗ ತುಂಬುವದು ಹೇಸಿಗೆ
ಹೇಸಿಗೆ ತರಿಸುವದು ಅನಾಸಕ್ತಿ
ಅನಾಸಕ್ತಿಯೇ ಸಂಭಂದದ ಶಿಥಿಲತೆಯ ಆರಂಭ

Saturday, July 2, 2016

ಆದರ್ಶ

ಆದರ್ಶ ವ್ಯಕ್ತಿಗಳನ್ನು
ಗೌರವಿಸುವದು
ಅವರ ಆದರ್ಶಕ್ಕಿಂತ
ಹೆಚ್ಚಾಗಿ ಅವರು
ಅವರಾಗಿ ಉಳಿದದಕ್ಕೆ || ೧ ||

ಅವರು ಅವರಾಗಿ
ಉಳಿಯದಿದ್ದರೆ
ನಾವು ನಾವಾಗುವುದಕ್ಕೆ
ಸ್ಪೂರ್ತಿ
ಸಿಗುತ್ತಿರಲಿಲ್ಲ || ೨ ||

ಗುಣ













ಗುಲಾಬಿ ಗಿಡದಲ್ಲಿ
ಮುಳ್ಳುಗಳೂ ಇವೆ
ಎಂದ ಮಾತ್ರಕ್ಕೆ
ಗುಲಾಬಿ ಹೂವನ್ನು
ಕಡೆಗಣಿಸಲಾರದು || ೧ ||

ಅವರಲ್ಲಿ
ಅವಗುಣಗಳೂ ಇವೆ
ಎಂದ ಮಾತ್ರಕ್ಕೆ
ಅವರ ಗುಣಗಳನ್ನು
ಕಡೆಗಣಿಸಲಾರದು || ೨ ||

ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...