Thursday, August 24, 2017

ಸವಾಲು

ಈ ಪಿಂಡಾಂಡವೇ
ಒಂದು ಬ್ರಹ್ಮಾಂಡ
ಒಪ್ಪುತ್ತೀರಲ್ಲವೇ ? || ೧ ||

ಬ್ರಹ್ಮಾಂಡದ ವಿಶಾಲತೆ ಇರುವಲ್ಲಿ
ಎಲ್ಲೋ ಒಂದು ಮೂಲೆಯಲ್ಲಿ
ಕತ್ತಲಿರುವುದೂ ಅಷ್ಟೇ ಸಹಜ
ಅಲ್ಲವೇ ? ||೨ ||

ಇರಲಿ ಆ ಕತ್ತಲಿನ ಬಗ್ಗೆ ಚಿಂತೆಯಿಲ್ಲ
ಸವಾಲಿರುವುದು ಆ ಕತ್ತಲು
ಮನಸು ಹಾಗೂ ಹೃದಯ
ಕಬಳಿಸದಂತೆ ತಡೆಯುವ
ವಿವೇಕ ಹಾಗೂ ಪ್ರೀತಿಯ
ಪ್ರಣತಿಯನು
ಬಾಳಿನ ಬಿರುಗಾಳಿಗಳಲಿ
ಆರದಂತೆ
ಕಾಪಾಡಿಕೊಳ್ಳುವುದು || ೩ ||
 ಬುಡ ಬುಡ್ಕಿ ಬಾಬಾ

ವ್ಯತ್ಯಾಸ

ಮುಖವಾಡಗಳನು
ಧರಿಸದ
ಮನುಜರೇ
ಇಲ್ಲವೇನೋ
ಈ ಜಗದಲಿ
ವ್ಯತ್ಯಾಸ ಇಷ್ಟೇ
ಕೆಲವರು ತಮ್ಮ
ಇತಿಮಿತಿಗಳನು
ಕುಗ್ಗಿಸಲು
ಧರಿಸಿದರೆ
ಇನ್ನುಳಿದವರು ತಮ್ಮ
ಅಹಂಕಾರ ಪ್ರತಿಷ್ಠೆಗಳನು
ಹಿಗ್ಗಿಸಲು
ಧರಿಸುವರು
 ಬುಡ ಬುಡ್ಕಿ ಬಾಬಾ

ಬೀಜ

ಕೆಲ ವಿಷಯಗಳೇ ಹಾಗೆ
ಬೀಜ ಮೊಳಕೆಯೊಡೆದಂತೆ
ಮನದೊಳಗಿಂದಲೇ ಸ್ಪುರಿಸಿ
ಹೊರಗೆ ಬರಬೇಕೆ
ಹೊರತು
ಹೊರಗಿಂದ ಎಷ್ಟು
ತಿಳಿಸಿದರೂ
ಮೊಳಕೆ  ಬೀಜದ ಒಳಗೆ
ಹೊರಗಿಂದ  ಹೇಗೆ
ಹಾಕಲಾಗದೋ ಹಾಗೆ
ಎಷ್ಟು ತಿಳಿಸಿದರೂ
ತಿಳಿ ಹೇಳಲಾಗುವುದಿಲ್ಲ
 ಬುಡ ಬುಡ್ಕಿ ಬಾಬಾ

Saturday, August 19, 2017

ಕಾಮನಬಿಲ್ಲು

ಕಪ್ಪು ಕಲ್ಲುಗಳ ಕಟ್ಟೆ
ಕೆಂಪು ಮಣ್ಣಿನ ಕಾಲ್ದಾರಿ
ಸುತ್ತ  ಗತ್ತಲ್ಲಿ
ಇದು ನಮ್ಮಪ್ಪನ ಮನೆ
ಎಂದು ಸಾರುವಂತೆ
ಗಟ್ಟಿ ಬೇರೂರಿ ನಿಂತ
ಹಸಿರು ದೊಡ್ಡ ಮರಗಳ ಸಾಲು
ಅವೆಲ್ಲವುಗಳ ನಡುವೆ
ಅದೆಷ್ಟೋ ವರ್ಷಗಳ
ನಿಶ್ಯಬ್ದತೆ
ಹಳೇ ನೋವು
ಹೊಸ ಮಳೆ
ಮತ್ತು
ಕಾಮನಬಿಲ್ಲು
 ಬುಡ ಬುಡ್ಕಿ ಬಾಬಾ

ಮಂಗಳೂರು ಹೆಂಚು

















ಆ ಸಂಜೆಯ ಮಾತೇ
ಬೇರೆ ಇತ್ತು
ಮನದಲ್ಲ್ಲಿ ಗುಲಾಬಿ
ಹೂವು ಅರಳಿತ್ತು
ಹೌದಪ್ಪಾ ಹೌದು
ಸರಿಯಾಗಿಯೇ ಕೇಳಿದೆ
ಮನದಲ್ಲಿ ಗುಲಾಬಿ
ಹೂವು ಅರಳಿತ್ತು
ಅದರ ಸುವಾಸನೆ
ಪರಿಮಳ ಸುತ್ತೆಲ್ಲಾ ಹರಡಿತ್ತು
ಆ ಸೌಂದರ್ಯ ಪರಿಮಳ
ಕಂಡು ಹಳೇ ಮಾಡಿಯ
ಕಪ್ಪಾದ ಮಂಗಳೂರು
ಹೆಂಚು ಕೂಡ ನಾಚಿ
ಮತ್ತೆ ಕೆಂಪಾಗಿತ್ತು
 ಬುಡ ಬುಡ್ಕಿ ಬಾಬಾ

Friday, August 18, 2017

ದೇವರಾಣೆ

ಕೆಲ ವಿಷಯಗಳೇ ಹಾಗೆ
ಅವುಗಳ ಬಗ್ಗೆ ವಿವರಿಸುವ
ಸಂದರ್ಭ ಬಾರದಂತೆ
ಸೂಕ್ಷ್ಮವಾಗಿ
ನೋಡಿಕೊಳ್ಳುವದೇ ವಾಸಿ
ಏಕೆಂದರೆ ಅವುಗಳನು
ವಿವರಿಸುವ ಸಂದರ್ಭ
ಸೃಷ್ಟಿ ಮಾಡಿ
ಏನು ಅರಿಯದ
ನಾವು ಎಷ್ಟೇ ಪ್ರಶ್ನೆ ಕೇಳಿದರೂ
ಅವುಗಳನು ಅನುಭವಿಸಿದವರು
ಎಷ್ಟೇ ವಿವರಿಸಿದರೂ
ಅವೆಂದು ದೇವರಾಣೆ
ನಮಗೆ ಅರ್ಥವಾಗುವುದಿಲ್ಲ
 ಬುಡ ಬುಡ್ಕಿ ಬಾಬಾ

Thursday, August 10, 2017

ಕವನಗಳಿದ್ದರೆ ಹತ್ತಿರ

ಕವನಗಳಿದ್ದರೆ
ಹತ್ತಿರ
ಯಾರಿಲ್ಲದಿದ್ದರೂ
ಒಂಟಿತನದ ಅನುಭವವಿಲ್ಲ  ||೧ ||

ಕವನಗಳಿದ್ದರೆ
ಹತ್ತಿರ
ಮನೋವ್ಯಾಧಿಗಳಿದ್ದರೂ
ಚಿಕಿತ್ಸಕ ಬೇಕಿಲ್ಲ || ೨ ||

ಕವನಗಳಿದ್ದರೆ
ಹತ್ತಿರ
ಗಾಯಗಳಿದ್ದರೂ
ಮುಲಾಮಿನ ಮುಲಾಜಿಲ್ಲ  || ೩ ||

ಕವನಗಳಿದ್ದರೆ
ಹತ್ತಿರ
ಮನನೊಂದಿದ್ದರೂ
ತನು ಭಾರವಾಗುವುದಿಲ್ಲ || ೪ ||

ಕವನಗಳಿದ್ದರೆ
ಹತ್ತಿರ
ಪ್ರೀತಿ ಸಿಗದಿದ್ದರೂ
ಹೃದಯ ಹೆಪ್ಪುಗಟ್ಟುವುದಿಲ್ಲ || ೫ ||
 ಬುಡ ಬುಡ್ಕಿ ಬಾಬಾ

ಬದನೆಕಾಯಿ ಹುಳಿ

ದೇವರು ದೇವರು ಎಂದು
ಪಾಠ ಪ್ರವಚನಗಳಿಗೆ ತಿರುಗಿ
ತೀರ್ಥ ಕ್ಷೇತ್ರಗಳ ಒಂದು
ಬಿಡದೆ ಅಲಿಯುವರ
ಕಂಡು ಕೇಳಿದೆ
ಇದೆಲ್ಲದರ ಮುಖ್ಯ ಗುರಿಯೇನು?
ಶಾಸ್ತ್ರಗಳ ಒಟ್ಟು ಭಾವವೇನು? || ೧ ||

ಆದ ಕೇಳಿ
ಕೇಳಿಯೂ ಕೇಳದಂತೆ
ಓಡಿದರು ಹತ್ತಿರದ ಗುಡಿಗೆ
ಸೇವೆಗೆ ತಡವಾಯ್ತು ಅನ್ನುತ್ತಾ || ೨ ||

ಮನದಲ್ಲೇ ಅಂದು ಕೊಂಡರು
ಹುಚ್ಚು ಇವನಿಗೆ
ಅದೆಲ್ಲ ತಕ್ಕೊಂಡು
ನಮಗೇನು ಮಾಡುವುದು
ಈ ಮಂಕು ಬುದ್ದಿಯಾತನಿಗೆ
ಏಕೆ ತಿಳಿಯುತಿಲ್ಲ
ಪರಿ ಪರಿಯಾಗಿ ಬೇಡಿ
ನಮಗೆ ಬೇಕಾದ್ದು
ಪಡೆಯುವದೆ ಮುಖ್ಯ ಗುರಿ
ಮತ್ತೆಲ್ಲ ಶಾಸ್ತ್ರ ಬರೀ ಬದನೆಕಾಯಿ || ೩ ||

ಹಾಳಾದ್ದು ಬದನೆಕಾಯಿ ನೆನಪಿಸಿದ
ಬಹು ದಿನವಾಯಿತು
ಇಂದೇ ಮಾಡಿ
ಹೊಡೆಯುವ ಘಮ ಘಮಿಸುವ
ಬದನೆಕಾಯಿ ಹುಳಿ || ೪ ||
 ಬುಡ ಬುಡ್ಕಿ ಬಾಬಾ

ಪಟ್ಟಿ

ದೇವರಿಗೆ ಭಕ್ತಿಯಿಂದ ಅವರು
ಮಾಡುವ ಸೇವೆಯ ಪಟ್ಟಿ
ನೋಡಿ ತಲೆ ತೂಗುತಿದ್ದೆ
ಅದೊಂದು ದಿನ ಅದರ
ಹಿಂದಿನ ಆಸೆಯ ಪಟ್ಟಿ
ನೋಡಿ ತಲೆ ತಿರುಗಿ ಬಿದ್ದೆ
 ಬುಡ ಬುಡ್ಕಿ ಬಾಬಾ

ಕಲಿಯುಗದ ಭಕ್ತರು

ಕೊಡುವರೆಂದು ತಿಳಿದರೆ
ಬಿಡರು ಯಾರನ್ನೂ ಈ ಭಕ್ತರು
ಭಕ್ತರು ಎಂದಷ್ಟೇ ಕರೆದರೆ
ತಪ್ಪಾದೀತು ಅತಿ
ವ್ಯವಹಾರ ಚತುರರು || ೧ ||

ಹುಡುಕಿ ಹುಡುಕಿ
ಮಾಡಿಸುವರು ಸೇವೆಗಳ
ಕೊಡುವರು ದಾನಗಳ
ಕೊಟ್ಟ ದಾನ
ಮಾಡಿಸಿದ  ಸೇವೆಗಳ
ಬಗ್ಗೆ ಅಲ್ಲಿಲ್ಲಿ ಮಾತಾಡಿ
ಇಟ್ಟುಕೊಳ್ಳುವರು ಸಾಕ್ಷಿ
ದೇವೆರಿಗೆಲ್ಲಾದರೂ ಮರೆತರೆ ಎಂದು || ೨ ||

ಸುತ್ತಿ ಸುತ್ತಿ ಪ್ರದಕ್ಷಿಣೆ ಹಾಕಿ
ಮನವರಿಕೆ ಮಾಡಿಸುವರು
ತಮ್ಮ ಬೇಡಿಕೆಗಳ
ಆದಷ್ಟು ಮುಂದೆ ಮುಂದೆ
ನುಗ್ಗಿ ಹೇಳುವರು ನೋಡು
ನಿನಗೆ ಮಾಡಿಸಿರುವೆ
ಆ ಸೇವೆ ಈ ದಾನ
ಮತ್ತೆ ಮುಂದೆ
ಅದನು ಮಾಡುವೆ
ಇದನು ಮಾಡುವೆ
ಎಂದು ಹೊರುವರು ಹರಿಕೆ  ಬೇರೆ || ೩ ||

ಎಲ್ಲಿ ನೋಡಿದರೂ ಬಿಡದೆ
ಕೈ ಮುಗಿದು ದೀಪ ಹಚ್ಚಿ
ಆರತಿ ಬೆಳಗಿ ಹೂ ಹಾಕಿ
ಹಾಡು ಹಾಡಿ ಉರುಳು ಸೇವೆ ಮಾಡಿ
ಬೇಡುವರು ಅದು ಇದು
ಬಿಡರು ಒಂದೇ ಒಂದು
ಕಾರಣವನು ಕೂಡ
ಆಗುವುದಿಲ್ಲ ಅನ್ನಲು || ೪ ||

ದೇವರು ಗುರುಗಳು
ಎಸೆದರೆ ಇಷ್ಟಾರ್ಥಗಳ
ಮರೆತು ಎಲ್ಲವನು
ಓಡುವರು ಅದರ
ಹಿಂದೆ ಕೆಲಕಾಲ
ಮತ್ತೆ ಹೊಸ ಆಸೆ
ಚಿಗುರುವವರೆಗೆ || ೫ ||

ಅರ್ಥವಾಗದು

ಹಾವುಗಳಿಗೆ  ಹೇಳಲಾಗದು
ವಿಷವೇನೆಂದು
ಹಾಲು ಎರೆದು ಎರೆದು || ೧ ||

ಎಷ್ಟೇ ಹಾಲೆರೆದರೂ
ಅವು ಅವಕಾಶ
ಸಿಕ್ಕಾಗ ಮತ್ತೆ ಮತ್ತೆ
ಕಾರುವುದು ವಿಷವನ್ನೇ || ೨ ||

ಹಾವಿನ  ಹೆಡೆ  ತಿರುವಿ
ಚೂಪಾದ ಬಟ್ಟಲಿನ ತುದಿಗೆ
ಒತ್ತಿ ಒತ್ತಿ
ಅದರ ಬಾಯಿಂದಲೇ
ಅದರ ವಿಷ  ಬಿಡಿಸಿ
ಅದರ ವಿಷವ
ಅದಕೆ ಕುಡಿಸಿದಾಗಲೇ
ಅದಕೆ ಅರ್ಥವಾಗಬಹುದೇನೋ
ವಿಷವೇನೆಂದು || ೩ ||
 ಬುಡ ಬುಡ್ಕಿ ಬಾಬಾ

ಕಿರುನಗೆ

ಅವನ ಕತೆ ಮುಗಿದಿತ್ತು
ಅಳುವರು ಅತ್ತಾಗಿತ್ತು
ನಗುವರು ನಕ್ಕಾಗಿತ್ತು
ಕೊನೆಯದಾಗಿ ಅವನಿಗೆ
ಸ್ವಗವೋ - ನರಕವೋ
ಎಂಬ ಲೆಕ್ಕಾಚಾರ ನಡೆದಿತ್ತು || ೧ ||

ಎಲ್ಲಿಲ್ಲದ ಕೂತೂಹಲದಿಂದ
ಕಾದು ಕುಳಿತಿದ್ದ ಆತ
ತಳ್ಳಿರಿ ನರಕಕ್ಕೆ ಎಂದು
ಚಿತ್ರಗುಪ್ತನ
ಘೋಷಣೆ ಆಗಿತ್ತು || ೨ ||

ಮನವೆಲ್ಲ ನಡುಗಿ
ಭಯವೇ ಆವರಿಸಿತ್ತು
ನರಕ ತಲುಪುವ
ಮೊದಲೇ ನರಕ
ಯಾತನೆ ಆಗಿತ್ತು || ೩ ||

ಆದರೇನು ಬಿಡದೆ
ದರ ದರನೆ ಎಳೆ
ತಂದು ಕತ ಕತನೆ
ಕುದಿಯುವ ಎಣ್ಣೆಯ
ಬಾಣಲಿಗೆ ಎಸೆದು
ಗಹ ಗಹಿಸಿ ನಕ್ಕರು  || ೪ ||

ತಕ್ಷಣವೇ ಮನೆ
ಬಂದು ತಲುಪಿದ
ಅನುಭವವಾಗಿ
ಯಮಭಟರಿಗೆ
ಕಾಣದಂತೆ ಆತ
ಕಿರುನಗೆ ನಕ್ಕಿದ್ದ || ೫ ||
 ಬುಡ ಬುಡ್ಕಿ ಬಾಬಾ

Wednesday, August 9, 2017

U ಟರ್ನ್ - 3

ನಿಶ್ಚಯಿಸಿದ್ದ ಸ್ವರ್ಗವೇ ನನ್ನ ಗುರಿ ಎಂದು
ಕಾಲ ಕಳೆದಂತೆ ಕನ್ನಡಿಯ ಮುಂದೆ ನಿಂತರೂ
ತನ್ನನೆ ತಾ ಕಾಣದಾಗಿದ್ದ
ಸದಾ ಅದೇನೋ ಭಯ
ಕಾರಣವಿಲ್ಲದ  ತಪ್ಪಿತಸ್ಥ ಭಾವನೆಯಿಂದ ಬಳಲಿದ್ದ
ಜೀವನವೇ ನರಕ ಮಾಡಿಕೊಂಡಿದ್ದ
ಅದೊಂದು ದಿನ ಸಾಕಿನ್ನು
ನರಕ ಇದಕಿಂತ ಕೆಟ್ಟದಿರದು ಅಂದುಕೊಂಡ
ಸ್ವರ್ಗದಿಂದ ನರಕಕ್ಕೆ ಗುರಿ ಬದಲಾಯಿಸಿಕೊಂಡ
ಆ ಕ್ಷಣವೇ ಕನ್ನಡಿಯಲಿ ತನ್ನ ತಾ ಕಂಡ
ತಾನಿರುವಲ್ಲೇ ಸ್ವರ್ಗ ಕೂಡ ಕಂಡುಕೊಂಡ

U ಟರ್ನ್ - 2

ಹುಟ್ಟಿದ್ದು ನರಕದಲ್ಲೇ ಆದರೂ
ಆಸೆಯಿತ್ತು ಹೋಗಬೇಕು ಸ್ವರ್ಗಕ್ಕೆ ಎಂದು
ಹೊರಟಿದ್ದ ಆತ  ನರಕದಿಂದ ಸ್ವರ್ಗದ ಕಡೆಗೆ
ಫುಲ್ ಸ್ಪೀಡು || ೧ ||

ದಾರಿ ಕಳೆದಂತೆ
ಕಗ್ಗತ್ತಲಿಂದ ಕಣ್ಣು ಕುಕ್ಕುವ ಬೆಳಕು
ದುರ್ವಾಸನೆ ಮಾಯವಾಗಿ ಎಲ್ಲಡೆ ಸುವಾಸನೆ
ಬಿರುಗಾಳಿ ದೂರ ಹೂಗಿ ಎಲ್ಲಡೆ ತಂಗಾಳಿ
ಬೆಂಕಿಯಂತ ಬಿಸಿಲಿಲ್ಲ ಹಿಮದಂತ ಚಳಿಯಿಲ್ಲ
ಎಲ್ಲಿ ನೋಡಿದರೂ ಸೌಂದರ್ಯ ಸಮೃದ್ಧಿ
ಕಲ್ಲು ಮುಳ್ಳುಗಳೇ ಇಲ್ಲದ ರೇಶಿಮೆಯಂತ ಹೆದ್ದಾರಿ  || ೨ ||

ತಾಳಲಾಗದೆ ಹೊಡೆದ ಗಕ್ಕನೆ ಬ್ರೆಕ್ಕು
ದಾಟಿಸಿ ಡಿವೈಡರು ಹೊಡೆದ U ಟರ್ನ್
ಹಿಂದೆ ನೋಡದೆ ಓಡಿಸಿದ ಮತ್ತದೇ
ಫುಲ್ ಸ್ಪೀಡು || ೩ ||

U ಟರ್ನ್ - 1

ನಲ್ಲೇ ನೀ ಸ್ವರ್ಗಕ್ಕೆ ಹೋಗುವದಾದರೆ ಹೇಳು
ನಾ ಹೋಗುವೆ ನರಕಕ್ಕೆ
ಅದೇಕೆ ನಲ್ಲ ಎಂದು ಕೇಳಿದಳು ನಲ್ಲೇ
ನಲ್ಲನೆಂದ ನೀ ಇರದ ನರಕವು ಸ್ವರ್ಗದಂತೆಯೇ
ನಲ್ಲೇ ಅಂದುಕೊಳ್ಳಲು ಓ ಅದು ಹೀಗೊ
ನಲ್ಲ ಅಂದುಕೊಂಡ ಅದೇನೋ ಮಾಡಲಪ್ಪ
ನಾ ಹೋಗಿ ಸ್ವರ್ಗಕ್ಕೆ ಅಲ್ಲಾರೂ ಇರರೂ
ನನ್ನ ಗೆಳೆಯ ಸಂಬಂಧಿಕರು

 ಬುಡ ಬುಡ್ಕಿ ಬಾಬಾ

Thursday, August 3, 2017

ಭಯ

ಕಾಲವೊಂದಿತ್ತು
ಪ್ರತಿ ಚಿಕ್ಕ ಪುಟ್ಟ
ಕಾರಣಗಳ ಬಗ್ಗೆಯೂ
ಭಯ ಮೂಡುತಿತ್ತು || ೧ ||

ಭಯದ ನೆರಳಿಂದ
ಯಾವಾಗ
ಮುಕ್ತಿ ಎಂಬ
ಚಡಪಡಿಕೆ ಇರುತಿತ್ತು || ೨ ||

ಭಯದ ಕುಲುಮೆಯಲಿ
ಬೆಂದು ಬೆಂದು
ಅದೊಂದು ದಿನ
ಭಯ ಕಾಣೆಯಾಗಿತ್ತು || ೩ ||

ಭಯಂಕರ
ಭಯಪಡುವ
ಕಾರಣ ಕ೦ಡಾಗೂ
ಭಯ ಬರುತಿರಲಿಲ್ಲ || ೪ ||

ಇತ್ತೀಚೆಗೆಕೋ ಕಾಡುತಿದೆ
ಬಲು ವಿಚಿತ್ರ  ಭಯ
ಭಯವೇಕೆ
ಬರುತಿಲ್ಲ ಎಂದು || ೫ ||

ಹುಚ್ಚು ಕನಸು

ಕಾಲವೊಂದಿತ್ತು
ಜೇವನವೇನೆಂದು
ತಿಳಿದಿರಲಿಲ್ಲ
ತಿಳಿದಿಲ್ಲವೆಂದು
ತಿಳಿದಿರಲಿಲ್ಲ ||೧ ||

ಕಾಡು ಕುದರೆಯಂತ
ಚಂಚಲ ಮನಸಿತ್ತು
ಮನ ಬಂದತ್ತ
ಹಿಂದು ಮುಂದು
ಯೋಚಿಸದೇ
ಓಡುತಿತ್ತು || ೨ ||

ಓಡುತ್ತಾ ಓಡುತ್ತಾ
ಎಡವಿದರೂ
ಬೀಳದೆ ಹಾರುವ
ಹುಚ್ಚು  ಕನಸು
ಕಾಣುತಿತ್ತು   || ೩ ||

Wednesday, August 2, 2017

ಕಣ್ಮರೆ

ಯಾರ ಕಣ್ಣಿಗೂ ಬಿದ್ದಿರದ
ಕಡು ನೀಲಿ ಬಣ್ಣದ ತೀರದಾಚೇ
ಯಾವ ಕಣ್ಣಿಗೂ ಕಾಣದ
ಕಡುಕಪ್ಪು ಬಂಡೆಯ ಮೇಲೆ
ಕುಳಿತು ಹಾಡುತಿದ್ದ ಹಕ್ಕಿ
ಜೀವನದ ಅಗಾಧತೆ
ಆ ಕ್ಷಣದ ಚಂಚಲತೆ
ಒಟ್ಟಿಗೆ ತೋರಿ
ಕಣ್ಮರೆಯಾಯಿತು

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...