Saturday, January 9, 2016

ಹುಚ್ಚ ಮನುಜ - (ಅನುವಾದ: MAD MAN - Kahlil Gibran)

ಗಾಢ ನಿದ್ದೆಯಿಂದ
ಎದ್ದಾಗ ಕಂಡೆ
ಕಳುವಾಗಿತ್ತು
ನನ್ನ ಮುಖವಾಡಗಳೆಲ್ಲಾ
ಓಡಿದೆ ಕಿರುಚುತ್ತಾ
ಕಳ್ಳರು ಕಳ್ಳರು
ಶಾಪಿತ ಕಳ್ಳರು


ನೋಡಿ ನಕ್ಕವರು
ಕೆಲವರು
ಓಡಿ ಮನೆ
ಬಾಗಿಲು ಹಾಕಿ
ಕೊಂಡವರು
ಹಲವರು

ತಲುಪಿದಾಗ
ಮಾರುಕಟ್ಟೆಯ ಓಣಿ
ಮಹಡಿ ಮೇಲೆ ನಿಂತ
ಯುವಕನೊಬ್ಬ ಕೂಗಿದ
ಆಗೋ ನೋಡಿ
"ಹುಚ್ಚ ಮನುಜ"

ಅವನ ಕಾಣಲು
ಮೇಲೆ ನೋಡಿದಾಗ
ಚುಂಬಿಸಿತು ಸೂರ್ಯನ
ಕಿರಣ ಮೊದಲ ಬಾರಿ
ನನ್ನ ನಗ್ನ ಮುಖವನ್ನು
ಬೆಳಗಿತು ನನ್ನಾತ್ಮ
ಸೂರ್ಯನ ಪ್ರೀತಿಯಿಂದ
ಬೇಕಿರಲಿಲ್ಲ ನನಗೆ
ಮುಖವಾಡಗಳಿನ್ನೂ


ಭಾವಪರವಶೆಯಲಿ
ಮುಳುಗಿದವನಂತೆ
ಅತ್ತು ನಾನಂದೆ
ನನ್ನ ಮುಖವಾಡ
ಕದ್ದ ಕಳ್ಳರೇ
ಪೂಜ್ಯರು

ಅಂದಿನಿಂದ ನಾನಾದೆ
"ಹುಚ್ಚ ಮನುಜ"
ದೊರಕಿತು ನನಗೆ
ಏಕಾಂತದ ಸ್ವಾತಂತ್ರ
ಹಾಗೂ
ಬೇರೆಯವರಿಗೆ
ಅರ್ಥವಾಗುವ
ಬವಣೆಯಿಂದ
ಸುರಕ್ಷತೆ

ಈ ಸುರಕ್ಷತೆಯ
ಬಗ್ಗೆ ಅಭಿಮಾನ
ಪಡದಿರುವದೇ
ವಾಸಿ ಏಕೆಂದರೆ
ಸೆರೆಮನೆಯಲ್ಲಿ ಒಬ್ಬ
ಕಳ್ಳ ಕೂಡ ಇನ್ನೊಬ್ಬ
ಕಳ್ಳನಿಂದ ಸುರಕ್ಷಿತ

- ಆನಂದ (ಅನುವಾದ)

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...