Saturday, March 26, 2016

ನಾ ಕಾಣೆಯಾಗಿದ್ದೆ

ಪ್ರವಾಸಿಗರು ತಾವು ಮಾಡಿದ ಪ್ರವಾಸದ ನೆನೆಪಿಗಾಗಿ ಕೆಲಬಾರಿ
ಇಷ್ಟವೋ ಬಲವಂತವೂ ವಸ್ತುವೊಂದನ್ನು ಒಯ್ದು ಮನೆಯ ಅಲಂಕರಿಸುವಂತೆ
ಜೀವನದ ಪಯಣದಲಿ ಅಲ್ಲಿ ಇಲ್ಲಿ ಕಂಡು ಅನಿವಾರ್ಯಕ್ಕೋ ಎಲ್ಲರೂ ಮಾಡುತ್ತಾರೆ
ನಾನು ಮಾಡಬೇಕೆಂಬ ಮಂಕಿಗೂ ಮಾಡಿಕೊಂಡಿದ್ದೆ ಬಣ್ಣ ಮುಖವಾಡಗಳ ಅಲಂಕಾರ
ಮೊದಲೇನೋ ಚೆನ್ನ ಅನಿಸಿದರೂ ಬರು ಬರುತ್ತಾ ಕ್ಲೀಷೆಯಾಗಿತ್ತು ಈ ಅಲಂಕಾರ || ೧ ||

ಬಳಸಿ ಬಳಸಿ ಮೂಲಾರ್ಥ ಕಳೆದುಕೊಂಡ ನುಡಿಗಟ್ಟ ಅಂತಾಗಿತ್ತು ಈ ಅಲಂಕಾರ
ಮನ ಆಗಾಗ ಹೊಯ್ದುಕೊಳ್ಳುತಿತ್ತು ತೋರು ನನಗೆ ನಿನ್ನ ನಿಜ ರೂಪ
ಅಯ್ಯೋ ಸುಡ್ಲಿ ಈ ಮನವ ಬಹು ದಿನದಿಂದ ಕಾಡುತಿದೆಯಲ್ಲ ತೋರಿಯೇ
ಬಿಡೋಣ ನಿಜ ರೂಪ ಆದರೆ ಅನಿಸಿತು ಒಪ್ಪಲಾರದೇನೋ ಈ ಸಮಾಜ
ಅಲಂಕಾರಗಳಿಲ್ಲದೆ ನನ್ನನ್ನು ಅದಕೆ ಆರಿಸಿದೆ ಜನರಿಲ್ಲದ ಕಾಡನೊಂದು || ೨ ||

ಓಡಿದೆ ಗಾಳಿಗೆ ಪೈಪೋಟಿ ನೀಡುವ ವೇಗದಲಿ ಕಳಚಿದವು ಕೆಲ ಅಲಂಕಾರ ಆ ವೇಗಕ್ಕೆ
ಊರುಳಿದೆ ಬೆಟ್ಟದ ಮೇಲಿಂದ ಕೆಳಗೆ ಬಿದ್ದು ಹೋದವು ಇನ್ನೊಂದಿಷ್ಟು ಅಲಂಕಾರಗಳು
ಹಾವಿನ ಪೊರೆ ಕಳಚಿದಂತೆ ಕಳಚಿದೆ ಚರ್ಮಕ್ಕೆ ಅಂಟಿದ ಅಲಂಕಾರಗಳ ಚೂಪಾದ ಕಲ್ಲಿಗೆ ತಿಕ್ಕಿ
ಹರಿಯುವ ನದಿಯಲ್ಲಿ ಧುಮುಕಿ ಊಜ್ಜಿ ಊಜ್ಜಿ ಶುಬ್ರಗೊಳಿಸಿದೆ ಅಳಿದುಳಿದ ಕಲೆಗಳನ್ನು
ಉರಿ ಬಿಸಿಲ್ಲಲ್ಲಿ ನಿಂತು ಒಣಗಿಸಿದೆ ನನ್ನನ್ನು ನಾನು ಒಂದು ಹನಿ ಉಳಿಯದಂತೆ || ೩ ||

ಎದೆಬಡಿತ ಹೆಚ್ಚಿತ್ತು ಮನವು ನಿಜ ರೂಪ ಕಾಣುವ ಖುಷಿಗೆ ಹಳೇ ಹಾಡು ಗುನುಗಿತ್ತು
ಹೊಸ ಮಗುವ ಸ್ವಾಗತಿಸುವಂತ  ಸಂಭ್ರಮ ಮೈಮನ ತುಂಬಿತ್ತು ಹುಮ್ಮಸ್ಸು ಚಿಮ್ಮಿತ್ತು
ಕಾಲುಗಳೇ ಗಾಲಿಯಾಗಿ ವೇಗದಿ ಓಡಿ ನಿಂತೆ ಕೋಣೆಯ ಮೂಲೆಯ ಕನ್ನಡಿಯ ಮುಂದೆ
ಕಾಣಲೇ ಇಲ್ಲ ಯಾರೂ ಒಂದು ಕ್ಷಣ ತಬ್ಬಿಬ್ಬಾಗಿ ಶೋಧಿಸಿದೆ ವಿವಿಧ ಕೋನಗಳಿಂದ
ಊಹೂ೦ ಕಾಣುತಿಲ್ಲ ಯಾರೂ ಹೇಗೆ ನೋಡಿದರೂ, ನಾ ಕಾಣೆಯಾಗಿದ್ದೆ, ಎಂದೊ || ೪ ||

ಬುಡ ಬುಡ್ಕಿ ಬಾಬಾ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...