Monday, May 2, 2016

ಕೆಲಸವೆಂದರೇನು ? (ಅನುವಾದ: ON WORK - Kahlil Gibran)

ಕೆಲಸ ಮಾಡುವುದು ಎಂದರೆ
ಭೂಮಿಯ ಹಾಗೂ ಭೂಮಿಯ ಆತ್ಮದ
ಜೊತೆ ಜೊತೆಗೆ ಹೆಜ್ಜೆ ಹಾಕಿದಂತೆ || ೧ ||

ಕೆಲಸ ಮಾಡದಿರುವುದು ೠತುಗಳಿಗೆ ಅಪರಿಚಿತನಾದಂತೆ
ಭವ್ಯ ಜೀವನದ ಮೆರವಣಿಗೆಯಿಂದ ಹೊರಗೆ ಬಂದಂತೆ
ಹೆಮ್ಮೆಯಿಂದ ಆ ಅನಂತಕ್ಕೆ ತಲೆ ಬಾಗುವ ಅವಕಾಶವಂಚಿತನಾದಂತೆ || ೨ ||

ಕೆಲಸ ಮಾಡಿದಾಗ ನೀನೊಂದು ಕೊಳಲಂತೆ
ಆ ಕೊಳಲ ಹೃದಯದಲಿ ಸಮಯದ ಎದೆಬಡಿತ
ಮಧುರ ಸಂಗೀತವಾಗಿ ಹೊರ ಹೊಮ್ಮುವುದು || ೩ ||

ನೀ ಕೇಳಿದಂತೆ  ಕೆಲಸ ಶಾಪವಲ್ಲ ಕೆಲಸ ದುರಾದೃಷ್ಟವಲ್ಲ
ನೀ ಕೆಲಸ ಮಾಡಿದಾಗ ಭೂಮಿ ಕಂಡ ಕನಸನ್ನು ನನಸು ಮಾಡಿದಂತೆ
ಆ ಕನಸಿನ ಹುಟ್ಟಿನಲಿ ನಿನಗೆ ಕೊಟ್ಟ ಪಾತ್ರವನ್ನು ನೀ ನೆರವೇರಿಸಿದಂತೆ || ೪ ||

ಕೆಲಸದ ಶ್ರಮವು ಕೊಂಡೊಯ್ಯುವುದು ನಿನ್ನ
ಸತ್ಯ ಪ್ರೀತಿಸುವ ಜೀವನಕೆ ಸಮೀಪ ಆ ಸಾಮಿಪ್ಯವೇ
ಜೀವನದ ಆಳದಲಿ ಹುದುಗಿರುವ ರಹಸ್ಯಕ್ಕೆ ದಾರಿಯಂತೆ || ೫ ||

ನೀ ನಿನ್ನ ನೋವಲ್ಲಿ ಹುಟ್ಟೂ೦ದು ಹಿಂಸೆಯೆಂದುಕೊಂಡಿದ್ದರೆ
ಹೊಟ್ಟೆಪಾಡನ್ನು ನಿನ್ನ ಹಣೆ ಬರಹದಲಿ ಬರೆದ ಶಾಪವೆಂದುಕೊಂಡಿದ್ದರೆ
ಅದಕೆ ನಾ ಹೇಳುವ ಉತ್ತರ ಅಲ್ಲ ಅದು ಹಾಗಲ್ಲ
ಶ್ರಮದಿಂದ ಹರಿದ ಬೆವರ ಹನಿ ಆಳಿಸುವದು ಬರೆದ ಹಣೆ ಬರಹವನ್ನು  || ೬ ||

ನೀ ಕೇಳಿರಬಹುದು ಜೀವನವೊಂದು ಕಗ್ಗತ್ತಲೆ ಎಂದು
ನಿನ್ನ ಬಳಲಿಕೆಯ ಕ್ಷಣದಲಿ ನೀನು ಅದನೇ ಪ್ರತಿಧ್ವನಿಸಿರಬಹುದು
ಆದರದು ಅಸಹನೆಯಿಂದ ಹೇಳಿದ ಮಾತಷ್ಟೇ || ೭ ||

ಜೀವನವಾಗುವುದು ಕಗ್ಗತ್ತಲೆ ಪ್ರೇರಣೆಯಿಲ್ಲದಿರುವಾಗ
ಪ್ರೇರಣೆಯಾಗುವುದು ಕುರುಡು ಜ್ಞಾನವಿಲ್ಲದಿರುವಾಗ
ಜ್ಞಾನವೆಲ್ಲಾ ವ್ಯರ್ಥ ಕೆಲಸವಿಲ್ಲದಿರುವಾಗ
ಕೆಲಸವೆಲ್ಲಾ ಟೊಳ್ಳು ಪ್ರೀತಿಯಿಲ್ಲದಿರುವಾಗ
ಪ್ರೀತಿಯಿಂದ ಕೆಲಸ ಮಾಡುವುದೆಂದರೇನು? || ೮ ||

ನಿನ್ನ ಪ್ರೀತಿ ಪಾತ್ರರು ನೀ ನೇಯ್ದ ಬಟ್ಟೆ ಧರಿಸುವರೇನೋ ಎಂಬಂತೆ
ಹೃದಯದಿಂದ ತಗೆದ ನೂಲಿನಿಂದ ಬಟ್ಟೆ ನೇಯ್ದಂತೆ || ೯ ||

ನಿನ್ನ ಅಚ್ಚು ಮೆಚ್ಚಿನವರು ನೀ ಕಟ್ಟಿದ ಮನೆಯಲಿಇರುವರೇನೋ ಎಂಬಂತೆ
ಅಕ್ಕರೆಯಿಂದ ಮನೆ ಕಟ್ಟಿದಂತೆ || ೧೦ ||

ನಿನ್ನ ಒಲವು ಗೆದ್ದವರು ಆ ಹಣ್ಣು ತಿನ್ನುವರೇನೋ ಎಂಬಂತೆ
ಮೃದುವಾಗಿ ಬೀಜ ಬಿತ್ತಿ ಖುಷಿಯಾಗಿ ಸುಗ್ಗಿ ಮಾಡಿದಂತೆ || ೧೧ ||

ನಿನ್ನ ಪೂರ್ವಜರೆಲ್ಲ ಸಾವಿನಿಂದ ಎದ್ದು ನಿನ್ನನ್ನೇ ನೋಡುತಿರುವರೇನೋ ಎಂಬ ಅರಿವಿನಲ್ಲಿ
ನೀ ರೂಪಿಸುವ ಪ್ರತಿ ವಸ್ತುವಿನಲಿ ನಿನ್ನ ಚೇತನದ ಉಸಿರು ತುಂಬಿದಂತೆ || ೧೨ ||

ಮೇಲಿಂದ ಮೇಲೆ ಕೇಳಿದ್ದೇನೆ ನಿದ್ದೆಯಲಿ ಬಡಬಡಿಸಿದಂತೆ ಹೇಳಿದುದನು
ಅಮೃತ ಶಿಲೆಯನು ಕಡಿದು ತನ್ನ ಆತ್ಮವನೆ ಆ ಶಿಲೆಯಲಿ ಕಂಡವನು
ಭೂಮಿ ಉಳುವನಿಗಿಂತ ಶ್ರೇಷ್ಠನೆಂದು
ಕಾಮನ ಬಿಲ್ಲನ್ನು ಹಿಡಿದು ಬಟ್ಟೆಯ ಮೇಲೆ ಮೂಡಿಸಿ ಮೆಚ್ಚುಗೆ ಪಡೆದವನು
ಕಾಲಿಗೆ ಚಪ್ಪಲಿ ಹೊಲಿಯುವನಿಗಿಂತ ಶ್ರೇಷ್ಠನೆಂದು
ಆದರೆ ಕೇಳಿ ನಾನು ಹೇಳುತ್ತಿಲ್ಲ ಮಂಪರಿನಲಿ ಸಂಪೂರ್ಣ ಜಾಗರೂಕನಾಗಿ ಹೇಳುತಿದ್ದೇನೆ
ಬೀಸುವ ಗಾಳಿಯ ಸವಿ ಆಲದ ಮರಕೊಂದು ಹುಲ್ಲಿನ ಕಡ್ಡಿಗೊಂದು ಅಲ್ಲ
ಶ್ರೇಷ್ಠ ಅವನೊಬ್ಬನೇ ಯಾರು ಬೀಸುವ ಗಾಳಿಯ ಶಬ್ದವನ್ನು ಕೂಡ
ತನ್ನ ಪ್ರೀತಿಯಿಂದ ಸವಿ ಸಂಗೀತವಾಗಿ ಮಾಡುವನೋ ಅವನು ಮಾತ್ರ || ೧೩ ||

ಕೆಲಸ ಪ್ರೀತಿಯ ವ್ಯಕ್ತ ರೂಪದಂತೆ
ನೀ ಪ್ರೀತಿಯಿಂದ ಕೆಲಸ ಮಾಡಲಾಗದೆ ಬರಿ ಜಿಗುಪ್ಸೇಯಿಂದ ಕೆಲಸ ಮಾಡುವ ಬದಲು
ಯಾವೋದೊ ಗುಡಿಯ ಮುಂದೆ ಕುಳಿತು ಆನಂದದಿಂದ ಕೆಲಸ ಮಾಡಿದವರ ಮುಂದೆ
ತಿರುಪೆ ಎತ್ತುವುದು ಎಷ್ಟೋ ವಾಸಿ || ೧೪ ||

ಏಕೆಂದರೆ ನೀ ಅಸಡ್ಡೆಯಿಂದ ಅನ್ನ ಬೇಯಿಸಿದರೆ ಆ ಕಹಿ ಅನ್ನ
ಹಸಿದವನು ಉಂಡರೂ ತುಂಬುವದೋ ಮಾತ್ರ ಅರೆ ಹೊಟ್ಟೆ || ೧೫ ||

ಏಕೆಂದರೆ ನೀ ದ್ವೇಷದಿಂದ ದ್ರಾಕ್ಷಿಗಳ ತುಳಿದರೆ ಆ ದ್ವೇಷ ವಿಷವಾಗಿ
ಬಟ್ಟಿ ಇಳಿಯುವದು ಸೋಸಿದ ದ್ರಾಕ್ಷಾ ರಸದಲಿ || ೧೬ ||

ಏಕೆಂದರೆ ನೀ ಗಂಧರ್ವರಂತೆ ಹಾಡಿದರೂ ಕೂಡ ಆ ಹಾಡಿನ ಬಗ್ಗೆ ಪ್ರೀತಿಯಿಲ್ಲದಿದ್ದರೆ
ಕೇಳುಗರ ಕಿವಿಗೆ ದಿನ ರಾತ್ರಿಯ ಸಂಗೀತದ ಧನಿ ಅಡಗಿಸಿದಂತೆ || ೧೭ ||

ಬುಡ ಬುಡ್ಕಿ ಬಾಬಾ

Source: http://www.katsandogz.com/onwork.html

2 comments:

  1. ಖಲೀಲ್ ಗಿಬ್ರಾನರ ಸತ್ವಯುತ ಕವಿತೆಯನ್ನು ಕನ್ನಡದಲ್ಲಿ ಅಷ್ಟೇ ಸೊಗಸಿನಲ್ಲಿ ಕೊಟ್ಟಿದ್ದೀರಿ. ಅಭಿನಂದನೆಗಳು.

    ReplyDelete
  2. ಸರ್ ಧನ್ಯವಾದಗಳು.. ತಮ್ಮ ಪ್ರೋತ್ಸಾಹವೇ ಬಲ.

    ReplyDelete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...