Tuesday, February 14, 2017

ಸತ್ಯ ಸುಳ್ಳು ಅರ್ಧ ಸತ್ಯ

ಸತ್ಯ ಸುಳ್ಳು ಅರ್ಧ ಸತ್ಯದ
ನಡುವೆ ಏರ್ಪಡಿಸಿದ್ದರಂತೆ
ಓಟದ ಸ್ಪರ್ಧೆಯೊಂದನ್ನು || ೧ ||

ಸತ್ಯ ಆಟದ ಬಗ್ಗೆಯ ಶ್ರದ್ಧೆಯಿಂದ
ಪೂರ್ಣ ಬಲ ಪ್ರಯೋಗಿಸಿ
ಓಡಿತಂತೆ ಕೊನೆ ಗೆರೆಯವರೆಗೆ
ಸುಳ್ಳು ಓಡುವುದೆಲ್ಲ ಬಿಟ್ಟು
ನೆರೆದವರಿಗೆ ಹಂಚಿತಂತೆ
ಸವಿಯನ್ನು ತಾನೇ ಗೆದ್ದಿರುವಂತೆ
ಅರ್ಧ ಸತ್ಯ ಓಟದ
ನಿಯಮಗಳ  ಅಸ್ಪಷ್ಟತೆಯ
ದುರ್ಬಳಕೆ ಮಾಡಿ ಓಡಿ
ದಾಟಿತಂತೆ ಕೊನೆ ಗೆರೆ
ಸತ್ಯಕಿಂತ ಮೊದಲು || ೨ ||


ಸತ್ಯ ಸಾತ್ವಿಕ ಸಿಟ್ಟಿನಿಂದ ಹೇಳಿತಂತೆ
ಸುಳ್ಳು ಓಡದೆಯೆ ಗೆದ್ದೇ ಎಂದು ಬೀಗುತಿದೆ
ಅರ್ಧ ಸತ್ಯ ನಿಯಮಗಳ ಮುರಿದರೂ
ಕಾಣದಂತೆ  ದುರ್ಬಳಕೆ ಮಾಡಿದೆ
ಎಂದು ಸಾರಿ ಸಾರಿ
ಆದರೇನು ಸುಳ್ಳಿನ ಸವಿಯುಂಡ
ಜನರಿಗೆ ರುಚಿಸಲಿಲ್ಲವಂತೆ ಸತ್ಯದ ಕಹಿ || ೩ ||

ಸುಳ್ಳಿಗೇಕೋ ತನ್ನ ಗೆಲುವು ಅನುಮಾನವಾಗಿ ಕಂಡು
ಸತ್ಯದ ತಲೆಯ ಮೇಲೆ ಹೊಡೆಯಲು
ಅರ್ಧ ಸತ್ಯದ ಕಡೆಗೆ ನೋಡಿತಂತೆ
ಅದ ಕಂಡ ಅರ್ಧ ಸತ್ಯದ ಬಲ ಹೆಚ್ಚಿ
ಬಲು ಗಂಭೀರವಾಗಿ ನುಡಿಯಿತಂತೆ
ಸುಳ್ಳು ಓಡದಿದ್ದನ್ನು ನಾ ನೋಡಿಲ್ಲ
ಸತ್ಯ ಕೊನೆ ಗೆರೆ ದಾಟಿದ್ದನ್ನು ನಾ ನೋಡಿಲ್ಲ
ನಾ ಕೊನೆ ಗೆರೆ ದಾಟಿದ್ದು ಮಾತ್ರ ಸತ್ಯ || ೪ ||

ಇದ  ಕೇಳಿದ ಜನ ಅಂದರಂತೆ
ಸತ್ಯಕ್ಕೆ ನೋಡಿ ಕಲಿ ಇದು ಸಭ್ಯತೆ
ಅರ್ಧ ಸತ್ಯಕ್ಕೆ ಮೊದಲ ಸ್ಥಾನ
ಸುಳ್ಳಿಗೆ ಎರಡನೆಯ ಸ್ಥಾನ
ಸತ್ಯದ ಅಸಭ್ಯ ನಡತೆಗೆ
ಅದನು ಸ್ಪರ್ಧೆಯಿಂದ
ವಜಾಗೊಳಿಸುವ ಸಜೆಯಂತೆ
ಅದ ಕಂಡ ಅರ್ಧ ಸತ್ಯ ಸುಳ್ಳಿನ
ಕೈ ಕುಲುಕಿ ಕಣ್ಣು ಮೀಟಿಸಿದ್ದು
ಮಾತ್ರ ಯಾರಿಗೂ ಕಾಣಲಿಲ್ಲವಂತೆ  || ೫ ||
ಬುಡ ಬುಡ್ಕಿ ಬಾಬಾ


No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...