Thursday, August 10, 2017

ಕಲಿಯುಗದ ಭಕ್ತರು

ಕೊಡುವರೆಂದು ತಿಳಿದರೆ
ಬಿಡರು ಯಾರನ್ನೂ ಈ ಭಕ್ತರು
ಭಕ್ತರು ಎಂದಷ್ಟೇ ಕರೆದರೆ
ತಪ್ಪಾದೀತು ಅತಿ
ವ್ಯವಹಾರ ಚತುರರು || ೧ ||

ಹುಡುಕಿ ಹುಡುಕಿ
ಮಾಡಿಸುವರು ಸೇವೆಗಳ
ಕೊಡುವರು ದಾನಗಳ
ಕೊಟ್ಟ ದಾನ
ಮಾಡಿಸಿದ  ಸೇವೆಗಳ
ಬಗ್ಗೆ ಅಲ್ಲಿಲ್ಲಿ ಮಾತಾಡಿ
ಇಟ್ಟುಕೊಳ್ಳುವರು ಸಾಕ್ಷಿ
ದೇವೆರಿಗೆಲ್ಲಾದರೂ ಮರೆತರೆ ಎಂದು || ೨ ||

ಸುತ್ತಿ ಸುತ್ತಿ ಪ್ರದಕ್ಷಿಣೆ ಹಾಕಿ
ಮನವರಿಕೆ ಮಾಡಿಸುವರು
ತಮ್ಮ ಬೇಡಿಕೆಗಳ
ಆದಷ್ಟು ಮುಂದೆ ಮುಂದೆ
ನುಗ್ಗಿ ಹೇಳುವರು ನೋಡು
ನಿನಗೆ ಮಾಡಿಸಿರುವೆ
ಆ ಸೇವೆ ಈ ದಾನ
ಮತ್ತೆ ಮುಂದೆ
ಅದನು ಮಾಡುವೆ
ಇದನು ಮಾಡುವೆ
ಎಂದು ಹೊರುವರು ಹರಿಕೆ  ಬೇರೆ || ೩ ||

ಎಲ್ಲಿ ನೋಡಿದರೂ ಬಿಡದೆ
ಕೈ ಮುಗಿದು ದೀಪ ಹಚ್ಚಿ
ಆರತಿ ಬೆಳಗಿ ಹೂ ಹಾಕಿ
ಹಾಡು ಹಾಡಿ ಉರುಳು ಸೇವೆ ಮಾಡಿ
ಬೇಡುವರು ಅದು ಇದು
ಬಿಡರು ಒಂದೇ ಒಂದು
ಕಾರಣವನು ಕೂಡ
ಆಗುವುದಿಲ್ಲ ಅನ್ನಲು || ೪ ||

ದೇವರು ಗುರುಗಳು
ಎಸೆದರೆ ಇಷ್ಟಾರ್ಥಗಳ
ಮರೆತು ಎಲ್ಲವನು
ಓಡುವರು ಅದರ
ಹಿಂದೆ ಕೆಲಕಾಲ
ಮತ್ತೆ ಹೊಸ ಆಸೆ
ಚಿಗುರುವವರೆಗೆ || ೫ ||

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...