Monday, March 21, 2016

ಹರಕೆ ಕುರಿ

ಹರಕೆ ಕುರಿಗಳಿಗಿರುವಷ್ಟು ಬೇಡಿಕೆ ಮತ್ಯಾವುದಕಿಲ್ಲ ಈ ಕಲಿಗಾಲದಲ್ಲಿ
ಹರಕೆ ಕುರಿಗಳ ಮೇಲೆ ಪ್ರೀತಿ ಎಲ್ಲರಿಗೂ ಆಸೆ ತಮ್ಮದು ಬಲಿ ಇನ್ಯಾರದೋ
ಹೇಳಿ ಇದಕಿಂತ ಒಳ್ಳೆಯದೆನಾದರೂ ಇದ್ದರೆ ಈ ಕಲಿಗಾಲದಲ್ಲಿ || ೧ ||

ಹರಕೆ ಕುರಿ  ಬೇಡುವುದಿಲ್ಲ ಬಂಡೇಳುವುದಿಲ್ಲ ಅದಕೆ ತನ್ನದೆಂಬ ಜೀವನವೂ ಇಲ್ಲ
ಹರಕೆ ಕುರಿ ಬದುಕಿದರೆ ಎಷ್ಟು ಸತ್ತರೆ ಎಷ್ಟು ಸಾಯುವುದಂತೂ ಇದ್ದೇ ಇದೆ
ಬದುಕಿದರೆ ಕೊಲ್ಲಬಹುದು ಆಸೆ ನೆರವೇರಿದ ಮೇಲೆ
ಸತ್ತರೆ ಸಾಯಲಿ ಬಿಡಿ ಹುಡುಕುವ ಇನ್ನೊಂದು ಹರಕೆ ಕುರಿ || ೨ ||

ಹರಕೆ ಕುರಿ ಏನಾದರೂ ಧ್ವನಿ ಎತ್ತಿದರೆ ಎಲ್ಲರಿಗೂ ಕೆಂಡದಂಥ ಕೋಪ
ಹರಕೆ ಕುರಿ ಧ್ವನಿ ಎತ್ತುವುದು ಎಂದರೇನು ಘೋರ ಕಲಿಗಾಲವಿದು
ಸುಮ್ಮನಿದ್ದು ಕುತ್ತಿಗೆ ಕೊಯ್ಯಿಸಿಕೊಳ್ಳಬೇಕಾದ ಹರಕೆ ಕುರಿಗೆ ಇಂದೆಂತಹ
ಕೆಟ್ಟ ಬುದ್ದಿ ಎಂದು ಬೇಸರಿಸಿಕೊಳ್ಳುವರೆ ಎಲ್ಲರೂ || ೩ ||

ಹರಕೆ ಕುರಿಗಳು ಸುಮ್ಮನಿರಬೇಕು ಕೊಟ್ಟರೆ ತಿನಬೇಕು  ಕೊಟ್ಟಿದ್ದು ತಿನಬೇಕು
ಏನು ಬೇಡುವಂತಿಲ್ಲ ಹಸಿವಾದರೂ ಧ್ವನಿ ಎತ್ತುವಂತಿಲ್ಲ || ೪ ||

ಹರಕೆ ಕುರಿಗಳು ಅಲಂಕರಿಸಿದರೆ ಅಲಂಕರಿಸಿಕೊಳ್ಳಬೇಕು ಇಲ್ಲವಾದರೆ
ಸುಮ್ಮನೆ ಕೊಳಕು ಕೊಟ್ಟಿಗೆಯಲ್ಲಿ ಬಿದ್ದಿರಬೇಕು ಎದ್ದು ಧ್ವನಿ ಎತ್ತುವಂತಿಲ್ಲ || ೪ ||

ಹರಕೆ ಕುರಿಗಳು ತೋಳಗಳು ಅವುಗಳಿಗಾಗಿಯೇ ಮಾಡಿದ
ನ್ಯಾಯದ ವ್ಯವಸ್ಥೆಗೆ  ತಲೆ ಬಾಗಬೇಕು  ತಲೆ ಎತ್ತಿ ಧ್ವನಿ ಎತ್ತುವಂತಿಲ್ಲ || ೫ ||

ಹರಕೆ ಕುರಿಗಳು ಕೆಲಸವಿಲ್ಲದಿದ್ದರೋ ಸುಮ್ಮನೆ ಕೂಡುವಂತಿಲ್ಲ
ಹೇಳಿದ್ದು ಮಾಡತಿರಬೇಕು ಏನು ಹೇಳಿದರೂ  ಧ್ವನಿ ಎತ್ತುವಂತಿಲ್ಲ || ೬ ||

ಹರಕೆ ಕುರಿಗಳು ಮೈ ಬಾಗಿ ಎಲ್ಲರನೂ ಗೌರವಿಸಬೇಕು
ತನ್ನ ಸ್ವಾಭಿಮಾನವ ಕಡಿವ ಕಟುಕ ಬಂದರೂ  ಧ್ವನಿ ಎತ್ತುವಂತಿಲ್ಲ || ೭ ||

ಹರಕೆ ಕುರಿಗಳು ಸುತ್ತಮುತ್ತಲಿನವರು ಹೇಳಿದ್ದು ಕೇಳಬೇಕು ಅವರ ಆಸೆಯೇ
ತನ್ನಾಸೆಯಂತೆ ಮೈ ಮುರಿದು ದುಡಿಯಬೇಕು ತನ್ನಾಸೆಗೆ ಧ್ವನಿ ಎತ್ತುವಂತಿಲ್ಲ || ೮ ||

ಹರಕೆ ಕುರಿಗಳು ನಾನು ಇನ್ನೊಂದು ದಿನ ಜೀವಸಬೇಕು ಎಂದು ಆಸೆ ಪಡುವಂತಿಲ್ಲ
ಬಲಿ ಕೊಡುವ ದಿನ ಸುಮ್ಮನೆ ಗೋಣು ಒಡ್ಡಬೇಕು  ಧ್ವನಿ ಎತ್ತುವಂತಿಲ್ಲ || ೯ ||

ಹರಕೆ ಕುರಿಗಳು ಸತ್ತವರಂತೆ ಬಾಳಬೇಕು ಬದುಕಿರುವಷ್ಟು ಕಾಲ, ಸಾವನ್ನು ಅಪ್ಪಿಕೊಳ್ಳಬೇಕು
ಆ ದಿನಕಾಗಿಯೆ ಕಾದಿರುವೆ ಎಂಬ ಸಂಭ್ರಮದಲಿ ಧ್ವನಿ ಎತ್ತುವಂತಿಲ್ಲ || ೧೦ ||

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...