Saturday, August 27, 2016

ಕಾಲದ ಛಾಯಾಚಿತ್ರ

ಆ ಬೀದಿ ಏಕೋ
ಭಾಸವಾಯಿತು
ಕಾಲದ ಛಾಯಾಚಿತ್ರದಂತೆ
ಭೂತ ವರ್ತಮಾನ ಭವಿಷ್ಯಗಳು
ಒಂದೇ ಕಂಡೆ ನಿಂತು
ಚಿತ್ರಕ್ಕೆ ಭಂಗಿ ಕೊಟ್ಟಂತೆ || ೧ ||

ಆ ಬೀದಿಯ ಎರಡೂ ಬದಿ
ಕಿಕ್ಕಿರಿದು
ತುಂಬಿತ್ತು ಕಟ್ಟಡಗಳಿಂದ
ಒಂದು ಭಾವನೆ ಕೂಡ
ಹಾದು ಹೋಗಲು
ಜಾಗವಿಲ್ಲದಂತೆ || ೨ ||


ಕೆಲ ಕಟ್ಟಡಗಳು ಜನರಿಂದ
ತುಂಬಿ ತುಳುಕಿ  ಮಕ್ಕಳ
ಕಿಲ ಕಿಲ ನಗುವಿಂದ ಕೂಡಿ
ನಂದ ಗೋಕುಲವ
ನೆನಪಿಸುವ
ಅರಮನೆಯಂತಿದ್ದವು || ೩ ||

ಇನ್ನೂ ಕೆಲ ಕಟ್ಟಡಗಳು
ಯಾರೂ ವಾಸವಿಲ್ಲದೆ
ಬೀದಿಯ ಹಾದಿಹೋಕರನ್ನು
ದೈನ್ಯದ ಕಣ್ಣಿಂದ ನೋಡುವ
ಅನಾಥರಂತಿದ್ದವು || ೩ ||

ಇನ್ನೂ ಕೆಲ ಕಟ್ಟಡಗಳು
ವಾರಸುದಾರರಿಂದ  ತ್ಯಕ್ತವಾಗಿ
ವರುಷ ವರುಷಗಳೇ ಕಳೆದು
ದೆವ್ವಗಳ ವಾಸಸ್ಥಾನದಂತೆ
ಭೀಕರವಾಗಿದ್ದವು || ೪ ||

ಇನ್ನೂ ಕೆಲ ಕಟ್ಟಡಗಳು
ಹಳೆಯದನ್ನು ಬಿಡಲಾಗದೆ
ಹೊಸದಕ್ಕೆ ತೆರೆದುಕೊಳ್ಳದೇ
ಕಾಲದ ಗೆದ್ದಲಿಗೆ ನಲುಗಿ
ಹಂತ ಹಂತವಾಗಿ ಅವಸಾನದತ್ತ
ಸಾಗಿದ್ದವು || ೫ ||

ಇನ್ನೂ ಕೆಲ ಕಟ್ಟಡಗಳು
ಹಳೆಯ ಗೋಡೆಗೆ ಹೊಸ ಬಣ್ಣ
ಅಲಂಕಾರದ ತೇಪೆ
ಹಾಕಿಕೊಂಡು ಹೊಸದರಲ್ಲಿ
ಒಂದಾಗಲು ಪ್ರಯತ್ನಿಸಿ ಸೋತು
ಸುಣ್ಣವಾಗಿದ್ದವು || ೬ ||

ಇನ್ನೂ ಕೆಲ ಕಟ್ಟಡಗಳು
ಹಳೇ ಕಟ್ಟಡಗಳ ಸಮಾಧಿ
ಮೇಲೆ ತಲೆ ಎತ್ತಿ ನಿಂತು
ತಮಗೆ ಯಾರು ಸರಿ
ಎಂದು ದರ್ಪದಿಂದ
ಬೀಗಿದ್ದವು || ೭ ||

ಕೊನೆ ಕಟ್ಟಡ ಮಾತ್ರ
ಅದೆಷ್ಟೋ ಕತೆಗಳನ್ನು
ತನ್ನಲ್ಲಿ ಹುದುಗಿಸಿಕೊಂಡು
ಕಾಲದ ಛಾಯಾಚಿತ್ರ ಕ್ಲಿಕ್ಕಿಸುತ್ತಾ
ಅದರಲ್ಲಿ ತನ್ನನ್ನು ತಾನೇ ಕಂಡು
ಅಚ್ಚರಿಗೊಂಡಿತ್ತು || ೮ ||

2 comments:

  1. ಉತ್ತಮ ನಿರೂಪಣೆಯ ಇಷ್ಟವಾಗುವ ಕವಿತೆ.

    ReplyDelete
  2. ಧನ್ಯವಾದಗಳು. ಮನೆಯ ಹತ್ತಿರದ ಬೀದಿಯಲ್ಲಿ ನಡೆದು ಹೋಗುವಾಗ ಹೊಳೆದದ್ದು.

    ReplyDelete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...