Friday, December 2, 2016

ಏಕತಾರಿ

















ಅಂತರಾಳದ ಕೂಗು ಕೇಳುವುದು
ನಿಂತು ವರುಷಗಳೇ ಕಳೆದಿತ್ತು
ತಲೆ ಚಿಟ್ಟು ಹಿಡಿದಿತ್ತು
ಕೊರೆದೆ ತಲೆಗೆ ರಂಧ್ರವೊಂದು
ನೆಟ್ಟೆ ಅದರಲಿ ಕೋಲನೊಂದು
ಎಳೆದು ಬೀಗಿದೆ ಕೋಲಿಗೆ
ಮನವನೆ  ಏಕತಾರಿಯಂತೆ || ೧ ||

ಮೀಟಿದರೆ ಶಬ್ದವಿಲ್ಲ
ಸ್ವರದ ಕುರುಹಿಲ್ಲಾ
ಜಡದಿಂದ ಜಿಡ್ಡುಗಟ್ಟಿದೆ ಪದಪದರು
ಮನದ ತಂತಿಯಲಿ
ಆದರೂ ಹಠ ಬಿಡಲಿಲ್ಲ
ಮೀಟುತ್ತ ಹೋದೆ || ೨ ||

ಮೀಟಿದ ಕಂಪನಕೆ
ಅನುದಿನದ ಸುಖ ದುಃಖ
ಅದು ಬೇಕು ಇದು ಬೇಕು
ಅದಾಗಬೇಕು ಇದಾಗಬೇಕೆಂಬ
ಹೊರಪದರು ಮನದ ತಂತಿಯಿಂದ
ಜಿಗಿ ಜಿಗಿದು ಉದರಿದವು ಒಣಗಿದ
ಹೂವಿನ ಪಕಳೆಯಂತೆ || ೩ ||

ಕೇಳಿತು ಕ್ಷೀಣ ಧ್ವನಿಯೊಂದು
ಮೀಟುವ ವೇಗ ಬಲ ಹೆಚ್ಚಿಸಿದೆ
ಹಳೇ ನೆನಪು ಹೊಸ ಕನಸು
ಒಂದೊಂದೇ ಹೊರಬಂದು
ಸೋಲಲೊಪ್ಪದ ವೀರರಂತೆ
ಹೋರಾಡಿ ಮಡಿದವು
ಅಲ್ಲಿಗೆ ಕಳಚಿತು
ಪದರ ಮತ್ತೊಂದು || ೩ ||

ಏಕತಾರಿಯ ಝೇಂಕಾರ ಕೇಳುತಿತ್ತು
ಸ್ವರವಿರಲಿಲ್ಲ ಅದರಲಿ ಇಷ್ಟಾದರೂ
ನಾನದು ನಾನೀದು ಎಂಬ
ಭ್ರಮೆ ಬಿಟ್ಟಿರಲಿಲ್ಲ
ಮೀಟುವುದು ನಿಲ್ಲಿಸಿರಲಿಲ್ಲ
ಅಹಂಕಾರದ ಜಿಡ್ಡು
ಹನಿ ಹನಿಯಾಗಿ ಕರಗಿತ್ತು
ಮನದ ತಂತಿ ಈಗ
ಶುಭ್ರವಾಗಿ ಹೊಳೆದಿತ್ತು|| ೪ ||

ಸ್ವರ ಮೂಡುತಿತ್ತು
ಲಯವಿನ್ನೂ ಕಂಡಿಲ್ಲ
ಮೀಟುತ್ತಲೇ ಇರುವೆ ನಾ
ಮನದ ಏಕತಾರಿ
ಹುಡುಕುತ ಅಂತರಾಳದ
ಆ  ಸ್ವರಕಾಗಿ || ೫ ||
ಬುಡ ಬುಡ್ಕಿ ಬಾಬಾ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...