Saturday, June 17, 2017

ಬುದ್ಧಿ ಮಾತು

ಪ್ರತಿ ಓದಿದ ಕೇಳಿದ ಬುದ್ಧಿ ಮಾತು
ಬೆಲೆ ಕಟ್ಟಲಾಗದ ವಜ್ರವೇನೋ
ಎಂಬಂತೆ ಅವನ್ನು ಅಷ್ಟಿಷ್ಟು
ಅಳವಡಿಸಿಕೊಳ್ಳಲು ಯತ್ನಿಸಿ
ಕೆಲವೊಮ್ಮೆ ಭೇಷ ಅನಿಸಿಕೊಂಡು
ಕೆಲವೊಮ್ಮೆ ಕ್ಷಮಿಸಿ ಏನೆಂದು ಕೇಳಬೇಡಿ
ಒಟ್ಟು ಹೇಳಲಾಗದ್ದನ್ನು ಅನಿಸಿಕೊಂಡು
ಅದೆಷ್ಟೋ ವರ್ಷಗಳು ಕಳೆದು ಹೋದವು || ೧ ||

ಬೆಳೆದಂತೆ ತಿಳಿಯಿತು
ಬುದ್ಧಿ ಮಾತುಗಳಿಗೇನು ಕಮ್ಮಿಯಿಲ್ಲ
ತರಕಾರಿ ಮಾರುಕಟ್ಟೆಯ ಕಾಯಿ ಪಲ್ಯದಂತೆ
ಸಿಗುತ್ತವೆ ಅವೆಲ್ಲ ಕಡೆ ಎಂದು
ಸಿಕ್ಕಿದೆ ಎಂದು ಸಿಕ್ಕದ್ದನು ತಿಂದರೇ
ಜೀರ್ಣಿಸಿಕೊಳ್ಳಲಾಗದು ಎಂದು
ಅರಿಯುವುದು  ಸುಲಭವಾಗಿರಲಿಲ್ಲ || ೨ ||

ಬರೀ ಬುದ್ಧಿ ಮಾತು ಹೇಳುವರು ಹಲವರು
ಆದರೆ ಪ್ರತಿ ಬುದ್ಧಿ ಮಾತು ಬರೀ ದಾರದ ನೂಲು
ಅದಲ್ಲ ಚಳಿಗಾಲಕೆ  ನಡುಗುತಿರುವ
ಜೀವಕ್ಕೆ ಬೇಕಾದ ಬೆಚ್ಚನೆ ಬಟ್ಟೆ
ನೂಲಿಲ್ಲದೆ ಬಟ್ಟೆ ಇಲ್ಲ ಸರಿ ಆದರೆ
ಬರೀ ನೂಲೆ ಬಟ್ಟೆ ಅಲ್ಲ
ಸಿಕ್ಕ ನೂಲನ್ನು ಆರಿಸಿ ಸರಿಯಾಗಿ ಜೋಡಿಸಿ
ಜೀವನ ಮಗ್ಗದಲಿ ಎಳೆದು ಎಳೆದು ಗಟ್ಟಿ ಮಾಡಿ
ಬೆಚ್ಚನೆ ಬಟ್ಟೆ ಮಾಡುವುದು
ಹೇಳಿ ಕೊಡುವರು ಯಾರು? || ೩ ||

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...